“ಭಾರತ ವಿದ್ಯಾರ್ಥಿ ಪಡರೇಶನ್ (ಎಸ್ಎಫ್ಐ) ಸಂಘಟನೆಗೆ 56 ವರ್ಷಗಳು ತುಂಬಿವೆ. ಕಳೆದ 56 ವರ್ಷಗಳಿಂದ ಯಾವುದೇ ರಾಜಿ ಇಲ್ಲದೆ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ತುಂಬಿದೆ. ಎಸ್ಎಫ್ಐ ಸಂಘಟನಾತ್ಮಕ ಹೋರಾಟವನ್ನು ರೂಪಿಸುತ್ತಾ ಅನೇಕ ಸಂಘರ್ಷಾತ್ಮಕ ಹೋರಾಟಗಳನ್ನು ಮಾಡಿ ಇತಿಹಾಸವನ್ನು ನಿರ್ಮಿಸಿದೆ” ಎಂದು ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರು ತಿಳಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ) ಸಂಘಟನೆಯ ಸಂಸ್ಥಾಪನಾ ದಿನದ ಅಂಗವಾಗಿ ಕಳೆದ ಮೂರ ದಿನದಿಂದ ಗಜೇಂದ್ರಗಡ ತಾಲೂಕಿನ ವಿವಿಧ ಶಾಲಾ, ಕಾಲೇಜು, ಹಾಸ್ಟೆಲ್ಗಳಲ್ಲಿ ಆಚರಣೆ ಮಾಡಲಾಗಿದ್ದು, ಎಸ್ಎಫ್ಐ ಕಚೇರಿ ಎದುರು ಶ್ವೇತ ಪತಾಕೆಯನ್ನು ಹಾರಿಸುವ ಮೂಲಕ ಸಂಸ್ಥಾಪನಾ ದಿನವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರು ಗಣೇಶ್ ರಾಠೋಡ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ಸ್ವಾತಂತ್ರ್ಯ ಚಳುವಳಿಯಲ್ಲೂ ಕೂಡಾ ವಿದ್ಯಾರ್ಥಿಗಳು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅನೇಕ ಜನ ಸ್ವಾತಂತ್ರ ಹೋರಾಟದ ನಾಯಕರು ಅವರು ವಿದ್ಯಾರ್ಥಿಗಳಿದ್ದಾಗಲೇ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದಾರೆ. ಈ ದೇಶಕ್ಕೆ ಸ್ವಾತಂತ್ರ್ಯ ಬರುವವರಿಗೂ ಅನೇಕ ಜನ ತ್ಯಾಗ ಬಲಿದಾನಗಳನ್ನ ಮಾಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ. ಅಂತಹ ನಾಯಕರಲ್ಲಿ ಭಗತ್ ಸಿಂಗ್ ನಮಗೆಲ್ಲಾ ಆದರ್ಶವಾಗಿ ಕಾಣುತ್ತಾರೆ. ಅವರ ಆಶಯ ಮತ್ತು ಕನಸಿನ ಭಾರತವನ್ನು ಕಟ್ಟಲಿಕ್ಕೆ ಭಾರತ ವಿದ್ಯಾರ್ಥಿ ಪಡರೇಶನ್ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ” ಎಂದರು.
“ಇಂದು ಜಾಗತಿಕ ವ್ಯಾಪಾರಿಕರಣ, ಖಾಸಗೀಕರಣಗಳ ಜೊತೆಗೆ ನವ ಉದಾರೀಕರಣ ಜಗತ್ತನ್ನ ತಲ್ಲಣ ಗೊಳಿಸುತ್ತಿದೆ. ಈ ಹೊತ್ತಿನಲ್ಲಿ ವಿದ್ಯಾರ್ಥಿ ಸಮುದಾಯ ಸಾರ್ವಜನಿಕ ವ್ಯವಸ್ಥೆಯನ್ನು ಉಳಿಸಿಕೊಂಡು ಸಾರ್ವತ್ರಿಕ ಶಿಕ್ಷಣವನ್ನು ಉಳಿಸಿಕೊಳ್ಳುವುದು ಈ ಕಾಲದ ತೀರ ಅಗತ್ಯವಿದೆ. ಆ ನೆಲಗಟ್ಟಿನಲ್ಲಿ ವಿದ್ಯಾರ್ಥಿಗಳು ಯೋಚಿಸಬೇಕು. ಎಲ್ಲರಿಗೂ ಎಸ್ ಎಫ್ ಐ ಸಂಸ್ಥಾಪನಾ ದಿನಾಚರಣೆ ಶುಭಾಶಯ” ಎಂದು ಶುಭ ಹಾರೈಸಿದರು.
