‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ ಪ್ರಸ್ತಾವಿತ ಯೋಜನೆಯ ಸಾಧಕ-ಬಾಧಕಗಳೇನು?

Date:

ಬೃಹತ್‌ ಮೈಸೂರು ಮಹಾನಗರದ ಯಶಸ್ಸು ಸಾಧಿಸುವುದು ಕೇವಲ ವಿಸ್ತರಣೆಯಿಂದಲ್ಲ. ವೈಜ್ಞಾನಿಕ ಯೋಜನೆ, ಪಾರದರ್ಶಕ ನಿರ್ವಹಣೆ ಮತ್ತು ಸ್ಥಳೀಯರ ಅಭಿಪ್ರಾಯಗಳನ್ನು ಪರಿಗಣಿಸುವುದರಲ್ಲಿ ಅಡಗಿದೆ. 

ಮೈಸೂರು ಮಹಾನಗರ ಪಾಲಿಕೆಯನ್ನು ‘ಬೃಹತ್ ಮೈಸೂರು ಮಹಾನಗರ ಪಾಲಿಕೆ'(ಗ್ರೇಟರ್ ಮೈಸೂರು)ಯಾಗಿ ಸರ್ಕಾರ ಜನವರಿ 8ರಂದು ಮರುನಾಮಕರಣ ಮಾಡಿ ಆದೇಶ ಹೊರಡಿಸಿದೆ. ವ್ಯಾಪ್ತಿಯನ್ನು ವಿಸ್ತರಿಸುವ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಳ್ಳುವ ಪ್ರಸ್ತಾವಿತ ಯೋಜನೆಯಾಗಿದೆ. ಇದರಿಂದಾಗಿ, 86.31 ಚದರ ಕಿಮೀವರೆಗಿದ್ದ ಪಾಲಿಕೆಯ ವ್ಯಾಪ್ತಿ, 341.44ಚದರ ಕಿಮೀ ತನಕ ವಿಸ್ತರಣೆಗೊಳ್ಳಲಿದೆ. ಇದೊಂದು ಮಹತ್ವದ ಹೆಜ್ಜೆಯೂ ಹೌದು. ಈ ಮೂಲಕ ಮುಂಬರುವ ದಿನಗಳಲ್ಲಿ ಬೆಂಗಳೂರಿನ ನಂತರ ರಾಜ್ಯದ ಪ್ರಮುಖ ಮೆಟ್ರೋಪಾಲಿಟನ್ ನಗರವಾಗಿ ಬೆಳೆಸುವ ಉದ್ದೇಶವೂ ಅಡಗಿದೆ ಎನ್ನಲಾಗಿದೆ.

ಅಧಿಕೃತ ಆದೇಶ ಹೊರಬಿದ್ದಿದ್ದು, ಹಲವು ದಿನಗಳ ಬೇಡಿಕೆಗೆ ಸ್ಪಂದನೆ ದೊರೆತಂತಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯಪತ್ರದಿಂದ ಪ್ರಕಟವಾದ ದಿನದಿಂದಲೇ ಇದು ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

ವರ್ಷಾರಂಭದಲ್ಲೇ ಸರ್ಕಾರ ಮೈಸೂರಿನ ಜನರಿಗೆ ಸಿಹಿ ಸುದ್ದಿ ನೀಡಿದೆ. ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮತ್ತೊಂದು ಕೊಡುಗೆ ಇದಾಗಿದೆ. ಮಹಾನಗರ ಪಾಲಿಕೆಯು ಈಗ ಹೊರವಲಯದ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯನ್ನೂ ಒಳಗೊಂಡಂತಾಗಿದೆ. ಅಲ್ಲಿಗೆ ಮೂಲಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿಯನ್ನೂ ನಿರ್ವಹಿಸಲಾಗುವುದೇ ಎನ್ನುವುದು ಆ ಭಾಗದವರ ನಿರೀಕ್ಷೆಯಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮುಖ್ಯವಾಗಿ ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು, ಎಸ್‌ಟಿಪಿ(ತ್ಯಾಜ್ಯ ನೀರು ಸಂಸ್ಕರಣ ಘಟಕ) ಸೇರಿದಂತೆ ವೈಜ್ಞಾನಿಕವಾಗಿ ಯಾವುದರ ಸಮಸ್ಯೆಯೂ ಇರದಂತೆ ಜಿಲ್ಲಾಡಳಿತವು ಬ್ಲ್ಯೂಪ್ರಿಂಟ್ ಸಿದ್ದಪಡಿಸಿ, ಅನುಷ್ಠಾನ ಮಾಡಬೇಕು. ಮುಂದಿನ 15-20 ವರ್ಷಗಳ ಮುಂದಾಲೋಚನೆಯಿಂದ ರೂಪಿತವಾಗಿ, ಯೋಜನೆಯ ಪರಿಕಲ್ಪನೆಗಳು ಸುಸಜ್ಜಿತ, ವ್ಯವಸ್ಥಿತವಾಗಿರುವಂತೆ ರೂಪಿಸುವ ಅಂಶಗಳು ಪ್ರಧಾನವಾದದ್ದು. ಹಾಗೆಯೇ ಬಹು ಸವಾಲಿನ ಕೆಲಸವೂ ಆಗಿದೆ. ಅತಿದೊಡ್ಡ ತಾಂತ್ರಿಕ ಮತ್ತು ಪ್ರವಾಸಿ ಕೇಂದ್ರವಾಗಿಯೂ ಮಾಡುವುದು ಯೋಜನೆಯ ಮುಖ್ಯಭಾಗ. ‘ಗ್ರೇಟರ್ ಮೈಸೂರು’ ಪರಿವರ್ತನೆಯ ಹಿಂದೆ ಸುತ್ತಮುತ್ತಲಿನ ಗ್ರಾಮಗಳು, ಹೊರವಲಯದ ಬಡಾವಣೆಗಳು, ಪಟ್ಟಣ ಪಂಚಾಯತಿ, ನಗರಸಭೆಗಳು ಸೇರುವುದರಿಂದ ಯೋಜನೆಗಳ ಜಾರಿ, ನಿರ್ವಹಣೆ ಸುಲಭವಾಗಲಿದೆ ಎಂಬ ಅಭಿಪ್ರಾಯವಿದೆ.

