ಶಿಂಗಟಾಲೂರು ಘಟನೆಯಲ್ಲಿ ಸರ್ಕಾರದ ಮಧ್ಯಸ್ಥಿಕೆ ದಲಿತ ಸಮುದಾಯಕ್ಕೆ ತಾತ್ಕಾಲಿಕ ಪರಿಹಾರ ನೀಡಿದರೂ, ಇದು ಮೂಲ ಕಾರಣಗಳಾದ ಸಾಮಾಜಿಕ ಮನೋಭಾವ ಮತ್ತು ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸುವ ಅಗತ್ಯವನ್ನು ಎತ್ತಿ ತೋರುತ್ತದೆ.
ದಲಿತರಿಗೆ ಕ್ಷೌರ ಮಾಡಲು ಕ್ಷೌರಿಕರು ನಿರಾಕರಿಸಿದ್ದರಿಂದ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ತಾಲೂಕು ಸಮಾಜ ಕಲ್ಯಾಣ ಇಲಾಖೆ, ಅಧಿಕಾರಿಗಳು ಸೇರಿ ಸರ್ಕಾರದ ವತಿಯಿಂದಲೇ ಶಿಂಗಟಾಲೂರು ಗ್ರಾಮದಲ್ಲಿ ಕ್ಷೌರದ ಅಂಗಡಿ ತೆರೆದು ಪ್ರೋತ್ಸಾಹ ನೀಡಲಾಗಿದೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದಲ್ಲಿ ಹಿಂದಿನಿಂದಲೂ ದಲಿತರಿಗೆ ಕ್ಷೌರ ಮಾಡಲು ಕ್ಷೌರಿಕರು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರರು ಗ್ರಾಮಕ್ಕೆ ಬೇಟಿ ನೀಡಿ, ʼಇದು ತಪ್ಪು, ದಲಿತರಿಗೂ ಕ್ಷೌರ ಮಾಡಬೇಕುʼ ಎಂದು ಆದೇಶಿಸಿದ್ದರೂ ಕೂಡ ಕ್ಷೌರಿಕರು ದಲಿತರಿಗೆ ಕ್ಷೌರ ಮಾಡಲು ಒಪ್ಪದಿದ್ದಾಗ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಅಧಿಕಾರಿಗಳ ಸಹಯೋಗದೊಂದಿಗೆ ಗ್ರಾಮದಲ್ಲಿ ಸರ್ಕಾದಿಂದಲೇ ಕ್ಷೌರದ ಅಂಗಡಿ ತೆರೆದಿರುವರು.
ಸರ್ಕಾರದ ವತಿಯಿಂದ ಕ್ಷೌರಿಕನನ್ನು ನೇಮಿಸಿ, ಕಟಿಂಗಿಗೆ ₹100 ಮತ್ತು ಶೇವಿಂಗ್‌ಗೆ ₹75 ಶುಲ್ಕ ವಿಧಿಸಿದೆ.
ಈ ಕುರಿತು ಶಿವಶರಣ ಹಡಪದ ಅಪ್ಪಣ್ಣ ಸಮಾಜದ ರಾಜ್ಯ ಅಧ್ಯಕ್ಷ ಮಾತನಾಡಿ, “ಹಿಂದಿನಿಂದಲೂ ದಲಿತರಿಗೆ ಕ್ಷೌರದ ಅಂಗಡಿಯಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸುತ್ತಿದ್ದರು. ಇದನ್ನು ಹೋಗಲಾಡಿಸಲು ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು, ಹಡಪದ ಸಮಾಜದ ಮುಖಂಡರು ಗ್ರಾಮದಲ್ಲಿ ಸಭೆ ನಡೆಸಿದರೂ ಪ್ರಯೋಜನವಾಗದಿದ್ದಲ್ಲಿ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸರ್ಕಾರದಿಂದ ಕ್ಷೌರದ ಅಂಗಡಿ ತೆರೆಯಲಾಗಿದೆ. ಗ್ರಾಮದ ಎಲ್ಲ ವರ್ಗದವರೂ ಇಲ್ಲಿ ಕ್ಷೌರ ಮಾಡಿಸಿಕೊಳ್ಳಲು ಅವಕಾಶವಿದ್ದು, ಕಳೆದ ಎರಡು ದಿನಗಳಿಂದ ಎಲ್ಲ ಸಮಾಜ ಹಾಗೂ ಎಲ್ಲ ವರ್ಗದವರೂ ಕ್ಷೌರ ಮಾಡಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಮದ ಕ್ಷೌರಿಕರು ಮತ್ತೆ ಮನೆ ಮನೆಗೆ ಹೋಗಿ ಕ್ಷೌರ ಮಾಡಿದರೆ ನಾವೇ ಅವರ ಮೇಲೆ ಕ್ರಮ ತೆಗೆದುಕೊಳುತ್ತೇವೆ” ಎಂದು ತಿಳಿಸಿದ್ದಾರೆ.
