ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆಯಿಂದ ಉತ್ಖನನ ನಡೆದಿದ್ದು, ಎರಡನೇ ದಿನ ಮುಂದುವರೆದ ಉತ್ಖನನದಲ್ಲಿ ಮಹತ್ವದ ಅವಶೇಷಗಳು ಪತ್ತೆಯಾಗಿವೆ.
ಲಕ್ಕುಂಡಿಯ ಐತಿಹಾಸಿಕ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದ ಎರಡನೇ ದಿನ ಶಿವಲಿಂಗದ ಪಾಣಿಪೀಠದ ಮಾದರಿಯ ಪ್ರಾಚೀನ ಆಕೃತಿಗಳು ಪತ್ತೆಯಾಗಿದೆ. ಇದು ಶೈವ ಸಂಸ್ಕೃತಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ಕುರುಹು ಎಂದು ಪುರಾತತ್ವ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಪುರಾತತ್ವ ಇಲಾಖೆಯ ವತಿಯಿಂದ ಹಂತ ಹಂತವಾಗಿ ಉತ್ಖನನ ಕಾರ್ಯ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಎರಡನೇ ದಿನದ ಉತ್ಖನನ ಕಾರ್ಯವನ್ನು ಸುಮಾರು 10 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ ಕೈಗೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಲಕ್ಕುಂಡಿಯಲ್ಲಿ ಪ್ರಾಮಾಣಿಕತೆ ಮೆರೆದ ಬಡ ಕುಟುಂಬ: ನಿಧಿ ಒಪ್ಪಿಸಿದವರಿಗೆ ನೆರವಾಗುವುದೇ ಸರ್ಕಾರ?
ಮೊದಲ ದಿನ ಉತ್ಖನನ ತಂಡವು ಸುಮಾರು ನಾಲ್ಕು ಇಂಚಿನಷ್ಟು ಆಳಕ್ಕೆ ತೋಡಿ ಪರಿಶೀಲನೆ ನಡೆಸಿದ್ದು, ಎರಡನೇ ದಿನದಿಂದ ಇನ್ನಷ್ಟು ಆಳವಾಗಿ ಹಾಗೂ ವೈಜ್ಞಾನಿಕ ವಿಧಾನದಲ್ಲಿ ಉತ್ಖನನ ಮುಂದುವರಿಸಲಾಗಿದೆ. ಪುರಾತತ್ವ ಇಲಾಖೆಯ ಮಾಹಿತಿ ಪ್ರಕಾರ, ಈ ಉತ್ಖನನ ಕಾರ್ಯವು ಸುಮಾರು ಎರಡು ತಿಂಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ.





