ಸಾಮೂಹಿಕ ನಾಯಕತ್ವದಲ್ಲಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಮತ್ತು ಶ್ರೀಕ್ಷೇತ್ರ ಪುಷ್ಪಗಿರಿ ಸಹಯೋಗದೊಂದಿಗೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕು, ಹಳೇಬೀಡಿನಲ್ಲಿ ಶನಿವಾರ ಆರಂಭಗೊಂಡ ನಾಲ್ಕು ದಿನಗಳ ‘ಸುಭಾಷ್ ಪಾಳೇಕರ್ ಕೃಷಿ ಪದ್ಧತಿ’ ಕಾರ್ಯಾಗಾರದಲ್ಲಿ ಮಾತನಾಡಿದ ಹಿರಿಯ ನ್ಯಾಯವಾದಿ ಪ್ರೊ ರವಿವರ್ಮ ಕುಮಾರ್, ‘ರೈತರ ಜೀವನ ಸುಧಾರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದು ಕಳವಳ ವ್ಯಕ್ತಪಡಿಸಿದರು.
ಆಳುವ ಸರ್ಕಾರಗಳು ರೈತ ಸಮುದಾಯವನ್ನು ಮರೆತಿವೆ. ದೇಶಕ್ಕೆ ಅನ್ನ ನೀಡುವ ರೈತರ ವಿರೋಧಿಯಾಗಿ ನಡೆದುಕೊಳ್ಳುತ್ತಿವೆ. ದೇಶದ ಜನಸಂಖ್ಯೆಯಲ್ಲಿ ಶೇ.65% ಜನ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ವಿಪರ್ಯಾಸ ಎಂದರೆ, ರೈತರು ಎಲ್ಲದಕ್ಕೂ ಬೀದಿಗೆ ಇಳಿದು ಪ್ರತಿಭಟಿಸುವ ಸಂದರ್ಭ ಎದುರಾಗಿದೆ. ರೈತ ವಿರೋಧಿ ಕಾಯ್ದೆಗಳನ್ನು ಹೇರುವ ಮೂಲಕ ರೈತ ಸಮುದಾಯಕ್ಕೆ ಮುಳುವಾಗಲು ಹೊರಟರು.
ದಿಟ್ಟವಾಗಿ ಹೋರಾಟ ಕಟ್ಟಿ ಸರ್ಕಾರಗಳ ವಿರುದ್ಧ ಪ್ರತಿಭಟಿಸಿ ಹಿಂತೆಗೆದುಕೊಳ್ಳುವಂತೆ ಮಾಡುವಲ್ಲಿ ಸಫಲರಾದರು. ರಾಜ್ಯ ಸರ್ಕಾರ ಇನ್ನೂ ಅಂತಹ ಪ್ರಯತ್ನಕ್ಕೆ ಮುಂದಾಗಿಲ್ಲ. ಕೇಂದ್ರ ಸರ್ಕಾರ ಪರ್ಯಾಯ ರೂಪದಲ್ಲಿ ಹೊಸ ಹೊಸ ಕಾಯ್ದೆ ತರುವಲ್ಲಿಯೂ ಮುಂದಾಗುತ್ತಿದೆ. ಇದೆಲ್ಲಾ ನೋಡಿದಾಗ ಕಾಪೋರೇಟ್ ಕುಳಗಳ ಮೇಲಿನ ಮೋಹ, ರೈತ ವಿರೋಧಿ ನಿಲುವಿಗೆ ಸ್ಪಷ್ಟ ಕಾರಣವಾಗುತ್ತಿವೆ.
ರೈತನಿಗೆ ಸರ್ಕಾರಗಳು ತೊಡಕಾಗಿದ್ದಾರೆ, ಇನ್ನೊಂದೆಡೆ ಹವಾಮಾನ ವೈಪರೀತ್ಯದಿಂದ ಅತಿವೃಷ್ಟಿ ಅನಾವೃಷ್ಟಿಗೆ ರೈತ ನಲುಗುತ್ತಿದ್ದಾನೆ. ವರ್ಷಪೂರ ಮಳೆ, ಇನ್ನೊಂದೆಡೆ ಮಳೆಯೇ ಇಲ್ಲ. ಹೀಗಾದಾಗ, ರೈತ ಬೆಳೆ ಬೆಳೆಯುವುದಾ? ಬೆಳೆದ ಬೆಳೆ ರಕ್ಷಿಸಿಕೊಳ್ಳುವುದಾ? ಯಾವುದು ಮಾಡಬೇಕು ಎನ್ನುವ ಜಿಜ್ಞಾಸೆಗೆ ಸಿಲುಕಿದ್ದಾನೆ. ರೈತನ ಮೇಲೆ ಪ್ರಕೃತಿಯಿಂದ ಹಿಡಿದು, ಆಳುವ ವರ್ಗಗಳು ಸಹ ದಾಳಿ ಮಾಡುತ್ತಿವೆ.

