ಬಿಚ್ಚೋಲಿಯಂ (ಗೋವಾ): ಇಲ್ಲಿನ ಕರ್ಮಭೂಮಿ ಕನ್ನಡ ಸಂಘ ಹಾಗೂ ಬೆಂಗಳೂರಿನ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ, ಬಿಚ್ಚೋಲಿಯಂನ ಹೀರಾಬಾಯಿ ಚಾಂಟೆ ಭವನದಲ್ಲಿ ಸೋಮವಾರ 16ನೇ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನವು ಅತ್ಯಂತ ವೈಭವದಿಂದ ಜರುಗಿತು.
ಕಾರ್ಯಕ್ರಮಕ್ಕೆ ಮುನ್ನ ಶಾಂತಾದುರ್ಗ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ 1008 ಕನ್ನಡಿಗ ಮಹಿಳೆಯರ ಪೂರ್ಣಕುಂಭ ಮೇಳಕ್ಕೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮತ್ತು ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಅವರು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಗೋವಾದಲ್ಲಿ ಈಗಾಗಲೇ ನಿವೇಶನ ಲಭ್ಯವಿದ್ದು, ಹಿಂದೆ ನೀಡಿದ್ದ ಭರವಸೆಯಂತೆ ಕನ್ನಡ ಭವನ ನಿರ್ಮಿಸಲು ತಕ್ಷಣ ಅನುಮತಿ ನೀಡಬೇಕು ಎಂದು ಅವರು ವಿನಂತಿಸಿದರು.
ಗೋವಾದಲ್ಲಿ ನೆಲೆಸಿರುವ ಸುಮಾರು 5 ಲಕ್ಷ ಕನ್ನಡಿಗರ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಈ ಭವನ ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು. ಸಮ್ಮೇಳನದಲ್ಲಿ ಪದ್ಮಶ್ರೀ ಶ್ರೀ ಬ್ರಹ್ಮೇಶಾನಂದಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಹಳೆತೋರಗಲ್ಲದ ಶ್ರೀ ಕರಿಸಿದ್ದೇಶ್ವರ ಪಟ್ಟದ ಪೂಜ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡಕ್ಕೆ ಬಜೆಟ್ ಬಂಪರ್: ಕಾರವಾರದಲ್ಲಿ 100 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಘೋಷಣೆ
ಸಾಂಸ್ಕೃತಿಕ ಸಮಾವೇಶದ ಉದ್ಘಾಟನೆಯನ್ನು ಮಾಯೆಮ್ ಶಾಸಕ ಪ್ರೇಮೆಂದ್ರ ವಿ. ಶೇಟ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬಿಚ್ಚೋಲಿ ಶಾಸಕ ಚಂದ್ರಕಾಂತ್ ಶೇಟಿಯೆ, ಚಿಕ್ಕೋಡಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಚ್ಚೋಲಿ ನಗರಸಭೆ ಅಧ್ಯಕ್ಷ ಕುಂದನ ಪಳಾರಿ ಹಾಗೂ ಮಾಜಿ ಸಭಾಪತಿ ರಾಜೇಶ ಪಾಟ್ನೇಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಉತ್ತರ ಭಾರತದ ಕನ್ವಿನರ್ ರಾಕೇಶ್ ಅಗರವಾಲ್, ಗೋವಾ ಕರ್ನಾಟಕ ಕಾರ್ಯದರ್ಶಿ ಮುರಳಿ ಮೋಹನ ಶೆಟ್ಟಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಸಮ್ಮೇಳನದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾವಿದರು ಪ್ರದರ್ಶಿಸಿದ ಸಮೂಹ ನೃತ್ಯ, ಜಾನಪದ ಕಲೆ, ಭರತನಾಟ್ಯ, ಮಹಿಳಾ ವೀರಗಾಸೆ ಮತ್ತು ಚಿತ್ರಕಲಾ ಪ್ರದರ್ಶನಗಳು ನೆರೆದಿದ್ದವರ ಗಮನ ಸೆಳೆದವು.