ಈ ದಿನ.ಕಾಮ್ ಗ್ರಾಮದ ದಲಿತ ಯುವಕ ಮರಿಯಜ್ಜ ಅವರನ್ನು ಪೋನ್ ಮೂಲಕ ಸಂಪರ್ಕಿಸಿದಾಗ, “ಸರ್ಕಾರದ ವತಿಯಿಂದ ಕ್ಷೌರದ ಅಂಗಡಿ ತೆರೆಯಲಾಗಿದ್ದು, ಮೂರುದಿನಗಳಿಂದ ಗ್ರಾಮದ ಎಲ್ಲ ಸಮಾಜದ ಜನರು ಕ್ಷೌರ ಮಾಡಿಸಿಕೊಳುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಸರ್ಕಾರದ ವತಿಯಿಂದ ಗ್ರಾಮದಲ್ಲಿ ಕ್ಷೌರದ ಅಂಗಡಿಯನ್ನು ತೆರೆದಿರುವುದುರ ಕುರಿತು ಬಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ಈ ಕುರಿತು ದಲಿತ ಹೋರಾಟಗಾರ ಶರೀಫ್ ಬಿಳಿಯಲಿ ಮಾತನಾಡಿ, “ಸರ್ಕಾರ ಸಮಾಜದಲ್ಲಿರುವ ಜಾತಿ ತಾರತಮ್ಯ, ಅಸಮಾನತೆ, ಮೇಲು-ಕೀಳುಗಳ ಕುರಿತು ಪರಿಣಾಮಕಾರಿಯಾಗಿ ಜನರಲ್ಲಿ ಅರಿವು ಮೂಡಿಸಬೇಕು. ಅದುಬಿಟ್ಟು ಸರ್ಕಾರದ ವತಿಯಿಂದ ಗ್ರಾಮದಲ್ಲಿ ಮತ್ತಷ್ಟು ಅಸಮಾನತೆ ಉಂಟಾಗಲು ದಾರಿ ಮಾಡಿಕೊಟ್ಟಂತಾಗಿದೆ. ದೇಶದಲ್ಲಿ ಸಂವಿಧಾನವಿದ್ದು, ಅದನ್ನು ಪಾಲಿಸುವುದಕ್ಕೆ ಕಾನೂನುಗಳಿಗೆ, ಸರ್ಕಾರದ ನಿಯಮಗಳಿವೆ. ಪೋಲಿಸ್ ಇಲಾಖೆ, ಆಡಳಿತ ಇಲಾಖೆ ಇದೆ. ಇಷ್ಟೆಲ್ಲ ಇದ್ದರೂ ಕೂಡ ಜನರ ಮನವೊಲಿಸಿಯೋ ಅಥವಾ ಕಾನೂನಿನ ಅಂಕುಶ ಹಾಕಿ ಅಸ್ಪ್ರಶ್ಯತೆ ಜಾತಿ ತಾರತಮ್ಯ, ಬಹಿಷ್ಕಾರ, ನಿಂದನೆ, ಅಸಮಾನತೆ ಇವುಗಳನ್ನು ತಡೆಯಲಾಗಲಿ ಎನ್ನುವುದಾದರೆ ಸರ್ಕಾರ ಯಾಕೆ ಬೇಕು ಎನ್ನುವ ಪ್ರಶ್ನೆ ಮೂಡುತ್ತದೆ” ಎಂದು ಟೀಕಿಸಿದರು.
