“ಬಡಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದೇ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಉದ್ದೇಶವಾಗಿದೆ” ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ ತಿಳಿಸಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನವು ಬಡಜನರ ಸೇವೆಗೆ ಒದಗಿಸಿದ ಬಹುದೊಡ್ಡ ಅವಕಾಶವಾಗಿದೆ. ಪಂಚ ಗ್ಯಾರಂಟಿ ಯೋಜನೆಯ ಮಹತ್ವವನ್ನು ಅರ್ಥೈಸಿಕೊಂಡು ಅವುಗಳ ಸಂಪೂರ್ಣ ಅನುಷ್ಟಾನಕ್ಕಾಗಿ ಸಂಬಂಧಿತ ಅಧಿಕಾರಿಗಳು ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ತಲುಪಿಸುವಲ್ಲಿ ವಿನಾಕಾರಣ ವಿಳಂಬವಾಗಬಾರದು. ಸಾರ್ವಜನಿಕರ ಸುರಕ್ಷತೆಗಾಗಿ ಗದಗ ಹೊಸ ಬಸ್ ನಿಲ್ದಾಣದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿದ್ದು ಅವುಗಳು ವ್ಯವಸ್ಥಿತವಾಗಿರುವ ಕುರಿತು ತಪಾಸಣೆ ನಡೆಸಬೇಕು” ಎಂದು ತಿಳಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಮಾತನಾಡಿ, “ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಮಹಿಳೆಯರಿಗೆ ಆಸನದ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಬಸ್ ನಿಲ್ದಾಣಗಳ ಸ್ವಚ್ಛತೆ ಮುಖ್ಯವಾಗಿದ್ದು, ಬಸ್ ನಿಲ್ದಾಣದ ಆವರಣ ಸ್ವಚ್ಛವಾಗಿರುವಂತೆ ಹಾಗೂ ಅಲ್ಲಿ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು. ಅಲ್ಲಿನ ಶೌಚಾಲಯಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು” ಎಂದರು.
ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಸದಸ್ಯರು ಅಶೋಕ ಮಂದಾಲಿ ಮಾತನಾಡಿ, “ಬಡಜನರ ಹಸಿವು ನೀಗಿಸುವಲ್ಲಿ ಅನ್ನಭಾಗ್ಯ ಯೋಜನೆಯ ಪಾತ್ರ ಮಹತ್ವದ್ದಾಗಿದೆ. ಅನ್ನಭಾಗ್ಯ ಯೋಜನೆಯ ಅಕ್ಕಿಯು ಕಳ್ಳಸಂತೆಯಲ್ಲಿ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಯೋಜನೆಯ ಸೌಲಭ್ಯ ದುರುಪಯೋಗವಾಗದಂತೆ ಶಿಸ್ತಿನ ಕ್ರಮ ವಹಿಸಬೇಕು” ಎಂದು ಸೂಚಿಸಿದರು.
ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಪಿ.ಬಿ.ಅಳಗವಾಡಿ ಮಾತನಾಡಿ, “ಪಡಿತರ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಸಮರ್ಪಕ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಣೆಯಾಗುತ್ತಿರುವ ಕುರಿತು ಸಂಬಂಧಿತ ಇಲಾಖೆಯ ಅಧಿಕಾರಿಗಳು ತಪಾಸಣೆ ನಡೆಸಬೇಕು” ಎಂದರು.
ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಅಧಿಕಾರಿಗಳು ಸಭೆಗೆ ಮಾಹಿತಿ
ಗೃಹಲಕ್ಷ್ಮಿ ಯೋಜನೆಯಡಿ ಡಿಸೆಂಬರ್ 2025 ರವರೆಗೆ 249353 ನೋಂದಣಿಯಾದ ಅರ್ಜಿಗಳ ಪೈಕಿ 249353 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ವಾಕರಸಾಸಂಸ್ಥೆಯಿAದ ದಿ: 11-6-2023 ರಿಂದ 4-1-2026 ರವರೆಗೆ 13.75 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 460.32 ಕೋಟಿ ರೂ ಆದಾಯವಾಗಿದೆ.
ಅನ್ನಭಾಗ್ಯ ಯೋಜನೆಯಡಿ ಫೆಬ್ರುವರಿ 2025 ರಿಂದ ಡಿಸೆಂಬರ್ 2025 ರವರೆಗೆ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ ಜಿ ಆಹಾರ ಧಾನ್ಯಗಳ ಹಂಚಿಕೆಯಡಿ ಜಿಲ್ಲೆಯಲ್ಲಿ 4,33,927 ಕ್ವಿಂಟಾಲ್ ಅಕ್ಕಿ ಹಂಚಿಕೆಯಾಗಿದೆ.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಜನೆವರಿ 2024 ರಿಂದ ಸೆಪ್ಟೆಂಬರ್ 2025 ರವರೆಗೆ 6356 ಅರ್ಜಿ ಸ್ವೀಕೃತವಾಗಿರುತ್ತವೆ. ಆ ಪೈಕಿ 4048 ಅರ್ಹ ಫಲಾನುಭವಿಗಳಿಗೆ ಡಿ.ಬಿ.ಟಿ ಮೂಲಕ ಹಣ ವರ್ಗಾವಣೆಯಾಗಿರುತ್ತದೆ. ಬಾಕಿ ಉಳಿದಿರುವ 2308 ಅಭ್ಯರ್ಥಿಗಳು ಯುವನಿಧಿ ಯೋಜನೆಯ ಷರತ್ತುಗಳಿಗೆ ಹಂತ ಹಂತವಾಗಿ ಅರ್ಹರಾಗುತ್ತಾರೆ.
ಗೃಹ ಜ್ಯೋತಿ ಯೋಜನೆಯಡಿ ಒಟ್ಟು 278395 ಸ್ಥಾವರಗಳ ಪೈಕಿ 274242 ಸ್ಥಾವರಗಳು ನೋಂದಣಿಯಾಗಿವೆ.
ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಜಿ.ಪಂ. ಯೋಜನಾ ನಿರ್ದೇಶಕ ಎಂ.ಎಸ್.ಚಳಗೇರಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರು ಫಕ್ರುಸಾಬ ಚಿಕ್ಕಮಣ್ಣೂರ, ಸದಸ್ಯರು ಶರಣಪ್ಪ ಬೆಟಗೇರಿ, ಶರೀಫ್ ಬಿಳಿಯಲಿ, ನಾಗರಾಜ ಶಿವಪ್ಪ ಮಡಿವಾಳರ, ವಿವೇಕ ಯಾವಗಲ್, ದೇವಪ್ಪ ಮೋರನಾಳ, ಪುಲಕೇಶಗೌಡ ಪಾಟೀಲ, ಈಶಣ್ಣ ಹುಣಸೀಕಟ್ಟಿ, ಶ್ರೀಮತಿ ಗೀತಾ ಸುರೇಶ ಬೀರಣ್ಣವರ, ವೀರಯ್ಯ ಮಠಪತಿ, ಆರ್.ಆರ್.ಗಡ್ಡದ್ದೇವರಮಠ, ಗ್ಯಾರಂಟಿ ಯೋಜನೆಗೆ ಸಂಬಂಧಿತ ಇಲಾಖಾ ಅಧಿಕಾರಿಗಳು ಹಾಜರಿದ್ದರು.





