ಕರ್ನಾಟಕದ ಉತ್ತರ ಭಾಗದ ಗದಗ ಜಿಲ್ಲೆಯಲ್ಲಿ ಪ್ರತಿವರ್ಷ ಬೇಸಿಗೆಯ ಆರಂಭವು ಕೇವಲ ಬಿಸಿಲನ್ನಷ್ಟೇ ತರುವುದಿಲ್ಲ. ಬದಲಾಗಿ ಜನರ ವಲಸೆಯನ್ನೂ ತರುತ್ತದೆ. ಇಲ್ಲಿನ ಗ್ರಾಮಸ್ಥರು ಉದ್ಯೋಗವನ್ನರಸಿ ತಂಡೋಪತಂಡವಾಗಿ ನೆರೆರಾಜ್ಯಗಳಾದ ಗೋವಾ ಮತ್ತು ಕೇರಳದತ್ತ ಮುಖ ಮಾಡುತ್ತಿದ್ದಾರೆ.
ಗದಗ ಜಿಲ್ಲೆಯ ಗ್ರಾಮೀಣ ಬದುಕು ಹೆಚ್ಚಾಗಿ ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಿದೆ. ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಮಾತ್ರವೇ ಕೃಷಿ ಕೆಲಸಗಳು ಚುರುಕಾಗಿರುತ್ತವೆ. ಬೆಳೆ ಕಟಾವು ಮುಗಿದ ನಂತರ, ಬೇಸಿಗೆಯಲ್ಲಿ ಹಲವು ತಿಂಗಳುಗಳ ಕಾಲ ಯಾವುದೇ ಕೃಷಿ ಕೆಲಸಗಳು ಇರುವುದಿಲ್ಲ. ಕೃಷಿ ಚಟುವಟಿಕೆಗಳು ನಡೆಯದ ಕಾರಣ, ಕೃಷಿ ಕೆಲಸಗಳೂ ದೊರೆಯುವುದಿಲ್ಲ.
ಇನ್ನು, ಗ್ರಾಮಗಳಲ್ಲಿ ದಿನಗೂಲಿ ಕಾರ್ಮಿಕರಿಗೆ ಪರ್ಯಾಯ ಕೆಲಸದ ಅವಕಾಶಗಳು ಇಲ್ಲವಾದ್ದರಿಂದ, ವಲಸೆ ಅನಿವಾರ್ಯವಾಗಿದೆ. ಗೋವಾ ಮತ್ತು ಕೇರಳದಲ್ಲಿ ಈ ಸಮಯದಲ್ಲಿ ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಹಾಗೂ ನಿರ್ಮಾಣ ಕಾಮಗಾರಿಗಳು ಹೆಚ್ಚಾಗಿರುತ್ತವೆ. ಇಲ್ಲಿ ಸುಲಭವಾಗಿ ತಾತ್ಕಾಲಿಕ ಕೆಲಸಗಳು ದೊರೆಯುವುದರಿಂದ ಗದಗ ಜಿಲ್ಲೆಯ ಗ್ರಾಮೀಣ ಭಾಗದ ಯುವಜನರು ಆ ರಾಜ್ಯಗಳತ್ತ ವಲಸೆ ಹೋಗುತ್ತಿದ್ದಾರೆ.
ಬೇಸಿಗೆಯಲ್ಲಿ ಸ್ಥಳೀಯ ಉದ್ಯೋಗಗಳು ದೊರೆಯದ ಕಾರಣ, ಗದಗ ಜಿಲ್ಲೆಯ ತಾಲೂಕುಗಳಲ್ಲಿ ಮುಂಡರಗಿ, ರೋಣ, ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕುಗಳ ಜನರು ಹೆಚ್ಚಾಗಿ ನೆರೆಯ ರಾಜ್ಯಗಳಿಗೆ ವಲಸೆ ಹೋಗುತ್ತಾರೆಂದು ವರದಿಗಳು ಹೇಳುತ್ತವೆ.
ಹಲವಾರು ಕುಟುಂಬಗಳು ತಮ್ಮ ಮನೆಗಳಿಗೆ ಬೀಗ ಜಡಿದು, ತಮ್ಮಿಡೀ ಕುಟುಂಬಸ್ಥರೊಂದಿಗೆ ವಲಸೆ ಹೋಗುವುದು ಕಂಡುಬಂದಿದೆ. ಪರಿಣಾಮ, ಊರುಗಳು ಮೌನವಾಗಿರುತ್ತವೆ. ವೃದ್ಧರು ಮಾತ್ರವೇ ಕಾಣಸಿಗುತ್ತಾರೆ.
“ಯುವಕರು ಮತ್ತು ಮಹಿಳೆಯರು ಉದ್ಯೋಗಕ್ಕಾಗಿ ಹೊರರಾಜ್ಯಗಳಿಗೆ ತೆರಳುತ್ತಿದ್ದಾರೆ. ಅಲ್ಲಿ ಎರಡು-ಮೂರು ತಿಂಗಳು ಕಷ್ಟಪಟ್ಟು ದುಡಿದು, ಉತ್ತಮ ಆದಾಯದೊಂದಿಗೆ ಮರಳಿ ಬರುತ್ತಾರೆ. ಇದು ಪ್ರತಿವರ್ಷದ ರೂಢಿಯಾಗಿಬಿಟ್ಟಿದೆ” ಎನ್ನುತ್ತಾರೆ ಕಬಲಾಯತ್ಕಟ್ಟಿ ಗ್ರಾಮದ ನಿವಾಸಿ ರವಿರಾಜ್ ದೊಡ್ಡಮನಿ.
“ಉತ್ತರ ಕರ್ನಾಟಕದ ಈ ವಲಸೆ ಸಮಸ್ಯೆಯನ್ನು ಪರಿಹರಿಸಲು ಬೇಸಿಗೆಯಲ್ಲೂ ಕೃಷಿ ಚಟುವಟಿಕೆಗಳು ನಡೆಯುವಂತೆ ನೀರಾವರಿ ಸೌಲಭ್ಯಗಳನ್ನು ಒದಗಿಸಬೇಕು. ಗ್ರಾಮೀಣ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಠಿಸಬೇಕು. ಕೃಷಿಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡಿ, ಸ್ಥಳೀಯವಾಗಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಆಗ ಮಾತ್ರವೇ, ಇಂತಹ ವಲಸೆಯನ್ನು ತಡೆಯಬಹುದು” ಎಂದು ಜಿಲ್ಲೆಯ ಯುವಜನರು ಹೇಳುತ್ತಾರೆ.




