“ಬಿಪಿಎಲ್ ದಿಂದ ಎಪಿಎಲ್ ಆಗಿರುವ ಪಡಿತರ ಚೀಟಿಗಳನ್ನು ಬಿಪಿಎಲ್‌ಗೆ ಬದಲಾಯಿಸುವ ಕಾರ್ಯಕ್ಕೆ ಮುಂದಾಗಬೇಕು. ಅರ್ಹ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತಾಗಬೇಕು” ಎಂದು ಗದಗ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಅವರು ತಿಳಿಸಿದರು.
ಗದಗ ನಗರದ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಪಂಚ ಗ್ಯಾರಂಟಿ ಕಚೇರಿಯಲ್ಲಿ ಶನಿವಾರ ಗದಗ ತಾಲೂಕ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಪಡಿತರ ಚೀಟಿ (ರೇಷನ್ ಕಾರ್ಡ) ವಿಶೇಷ ಸಭೆಯಲ್ಲಿ ಮಾತನಾಡಿದರು.
“ಅನ್ನ ಭಾಗ್ಯ ಯೋಜನೆಯು ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾಗಿದ್ದು, ಸಮಾಜದ ಕಟ್ಟಕಡೆಯ ಕುಟುಂಬದ ಹಸಿವು ನೀಗಿಸಲು ಅನ್ನಭಾಗ್ಯ ಯೋಜನೆ ಸಹಕಾರಿಯಾಗಿದೆ. ಈ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿಯೇ ತಲುಪುವಂತಾಗಲು ಸಂಬಂಧಿತ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕೆಲಸ ನಿರ್ವಹಿಸಬೇಕು” ಎಂದರು.
“ಗದಗ ತಾಲೂಕು ಪಂಚ ಗ್ಯಾರಂಟಿ ಸಮಿತಿ ನಿರ್ದೇಶನದ ಮೇರೆಗೆ ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತರಾದವರನ್ನು ಗುರುತಿಸಿ ಪಟ್ಟಿ ಮಾಡಬೇಕು. ಎಎವೈ ( ಅಂತ್ಯೋದಯ ಅನ್ನ ಯೋಜನಾ)/ ಬಿಪಿಎಲ್ ದಿಂದ ಎಪಿಎಲ್‌ಗೆ ಬದಲಾವಣೆಯಾಗಿರುವ ಪಡಿತರ ಚೀಟಿಗಳನ್ನು ಎಎವೈ/ ಬಿಪಿಎಲ್‌ಗೆ ಬದಲಾಯಿಸಬೇಕಾದರೆ ಹೊಸದಾಗಿ ಅರ್ಜಿ ಸಲ್ಲಿಸಬೇಕು” ಎಂದರು.
“ಸಲ್ಲಿಸಬೇಕಾದ ದಾಖಲೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಗ್ರಾಮೀಣ ಭಾಗದಲ್ಲಿ ಪಡಿತರ ಚೀಟಿಗಳ ಮಾಹಿತಿಗಾಗಿ ತಹಶೀಲ್ದಾರ ಕಚೇರಿಯಲ್ಲಿ ಆಹಾರ ವಿಭಾಗವಿದೆ. ಗದಗ ಬೆಟಗೇರಿ ಶಹರದಲ್ಲಿ ಬರುವ ಪಡಿತರ ಚೀಟಿಗಳ ಮಾಹಿತಿಗಾಗಿ ಗದಗ ಬೆಟಗೇರಿ ನಗರದ ನಗರಾಭಿವೃದ್ಧಿ ಕಾರ್ಯಾಲಯದ ಹತ್ತಿರವಿರುವ ಸಹಾಯಕ ನಿರ್ದೇಶಕ ಕಾರ್ಯಾಲಯ ಸಂಪರ್ಕಿಸಬಹುದಾಗಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ಸೌಲಭ್ಯ ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಆದಷ್ಟು ಶೀಘ್ರ ಬಿಪಿಎಲ್ ಪಡಿತರದಾರರಿಗೆ ಎದುರಾಗುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು” ಎಂದು ಅಶೋಕ ಮಂದಾಲಿ ತಿಳಿಸಿದರು.