“ಆಳುವ ಸರ್ಕಾರಗಳು ಇಂತಹ ವ್ಯವಸ್ಥೆಗೆ ಹೆದರಿ ತಮ್ಮ ಕರ್ತವ್ಯವನ್ನು ಮರೆತು ಜಾತಿವಾದಿಗಳ ಬೆಂಬಲಕ್ಕೆ ನಿಂತ ರೀತಿಯಲ್ಲಿ ವರ್ತಿಸುತ್ತಿದೆ. ನಿಜಕ್ಕೂ ಸರ್ಕಾರದ ನಿಯಮ ನಾಚಿಕೆಗೇಡು” ಎಂದು ಪ್ರತಿಕ್ರಿಯೆ ತಿಳಿಸಿದ್ದಾರೆ.
ಪ್ರಗತಿಪರ ಚಿಂತಕ ಮುತ್ತ ಬಿಳಿಯಲಿ ಮಾತನಾಡಿ, “ಸಮಾಜ ಕಲ್ಯಾಣ ಇಲಾಖೆ, ತಾಲೂಕು ಆಡಳಿತ ಸೇರಿದಂತೆ ಅಧಿಕಾರಿಗಳು ಸರ್ಕಾರದ ವತಿಯಿಂದ ಕ್ಷೌರದ ಅಂಗಡಿ ತೆರೆದಿದ್ದು, ಸರ್ಕಾರವೇ ಮತ್ತಷ್ಟು ಅಸ್ಪೃಷ್ಯತೆಗೆ ದಾರಿ ಮಾಡಿಕೊಟ್ಟಿದೆ. ಕೇವಲ ದಲಿತರಿಗಷ್ಟೇ ಸಿಮೀತವಾಗಿ, ಮತ್ತೆ ಗ್ರಾಮದ ಕ್ಷೌರಿಕರು ಮನೆ ಮನೆಗೆ ತೆರಳಿ ಕ್ಷೌರ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಸರ್ಕಾರದ ನಡೆಯ ನಿರ್ಧಾರವನ್ನು ಬದಲಿಸಬೇಕು. ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡದ ಕ್ಷೌರಿಕರ ಲೈಸನ್ಸ್ ರದ್ದು ಮಾಡುವುದು ಮತ್ತು ಕಠಿಣ ಕ್ರಮ ಜರುಗಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕು” ಎಂದರು.
ಸರ್ಕಾರದ ವತಿಯಿಂದ ಕ್ಷೌರದ ಅಂಗಡಿ ತೆರೆಯುವುದರ ಹಿನ್ನಲೆ ಏನು?
ಗ್ರಾಮದ ಹಡಪದ ಕುಟುಂಬಗಳು ವೀರಭದ್ರೇಶ್ವರ ದೇವರ ಭಕ್ತರಾಗಿದ್ದು, ಪ್ರತಿ ವರ್ಷ ಮಹಾನವಮಿ ಸಮಯದಲ್ಲಿ ಹಡಪದ ಸಮಾಜದ ಕುಟುಂಬಗಳ ಮನೆಗೆ ಪೂಜೆ ಬರುತ್ತದೆ. ಆಗ ಹಡಪದ ಸಮಾಜದವರು ದೇವರಿಗೆ ಪೂಜೆ ಸಲ್ಲಿಸುವರು. ಹಾಗಾಗಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದರು.
ಇತ್ತಿಚೇಗೆ ದಲಿತರು ಗ್ರಾಮ ಪಂಚಾಯಿತಿ ಪರವಾನಿಗೆ ಪಡೆದು ಕ್ಷೌರದ ಅಂಗಡಿ ತೆರೆದಿದ್ದೀರಿ, ನಮಗೂ ಕ್ಷೌರ ಮಾಡಬೇಕೆಂದು ಆಗ್ರಹಿಸಿದ್ದರು. ಆಗ ಕ್ಷೌರಿಕರು ಅಂಗಡಿಯನ್ನು ಬಂದ್ ಮಾಡಿದ್ದರು. ತದನಂತರದಲ್ಲಿ ಕ್ಷೌರಿಕರು ತಮೆಗೆ ಬೇಕಾದವರ ಮನೆ ಮನೆಗೆ ತೆರೆಳಿ ಕ್ಷೌರ ಮಾಡಲು ಆರಂಭಿಸಿದರು.
