ಎಲ್ಲ ಜ್ಞಾನಗಳ ಮೂಲ ಜಾನಪದ ಸಾಹಿತ್ಯವಾಗಿದೆ. ಜಾನಪದ ಸಾಹಿತ್ಯ ನಮ್ಮ ಬದುಕಿನ ಪ್ರತಿ ಹಂತದಲ್ಲು ಮಾರ್ಗದರ್ಶಿಯಾಗಿ ನಿಂತಿದೆ. ನಿರಕ್ಷರಿಗಳಾದ ಜನಪದರು ಕಾವ್ಯವನ್ನು ರಚಿಸುವ ಸೃಜನಶೀಲ ಗುಣವನ್ನು ಹೊಂದಿದ್ದರು ಎಂದು ಡಾ.ರಾಜಶೇಖರ ದಾನರಡ್ಡಿ ಹೇಳಿದ್ದಾರೆ.
ಗದಗದಲ್ಲಿರುವ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ನಡೆದ ‘ಜಾನಪದ ಸಾಹಿತ್ಯ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಭತ್ತ, ರಾಗಿಯನ್ನು ಕುಟ್ಟುವಾಗ, ಬೀಸುವಾಗ ಮತ್ತು ಹಂತಿ ಹೊಡೆಯುವಾಗ ದೇಹದ ದಣಿವನ್ನು ನೀಗಿಸಿಕೊಳ್ಳಲು ಹಳ್ಳಿಯ ಜನ ಜನಪದ ಹಾಡುಗಳನ್ನು ತ್ರಿಪದಿ ಹಾಗೂ ಪ್ರಾಸ ರೂಪದಲ್ಲಿ ರಚಿಸುತ್ತಿದ್ದರು. ಅವು ಬಾಯಿಂದ ಬಾಯಿಗೆ ಪರಂಪರಾಗತವಾಗಿ ಮುಂದುವರೆದುಕೊಂಡು ಬಂದವು. ಇಂದಿನ ಆಧುನಿಕ ಬದುಕು ಕೇವಲ ಮೊಬೈಲ್ ಬಳಕೆಗೆ ಸೀಮಿತವಾಗಿರುವುದು ದುರಾದೃಷ್ಟಕರ ಸಂಗತಿ” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಕಲ್ಲಯ್ಯ ಹಿರೇಮಠ, “ಸಂಶೋಧಕ ಒಬ್ಬ ಸೃಜನಶೀಲ ಲೇಖಕ ಹಾಗೂ ವಿಮರ್ಶಕನಾಗಿರಬೇಕು. ತಾಳ್ಮೆ, ಸಹನೆ, ಸಮಯಪ್ರಜ್ಞೆ ಮತ್ತು ಕ್ಷೇತ್ರಕಾರ್ಯದ ಜ್ಞಾನ ಹೊಂದಿರಬೇಕು. ಸತ್ಯ ಶೋಧನೆ ಸಂಶೋಧಕನ ಮುಖ್ಯ ಗುಣವಾಗಿರಬೇಕು. ಸಂಶೋಧನೆ ಕಾರಣದಿಂದ ಜಗತ್ತಿನ ಕೆಲವು ರಾಷ್ಟ್ರಗಳು ಚಂದ್ರಯಾನದಂತಹ ಕಾರ್ಯಗಳಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಡಾ.ಅಂದಯ್ಯ ಅರವಟಗಿಮಠ, ಪ್ರೊ. ಜಿ ವಿಶ್ವನಾಥ, ಡಾ. ನಾಗರಾಜ ಬಳಿಗೇರ, ಪ್ರೊ. ಶಂಭು ತಮ್ಮನಗೌಡ್ರ, ಸುಶ್ಮೀತಾ ಪೂಜಾರ ಸೇರಿದಂತೆ ಹಲವಾರು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.




