ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಗೋಕರ್ಣದ ಸಮೀಪವಿರುವ ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ರೆಸಾರ್ಟ್ ಹಾಗೂ ಹೋಂ ಸ್ಟೇಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕುಮಟಾ ಉಪವಿಭಾಗಾಧಿಕಾರಿಗಳು ಆಯ್ದ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳನ್ನು ಗಾಳಿಗೆ ತೂರಿ ಮತ್ತು ಕಂದಾಯ ಇಲಾಖೆಯ ಪೂರ್ವಾನುಮತಿ ಪಡೆಯದೆ ನಿರ್ಮಿಸಲಾಗಿರುವ ಒಟ್ಟು 44 ರೆಸಾರ್ಟ್‌ಗಳ ವಿರುದ್ಧ ತಾಲೂಕಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ನಾಡುಮಾಸ್ಕೇರಿ ಪಂಚಾಯತ್ ವ್ಯಾಪ್ತಿಯ ದುಬ್ಬನಸಸಿ, ಭಾವಿಕೊಡ್ಲ ಹಾಗೂ ಗಂಗೆಕೊಳ್ಳ ಗ್ರಾಮಗಳಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ.

ಒಟ್ಟು 44 ಪತ್ತೆಯಾದ ಅಕ್ರಮ ರೆಸಾರ್ಟ್‌ಗಳು ಅದರಲ್ಲಿ 16 ರೆಸಾರ್ಟ್ ಮಾಲೀಕರು ಸ್ವಯಂಪ್ರೇರಿತವಾಗಿ ತೆರವುಗೊಳಿಸುವುದಾಗಿ ತಿಳಿಸಿ ನ್ಯಾಯಾಲಯದಿಂದ ತಾತ್ಕಾಲಿಕ ತಡೆ ತಂದಿದ್ದಾರೆ. ಈಗಾಗಲೇ 7 ರೆಸಾರ್ಟ್ ಮಾಲೀಕರು ತಾವಾಗಿಯೇ ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿರಸಿ | ರಾಜ್ಯದ ಜಿಎಸ್ಟಿ ಪಾಲು ಕೊಡಿಸಲು ಬಿಜೆಪಿ ನಾಯಕರು ತಮ್ಮ ತಾಕತ್ತು ತೋರಿಸಲಿ: ಭೀಮಣ್ಣ ನಾಯ್ಕ ವಾಗ್ದಾಳಿ
ಬಾಕಿ ಉಳಿದಿರುವ 21 ಅಕ್ರಮ ರೆಸಾರ್ಟ್‌ಗಳನ್ನು ತಾಲೂಕಾಡಳಿತವು ಇಂದು ವಶಕ್ಕೆ ಪಡೆದು, ನಿಯಮಾನುಸಾರ ತೆರವುಗೊಳಿಸಲು ನಿರ್ಧರಿಸಿದೆ ಎಂದು ತಹಶೀಲ್ದಾರ್ ಶ್ರೀಕೃಷ್ಣ ಮಾಹಿತಿ ನೀಡಿದ್ದಾರೆ.
ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಥವಾ ರೆಸಾರ್ಟ್ ಮಾಲೀಕರಿಂದ ವಿರೋಧ ವ್ಯಕ್ತವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಇರುವುದರಿಂದ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರ ಅಡಿಯಲ್ಲಿ ನಿರ್ಬಂಧ ಹೇರಲಾಗಿದೆ.
ಈ ಆದೇಶವು ಮಾರ್ಚ್ 09, 2026ರ ಬೆಳಗ್ಗೆ 10:00 ಗಂಟೆಯಿಂದ ಮಾರ್ಚ್ 10, 2026ರ ಬೆಳಗ್ಗೆ 10:00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಸದರಿ ಪ್ರದೇಶದ ಸಮುದ್ರ ತೀರದಲ್ಲಿ ಗುಂಪು ಸೇರುವುದು, ಸಾರ್ವಜನಿಕ ವಾಹನಗಳ ಸಂಚಾರ ಮತ್ತು ಪ್ರತಿಭಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಪಿ. ಶ್ರವಣ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.





