ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಮಾಡಲು ಸಾಧ್ಯವಾಗದೆ ಪುನರ್ವಸತಿ ಬಯಸಿರುವ ಬಡ ಕುಟುಂಬಗಳಿಗೆ ಸರ್ಕಾರ ಸಹಾಯ ಹಸ್ತ ನೀಡಿಲಿ ಎಂದು ಕಾಂಗ್ರೆಸ್ ಮುಖಂಡ ನವೀನ್ ಸಾಲಿಯನ್ ಮನವಿ ಮಾಡಿದ್ದಾರೆ.
ಕುದುರೆಮುಖ ಅರಣ್ಯ ಪ್ರದೇಶಗಳಲ್ಲಿ ದಶಕಗಳಿನಿಂದ ವಾಸಿಸುತ್ತಿರುವ ಕುಟುಂಬಗಳು ಆ ಭಾಗದಲ್ಲಿ ವಾಸ ಮಾಡಲು ಅನುಮತಿಯಿಲ್ಲದೆ, ಜೀವನೋಪಾಯಕ್ಕೆ ತೀವ್ರ ಸಂಕಷ್ಟ ಎದುರಿಸುತ್ತಿವೆ. ಈ ಕುಟುಂಬಗಳಿಗೆ ಪುನರ್ವಸತಿ ಹಾಗೂ ನ್ಯಾಯಯುತ ಪರಿಹಾರದ ಅಗತ್ಯ ಬಹಳ ದಿನಗಳಿಂದಲೂ ಪ್ರಸ್ತಾಪವಾಗುತ್ತಿದ್ದ ಮಹತ್ವದ ವಿಚಾರ.
“ಕುದುರೆಮುಖ ಕಬ್ಬಿಣದ ಅದಿರು ಗಣಿಗಾರಿಕೆ ಕಂಪೆನಿ ಕೆಲಸಕ್ಕಾಗಿ ವಿವಿಧ ಕಡೆಗಳಿಂದ ಹಲವು ಕುಟುಂಬಗಳು ಕುದುರೆಮುಖ ಪ್ರದೇಶಕ್ಕೆ ಬಂದು ಕೆಐಒಸಿಎಲ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದವು. ಆನಂತರದ ದಿನಗಳಲ್ಲಿ ಕಂಪೆನಿ ಮುಚ್ಚಿಹೋಗಿದ್ದು, ಇಲ್ಲಿ ದುಡಿಯುತ್ತಿದ್ದ ಹಲವು ಕುಟುಂಬಗಳು ನಿರೋದ್ಯೋಗಿಗಳಾಗಿ ಹೋಗಿದ್ದಾರೆ. ಸದ್ಯ ಕಳಸ ಶೃಂಗೇರಿ ಕಡೆ ಕಾಫಿ ತೋಟಗಳಲ್ಲಿ ಹಾಗೂ ಉಡುಪಿ ಭಾಗಕ್ಕೆ ಕೃಷಿ ಕಾಮಗಾರಿಗೆ ವಲಸೆ ಕೂಲಿ ಕೆಲಸ ಮಾಡಿಕೊಂಡು ಸ್ವಂತಕ್ಕೆ ಸೂರು ಇಲ್ಲದೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕೃತಿ ದಹಿಸಿ ಪ್ರತಿಭಟನೆ
ಪುನರ್ವಸತಿ ಕೇವಲ ಸ್ಥಳಾಂತರವಲ್ಲ — ಬದುಕು ಪುನರ್ನಿರ್ಮಿಸುವ ಪ್ರಕ್ರಿಯೆ.
“ಕುದುರೆಮುಖ ಪರಿಸರ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಹಾಗೂ ಕಸ್ತೂರಿ ರಂಗನ್ ವರದಿ ವಿಚಾರ ಕೂಡ ಇರುವುದು ಆ ಭಾಗದ ಜನರಿಗೆ ಕುದುರೆಮುಖ ಭಾಗದಲ್ಲಿ ವಸತಿಗಾಗಿ ಜಾಗ ನೀಡುವಲ್ಲಿ ಕಾನೂನು ತೊಡಕಾಗಿದೆ. ಈ ಎಲ್ಲ ನಿಟ್ಟಿನಲ್ಲಿ ಆ ಭಾಗದಲ್ಲಿರುವ ನಿರಾಶ್ರಿತರಿಗೆ ಸರ್ಕಾರವೇ ಪುನರ್ವಸತಿ ನೀಡಬೇಕು ಹಾಗೂ ಮೂಲಭೂತ ಸೌಕರ್ಯಗಳಿಲ್ಲದೆ ಜನರು ಎದುರಿಸುತ್ತಿರುವ ದೀರ್ಘಕಾಲದ ನೋವಿಗೆ ಸಕಾರಾತ್ಮಕ ಪರಿಹಾರ ದೊರಕಿಸಬೇಕು” ಎಂದು ಕಾಂಗ್ರೆಸ್ ಮುಖಂಡ ನವೀನ್ ಸಾಲಿಯನ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.





