“ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ತಳಪಾಯ ತೆಗೆಯುವ ಸಂದರ್ಭದಲ್ಲಿ ಸಿಕ್ಕ ನಿಧಿ ಅಂದಾಜು 500ರಿಂದ 600 ವರ್ಷಗಳಷ್ಟು ಹಿಂದಿನದ್ದು” ಎಂದು ನಿಧಿ ಮೌಲ್ಯಮಾಪನಾ ಸಮಿತಿ ಅಧ್ಯಕ್ಷ ಡಾ. ಎಂ.ಎಸ್.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಗದಗ ಪಟ್ಟಣದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಿಧಿ ಪರಿಶೀಲನೆ ನಡೆಸಿ ಮಾತನಾಡಿದರು.
“ಲಕ್ಕುಂಡಿ ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ತಳಪಾಯ ತೆಗೆಯುವಾಗ ಸಿಕ್ಕ 466 ಗ್ರಾಂ ಚಿನ್ನದ ಆಭರಣ ಆಕಾರ, ವಿನ್ಯಾಸ ಪರಿಶೀಲಿಸಿದ್ದು, ವಿಜಯನಗರ ಸಾಮ್ರಾಜ್ಯದ ಅವಧಿಯ ಆಭರಣ ಇರಬಹುದು ಎಂದು ಅಂದಾಜಿಸಲಾಗಿದೆ. ಸಿಂಹ ಅಥವಾ ಕೀರ್ತಿ ಮುಖ ಇರುವ ಆಭರಣಗಳನ್ನು ಸಾಮಾನ್ಯ ಜನರು ಬಳಸುತ್ತಿರಲಿಲ್ಲ. ಇವು ಹೆಣ್ಣು ದೇವರಿಗೆ ಅರ್ಪಿಸಲು ತಯಾರಿಸಿದ ಆಭರಣದಂತೆ ಕಾಣುತ್ತವೆ” ಎಂದು ತಿಳಿಸಿದರು.
‘ಚಿನ್ನದ ಆಭರಣಗಳಲ್ಲಿ ನೀಲಮಣಿ, ಪಚ್ಚೆ, ಹವಳದಂತಹ ಅಮೂಲ್ಯ ಹರಳುಗಳಿವೆ. 466 ಗ್ರಾಂ ಚಿನ್ನದ ಇಂದಿನ ಬೆಲೆ ಅಂದಾಜು ₹80 ಲಕ್ಷ. ಆದರೆ, ಪುರಾತನ ಆಭರಣಗಳ ಮೌಲ್ಯ 10ಪಟ್ಟು ಹೆಚ್ಚಿಗೆ ಇರುತ್ತದೆ” ಎಂದು ತಿಳಿಸಿದರು.
ಐತಿಹಾಸಿಕ ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿಯ ಕಾಲ ಪತ್ತೆ, ಮೌಲ್ಯಮಾಪನಕ್ಕೆ ಸರ್ಕಾರ ಡಾ. ಎಂಎಸ್ ಕೃಷ್ಣಮೂರ್ತಿ ನೇತೃತ್ವದಲ್ಲಿ ಐದು ಮಂದಿ ಸದಸ್ಯರ ತಂಡ ರಚಿಸಿತ್ತು.