ಕ್ಷೌರಿಕರ ಮನ ಒಲಿಸಲು ಪ್ರಯತ್ನ: ಈ ವಿಷಯದ ಕುರಿತು ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಗ್ರಾಮಕ್ಕೆ ಶಾಂತಿ ಸಭೆ ನಡೆಸಿ ಕ್ಷೌರಿಕರ ಮನ ಒಲಿಸಲು ಪ್ರಯತ್ನಪಟ್ಟರೂ ಕೂಡ ಸಾಧ್ಯವಾಗದೇ ಹೋದಾಗ ಸರ್ಕಾರದ ವತಿಯಿಂದ ಗ್ರಾಮದಲ್ಲಿ ಕ್ಷೌರದ ಅಂಗಡಿ ತೆರೆದಿದ್ದು, ಗ್ರಾಮದ ಎಲ್ಲ ಸಮಾಜದ ಜನರು ಹಾಗೂ ದಲಿತರು ಸೇರಿದಂತೆ ಕ್ಷೌರದ ಅಂಗಡಿಯಲ್ಲಿ ಕ್ಷೌರ ಮಾಡಿಸಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ? ರಾಜ್ಯ ಬಜೆಟ್ | ದಾವಣಗೆರೆ ಜನತೆಯ ನಿರೀಕ್ಷೆಗಳೇನು? ಮುಖಂಡರು ಹೇಳುವುದೇನು?
ಶಿಂಗಟಾಲೂರು ಗ್ರಾಮದಲ್ಲಿ ಸರ್ಕಾರದ ವತಿಯಿಂದ ಕ್ಷೌರದ ಅಂಗಡಿ ತೆರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೌರದ ಅಂಗಡಿಯಲ್ಲಿ ಗ್ರಾಮದ ಎಲ್ಲ ವರ್ಗದವರೂ ಕ್ಷೌರ ಮಾಡಿಸಿಕೊಳ್ಳುವರೋ ಅಥವಾ ಕೇವಲ ದಲಿತರಿಗೆ ಸೀಮಿತವಾಗುತ್ತದೆಯೋ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಈ ಘಟನೆಯು ಭಾರತದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಜಾತಿ ತಾರತಮ್ಯದ ಸಮಸ್ಯೆಯನ್ನು ಎತ್ತಿ ತೋರಿಸುತ್ತದೆ. ಶಿಂಗಟಾಲೂರು ಘಟನೆಯಲ್ಲಿ ಸರ್ಕಾರದ ಮಧ್ಯಸ್ಥಿಕೆ ದಲಿತ ಸಮುದಾಯಕ್ಕೆ ತಾತ್ಕಾಲಿಕ ಪರಿಹಾರ ನೀಡಿದರೂ, ಇದು ಮೂಲ ಕಾರಣಗಳಾದ ಸಾಮಾಜಿಕ ಮನೋಭಾವ ಮತ್ತು ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸುವ ಅಗತ್ಯವನ್ನು ಎತ್ತಿ ತೋರುತ್ತದೆ. ಶಿಕ್ಷಣ, ಜಾಗೃತಿ ಕಾರ್ಯಕ್ರಮಗಳು ಮತ್ತು ಕಾನೂನು ಕ್ರಮಗಳ ಮೂಲಕ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಅಗತ್ಯವಾಗಿದೆ. ಇದು ಸಾಮಾಜಿಕ ಸಾಮರಸ್ಯಕ್ಕೆ ಕೊಡುಗೆ ನೀಡುತ್ತದೆ. ಅಲ್ಲದೆ ಸಮಾನತೆಯನ್ನು ಉತ್ತೇಜಿಸುತ್ತದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