ಆಹಾರ ಇಲಾಖೆಯ ಅಧಿಕಾರಿಗಳು ಮಾತನಾಡಿ, “ಎನ್.ಎಫ್.ಎಸ್.ಎ (ರಾಷ್ಟೀಯ ಆಹಾರ ಭದ್ರತಾ ಕಾಯಿದೆ )ದಡಿ ಗದಗ ತಾಲೂಕಿನಲ್ಲಿ 1-6-2025 ರವರೆಗೆ (ಎಎವೈ, ಪಿಎಚ್‌ಎಚ್) 2,76,147 ಪಡಿತರ ಚೀಟಿದಾರರಿದ್ದಾರೆ. 1-6-2025 ರಲ್ಲಿ 7441 ಅರ್ಜಿಗಳು ಸ್ವೀಕೃತವಾಗಿದ್ದು ಆ ಪೈಕಿ ,3,787 ಅರ್ಜಿಗಳು ಮಂಜೂರಾಗಿವೆ. 695 ಅರ್ಜಿಗಳು ತಿರಸ್ಕೃತಗೊಂಡಿವೆ. 2,959 ಅರ್ಜಿಗಳು ಬಾಕಿ ಉಳಿದಿವೆ. ಹೊಸದಾಗಿ ಪಡಿತರ ಚೀಟಿ ಹೊಂದಿದೆ. ಜಿಲ್ಲೆಯಲ್ಲಿ 22,284 ಅರ್ಜಿಗಳು ಸ್ವೀಕೃತವಾಗಿದ್ದು ಆ ಪೈಕಿ 12,373 ಅರ್ಜಿಗಳು ಮಂಜೂರಾಗಿವೆ. 3,311 ಅರ್ಜಿಗಳು ತಿರಸ್ಕೃತಗೊಂಡಿದ್ದು , 6,600 ಅರ್ಜಿಗಳು ಬಾಕಿ ಉಳಿದಿವೆ” ಎಂದು ಸಭೆಗೆ ವಿವರಿಸಿದರು.
ಗದಗ ತಾಲೂಕು ಪಂಚ ಗ್ಯಾರಂಟಿ ಸಮಿತಿಯ ಸದಸ್ಯರಾದ ಕೃಷ್ಣಗೌಡ ಪಾಟೀಲ ಮಾತನಾಡಿ, “ಗದಗ ಮತಕ್ಷೇತ್ರದಲ್ಲಿರುವಂತಹ ಬಡತನದಲ್ಲಿರುವ ಕುಟುಂಬದವರನ್ನು ಗುರುತಿಸಿ ಪಟ್ಟಿ ಮಾಡಿ ಅವರಿಗೆ ಬಿಪಿಎಲ್ ಕಾರ್ಡ ಮಂಜೂರು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಬಿಪಿಎಲ್ ಕಾರ್ಡ ಮಂಜೂರಾತಿಗಾಗಿ ಬಾಕಿ ಉಳಿದಿರುವ ಅರ್ಜಿಗಳ ಸೂಕ್ತ ಪರಿಶೀಲನೆ ನಡೆಸಿ ನಿಗದಿತ ಅವಧಿಯಲ್ಲಿಯೇ ವಿಲೇವಾರಿ ಮಾಡಿ ಮಂಜೂರಾತಿಗೆ ಕ್ರಮ ವಹಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಸಾವಿತ್ರಿ ಹೂಗಾರ, ಮಲ್ಲು ಬಾರ್ಕೇಕರ, ಸಂಗಮೇಶ ಕರಕಲಮಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಬಸವರಾಜ ಕಡೆಮನಿ, ಆಹಾರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.