ನಿಲಯ ಪಾಲಕರು ಮಾಂತೇಶ್ ಗೋಡಿ ಮಾತನಾಡಿ, “ನಾನು ವಿದ್ಯಾರ್ಥಿಯಾಗಿದ್ದಾಗ ಎಸ್ಎಫ್ಐ ಚಳುವಳಿಯ ಮೂಲಕವೇ ಅನೇಕ ಹೋರಾಟಗಳನ್ನ ಮಾಡಿದ್ದೆವು. ನಾನು ಕೂಡ ಈ ಚಳುವಳಿಯಲ್ಲಿ ಭಾಗವಹಿಸಿದ್ದೆ. ಅದರ ಪರಿಣಾಮವಾಗಿ ಹೆಚ್ಚು ಅಭ್ಯಾಸ ಮಾಡಲು ಸಾಧ್ಯವಾಯಿತು. ನನ್ನ ಜೀವನ ರೂಪಿಸಿಕೊಳ್ಳಲು ಚಳುವಳಿಯೂ ಕೂಡ ಸಹಕಾರಿಯಾಯಿತು. ಆ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ರೂಪಿಸುವುದು ಅಷ್ಟೇ ಅಲ್ಲದೆ ಹೆಚ್ಚು ಅಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು” ಎಂದು ಹೇಳಿದರು.
ಎಸ್ ಎಫ್ ಐ ನ ಜಿಲ್ಲಾಧ್ಯಕ್ಷರಾದ ಚಂದ್ರು ರಾಠೋಡ್ ಮಾತನಾಡಿ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ ವಿದ್ಯಾರ್ಥಿಗಳು ಅನೇಕ ಹೋರಾಟಗಳನ್ನು ಮಾಡಿ ತಮ್ಮ ಬೇಡಿಕೆಗಳನ್ನ ಈಡೇರಿಸಿಕೊಳ್ಳಲು ಸಾಧ್ಯ ಆಗಿದೆ. ಕಳೆದ ಎರಡು ವರ್ಷಗಳಲ್ಲಿ ಗಜೇಂದ್ರಗಡ ನಗರಕ್ಕೆ ಮೆಟ್ರಿಕ್ ನಂತರದ ಬಾಲಕರ ಮೂರು ವಸತಿ ನಿಲಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಹಾಗೆ ಮೆಟ್ರಿಕ್ ನಂತರದ ಬಾಲಕಿಯರಿಗೆ ವಸತಿ ನಿಲಯ ಕಟ್ಟಡವನ್ನು ನಿರ್ಮಾಣ ಮಾಡಿಸಲು ಸಾಧ್ಯವಾಗಿದೆ. ಜೊತೆಗೆ ಅನೇಕ ಶಾಲಾ-ಕಾಲೇಜು ಹಾಸ್ಟೆಲ್ಗಳಿಗೆ ಮೂಲಭೂತ ಸೌಕರ್ಯಗಳಿಗಾಗಿ ನಿರಂತರ ಹೋರಾಟಗಳು ನಡೆದಿವೆ” ಎಂದು ಹೇಳಿದರು.
ಗಜೇಂದ್ರಗಡ ತಾಲೂಕು ಅಧ್ಯಕ್ಷರು ಅನಿಲ್ ಆರ್, ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯರು ಶರಣು ಮಾಟರಂಗಿ ನಿಲಯಪಾಲಕರು ಹಣಮಂತ, ಶ್ರೀದೇವಿ ಗಡಾದ ಮತ್ತು ಲಕ್ಷ್ಮೀ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ಎಫ್ ಐ ನ ಮುಖಂಡರಾದ ಗುರು, ರಾಹುಲ್, ಮಂಜುಳಾ, ಅಶ್ವಿನಿ, ಜ್ಯೋತಿ, ರಾಧಾ, ಸಂಗೀತಾ, ಕುಮಾರ, ವಿದ್ಯಾ, ಅರುಣ, ಸಿದ್ದಪ್ಪ ಹಾಗೂ ನೂರಾರು ವಿದ್ಯಾರ್ಥಿಗಳ ಭಾಗವಹಿಸಿದ್ದರು.