ಇಂತಹ ಸಂದರ್ಭದಲ್ಲಿ ರೈತ ಸಾಲಬಾಧೆಗೆ ಸಿಲುಕಿ ಆತ್ಮಹತ್ಯೆ ಕಡೆಗೆ ಮುಖ ಮಾಡಿದ್ದಾನೆ. ಇದು ನಿಜಕ್ಕೂ ದುರಂತ. ಅನ್ನ ಕೊಟ್ಟ ಕೈ ಉರುಳಿಗೆ ಕೊರಳೊಡ್ದುವುದು ಸರಿಯಾದುದಲ್ಲ. ಸರ್ಕಾರಗಳು ಸಹ ಪ್ರಜ್ಞಾವಂತಿಕೆಯಿಂದ ನಡೆದುಕೊಳ್ಳಬೇಕು. ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲದಿರುವುದು, ದಲ್ಲಾಳಿಗಳ ಹಾವಳಿ, ಮಾರುಕಟ್ಟೆ ಇಲ್ಲದಿರುವುದು, ಖರೀದಿ ಕೇಂದ್ರ ಸಮರ್ಪಕ ನಿರ್ವಹಣೆ ಇಲ್ಲದಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿವೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಘನತೆಯ ಬದುಕಿಗಾಗಿ, ಸ್ವಾವಲಂಬಿ ಬೇಸಾಯದತ್ತ ಮುಖ ಮಾಡೋಣ
ಇದರ ಜೊತೆಗೆ ರೈತ ವಿರೋಧಿ ಕಾಯ್ದೆಗಳು. ರೈತನ ಬದುಕಿನ ಮೇಲೆ ಚೆಲ್ಲಾಟವಾಡುವ ಇಂತಹ ನಿರ್ಧಾರಗಳು ಸದ್ದಿಲ್ಲದೆ ರೈತರ ಕುತ್ತಿಗೆ ಹಿಂಡುವಂತ ನಡೆಗಳಾಗಿವೆ. ಈ ಎಲ್ಲದರ ಕಾರಣಗಳು ರೈತ ಸಾಯುವಂತೆ ಪ್ರೇರೇಪಿಸುತ್ತಿವೆ. ಹಾವೇರಿಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರೆ, ಬೆಳಗಾವಿ ತದನಂತರದ ಸ್ಥಾನದಲ್ಲಿದೆ. ಈ ಅಂಕಿ ಅಂಶಗಳನ್ನು ಚಳಿಗಾಲದ ಅಧಿವೇಶನದಲ್ಲಿ ವರದಿ ಮಂಡಿಸಿದ್ದಾರೆ.
ಕಾರ್ಯಾಗಾರದ ಲೈವ್ ವೀಕ್ಷಿಸಿ:https://www.youtube.com/live/RKr1vmmzxD8?si=9sjQdjuO_rgU5KPb
ರೈತನಿಗೆ ಕೃಷಿ ನಷ್ಟವು ಹೊರೆ, ಬೆಳೆದ ಬೆಳೆಗೆ ತಕ್ಕ ಬೆಲೆ ಇಲ್ಲದಿದ್ದರೂ ಹೊರೆ, ಸರಿಯಾದ ಸಮಯಕ್ಕೆ ಕೊಂಡುಕೊಳ್ಳದೆ ಇದ್ದರು ಹೊರೆ, ಸೂಕ್ತ ಮಾರುಕಟ್ಟೆ ಇಲ್ಲದಿದ್ದರೂ ಹೊರೆ. ಇಂತಹ ಸಾಂಧರ್ಭಿಕ ತಿಕ್ಕಾಟಕ್ಕೆ ಸಿಲುಕಿ, ಸಾಲ ತಿರುವಳಿ ಸಾಧ್ಯವಾಗುತ್ತಿಲ್ಲ. ಸಾಲಸೋಲದ ಹೊರೆ ಜಿಗುಪ್ಸೆ ತರಿಸುವಂತಾಗಿದೆ. ಆಳುವ ಸರ್ಕಾರಗಳು ರೈತರ ಹಿತ ಕಾಯಬೇಕು. ರೈತ ಪರ ನಿಲುವು ತಾಳಬೇಕು. ರೈತ ಸಮುದಾಯ ಆರ್ಥಿಕ ಸದೃಢತೆ ಕಂಡುಕೊಳ್ಳಲು ಅಗತ್ಯ ನಿಯಮ ರೂಪಿಸಬೇಕು ಎಂದು ಸಲಹೆ ನೀಡಿದರು.





