ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದಲ್ಲಿ ಗ್ರಾಮದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದ ಗ್ರಾಮಸ್ಥರನ್ನು ಮನವೊಲಿಸುವಲ್ಲಿ ಅಧಿಕಾರಿಗಳು ಸಫಲರಾಗಿದ್ದಾರೆ.
ಗದಗ ಹಾಗೂ ರೋಣ ತಾಲೂಕು ದಂಡಾಧಿಕಾರಿಗಳು ಹಾಗೂ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ, ಕಾರ್ಯಪಾಲಕ ಅಭಿಯಂತರರ, ಪೊಲೀಸ್ ಇಲಾಖೆಯ ತಂಡವು ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು – ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಸಿದರು.
ಸಾರ್ವಜನಿಕರ ದೂರಿನನ್ವಯ ತಿಮ್ಮಾಪೂರ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಅನುಷ್ಠಾನಗೊಳ್ಳದೆ, ಅನುಷ್ಠಾನಗೊಂಡು ಪೂರ್ಣಗೊಳ್ಳದೆ ಇರುವ ಕಾಮಗಾರಿಗಳಾದ, ತಿಮ್ಮಾಪೂರ ಗ್ರಾಮದಿಂದ ಕೋಟುಮಚಿಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ, ಕಾಣೆಹಳ್ಳಕ್ಕೆ ಮೇಲು ಸೇತುವೆ ನಿರ್ಮಾಣ, ತಿಮ್ಮಾಪೂರ ಗ್ರಾಮದಿಂದ ಸೋಂಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ, ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ, ನೂತನ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ತೆರೆಯುವದು, ಕುಡಿಯುವ ನೀರಿನ ಯೋಜನೆಯಾದ ಜಿಜಿಎಂ ಕಾಮಗಾರಿಯಿಂದ ರಸ್ತೆ ದುರಸ್ತಿ, ನೀರು ಪೂರೈಕೆ ಮಾಡುವುದು ಸೇರಿದಂತೆ,
ಮಹಿಳೆಯರಿಗೆ 2 ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವುದು, ಹರ್ಲಾಪೂರ ಹಾಗೂ ಹಳ್ಳಿಗುಡಿ ರಸ್ತೆ ಡಾಂಬರೀಕರಣ ಮಾಡುವುದು, ರೈತರು ತಮ್ಮ ಕೃಷಿ ಜಮೀನುಗಳಿಗೆ ಹೋಗುವ ದಾರಿಯನ್ನು ದುರಸ್ತಿ ಮಾಡುವ ಬೇಡಿಕೆ ಗ್ರಾಮಸ್ಥರದ್ದು.
ಈ ಸಮಸ್ಯೆ ಕುರಿತಾಗಿ ಸಂಬಂಧಿಸಿದ ಇಲಾಖೆಗಳೊಂದಿಗೆ ಮತ್ತೊಂದು ಸುತ್ತಿನ ತುರ್ತು ಸಭೆ ಆಯೋಜಿಸಿ ಕ್ರಮವಹಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದರು ಹಾಗೂ ಶೀಘ್ರವೇ ಗ್ರಾಮದಲ್ಲಿನ ನೀರು ಹಾಗೂ ನೈರ್ಮಲ್ಯ ಸಂಬಂಧಿತ ಕೆಲಸಗಳನ್ನು ತುರ್ತಾಗಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗುವದು ಎಂದು ಸೂಚಿಸಿದರು.
ನಂತರ ಹಾಜರಿದ್ದ ಗ್ರಾಮಸ್ಥರಿಗೆ ಅಧಿಕಾರಿ ವರ್ಗವು ಕಡ್ಡಾಯವಾಗಿ ಮತದಾನ ಮಾಡುವಂತೆ ತಿಳಿಸುತ್ತಾ, ಪ್ರತಿಜ್ಞಾ ವಿಧಿ ಬೊಧನೆ ಮಾಡಿಸಿ ಸಭೆಯನ್ನು ಮುಕ್ತಾಯಗೊಳಿಸಿದರು.