ನಗರ ವಿಸ್ತರಿಸಿದರಷ್ಟೇ ಸಾಲದು ಉದ್ಯೋಗ ಸೃಷ್ಟಿ, ಸವಾಲಾಗುವ ಘನ ತ್ಯಾಜ್ಯ ನಿರ್ವಹಣೆ, ಆಧುನಿಕ ತಂತ್ರಜ್ಞಾನ ಬಳಕೆ ಮೂಲಕ ನಿರ್ವಹಿಸುವ ರೀತಿಗಳ ಅನುಷ್ಠಾನ ಮಾದರಿ, ಕೈಗಾರಿಕಾ ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ಕೂಡಿರಲೇಬೇಕು. ವ್ಯಾಪ್ತಿ ವಿಸ್ತರಿಸಿದಂತೆ ಬಡಾವಣೆಗಳು ನಿರ್ಮಾಣವಾಗುವಾಗ ಒಳಚರಂಡಿ, ರಸ್ತೆಗಳು, ಕುಡಿಯುವ ನೀರಿನ ಸಂಪರ್ಕ, ವಿದ್ಯುತ್ ಸಂಪರ್ಕ, ಉದ್ಯಾನವನ ಕೂಡ ಸಾರ್ವಜನಿಕರ ಲಭ್ಯತೆಗೆ ಅನುಕೂಲಕರವಾಗಿರಬೇಕು, ವ್ಯವಸ್ಥಿತವಾಗಿಯೇ ಇರಬೇಕು. ನಿರ್ವಹಣೆಗೆ ಪೌರಕಾರ್ಮಿಕರು, ಅಗತ್ಯವಾದಲ್ಲಿ ಮತ್ತೊಂದು ಹೊರ ವರ್ತುಲ ರಸ್ತೆ ನಿರ್ಮಾಣ ಯೋಜನೆಗೂ ಸಿದ್ದವಿರಬೇಕು. ಸ್ಪಷ್ಟ ಅಂದಾಜಿನ ಮೂಲಕ ಯೋಜನೆ ರೂಪಿಸಿ, ಆದಾಯ ಸೃಷ್ಟಿಯ ಕಡೆಗೂ ಗಮನಹರಿಸಬೇಕು. ಇದು ಆಡಳಿತಾತ್ಮಕ ದೃಷ್ಟಿಯಿಂದ ಅಗತ್ಯವಾದದ್ದು.

ಈವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 11.46 ಲಕ್ಷವಿದ್ದ ಜನಸಂಖ್ಯೆಗೆ, ಅಧಿಕವಾಗಿ ಅಂದಾಜಿನ ಪ್ರಕಾರ 2.7 ಲಕ್ಷ ಜನರ ಸೇರ್ಪಡೆಯಾಗಲಿದ್ದಾರೆ. ಇದರಿಂದಾಗಿ, ಮೈಸೂರು ಮಹಾನಗರ ಪಾಲಿಕೆ ಸೇರಿದಂತೆ ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ರಮ್ಮನಹಳ್ಳಿ, ಕಡಕೊಳ, ಬೋಗಾಧಿ ಪಟ್ಟಣ ಪಂಚಾಯಿತಿಗಳು ಸೇರಿದಂತೆ, ಗ್ರಾಮ ಪಂಚಾಯಿತಿಗಳಾದ ಚಾಮುಂಡಿಬೆಟ್ಟ ತಪ್ಪಲು ಸಂಪೂರ್ಣವಾಗಿ, ಮೇಟಗಳ್ಳಿ, ಆಲನಹಳ್ಳಿ, ಲಲಿತಾದ್ರಿಪುರ, ಸಿದ್ದಲಿಂಗಪುರ, ಬೆಲವೆತ್ತ, ಕೆಸರೆ ಸೇರ್ಪಡೆಯಾಗಲಿವೆ. ಇಲವಾಲ ಗ್ರಾಮ ಪಂಚಾಯತಿಯ ಇಲವಾಲ, ಕರಕನಹಳ್ಳಿ, ಮೈದನಹಳ್ಳಿ, ಮೇಗಳಾಪುರ, ಧನಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧನಗಳ್ಳಿ, ಯಡಹಳ್ಳಿ, ಕೆಂಚಲಗೂಡು, ಹಾಲಾಳು, ಚೌಡಹಳ್ಳಿ(ಕೋಟೆಹುಂಡಿ) ಗ್ರಾಮಗಳು, ಮಲ್ಲಹಳ್ಳಿ(ಬೀರಿಹುಂಡಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಹಳ್ಳಿ-ಬೀರಿಹುಂಡಿ, ಗೋಹಳ್ಳಿ, ಕುಮಾರಬೀಡು, ಬಲ್ಲಹಳ್ಳಿ ಗ್ರಾಮಗಳು, ನಾಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ಯಾದನಹಳ್ಳಿ ಮತ್ತು ನಾಗವಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗವಾಲ, ಭೂಮ್ಮನಹಳ್ಳಿ, ಹುಯಿಲಾಳು ಗ್ರಾಮಗಳು ಹೊಸದಾಗಿ ಸೇರಿಕೊಳ್ಳಲಿವೆ.

‘ಗ್ರೇಟರ್ ಮೈಸೂರು’ ಕುರಿತಾಗಿ 2025ರ ನವೆಂಬರ್ ತಿಂಗಳಿನಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಾಲಿಕೆ ಕಚೇರಿ ಸಭಾಂಗಣದಲ್ಲಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ, ಭೈರತಿ ಸುರೇಶ್, ಶಾಸಕರದ ತನ್ವಿರ್ ಶೇಟ್, ಜಿ ಟಿ ದೇವೆಗೌಡ, ಹರೀಶ್ ಗೌಡ, ಪರಿಷತ್ ಸದಸ್ಯರಾದ ಯತಿಂದ್ರ ಸಿದ್ದರಾಮಯ್ಯ, ಹೆಚ್ ವಿಶ್ವನಾಥ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಮೊದಲ ಸಭೆಯನ್ನು ನಡೆಸಿ, ‘ಮೈಸೂರಿನ ಘನತೆಗೆ, ಸಂಸ್ಕೃತಿಗೆ, ವಿಶಾಲತೆಗೆ ಧಕ್ಕೆಯಾಗದಂತೆ ಯೋಜನೆ ರೂಪಿಸಬೇಕು’ ಎಂದು ನಿರ್ದೇಶನ ನೀಡಿದ್ದರು.

ಅದರಂತೆ, ಮೈಸೂರು ಇದೀಗ ಬೃಹತ್ ಮೈಸೂರು ಮಹಾನಗರ ಪಾಲಿಕೆಯಾಗಿದೆ. ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗೊಳಗಾಗಿ, ಯಾವುದೇ ಆಕ್ಷೇಪಣೆ, ಸಲಹೆ ಇದ್ದಲ್ಲಿ ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ, 9ನೇ ಮಹಡಿ, ವಿವಿ ಗೋಪುರ, ಬೆಂಗಳೂರು ಇವರಿಗೆ ಲಿಖಿತ ಪತ್ರ ಮುಖೇನ, ಕಾರಣ ಸಹಿತವಾಗಿ ಸಲ್ಲಿಸಬೇಕಾಗಿ ಕೋರಿರುತ್ತಾರೆ. ನಿಗದಿತ ಸಮಯದಲ್ಲಿ ಸಲ್ಲಿಸಲಾದ ದೂರುಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ.

ಬೃಹತ್‌ ಮೈಸೂರು ಮಹಾನಗರ ಪಾಲಿಕೆ ಕುರಿತು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿಯವರು ಈ ದಿನ.ಕಾಮ್ ಜತೆಗೆ ಮಾತನಾಡಿ, “ನಗರಿಕರಣವೇ ಅಭಿವೃದ್ಧಿ ಎನ್ನುವ ಭ್ರಮೆಯಿಂದ ಸರ್ಕಾರಗಳು ಹೊರಬರಬರಬೇಕು. ಪ್ರಸ್ತುತ ಅಗತ್ಯತೆಯ ಅರಿವು ಇರದೇ ಮಾಡುವ ತಪ್ಪುಗಳು ಕುತ್ತು ತರುವ ಅಪಾಯಗಳೇ ಹೆಚ್ಚು. ಇದೆಲ್ಲವೂ ಸ್ಪಷ್ಟವಾಗಿ ಅರ್ಥವಾಗುವಂತದ್ದು ‘ಗ್ರೇಟರ್ ಮೈಸೂರು’ ಯೋಜನೆಯ ಹಿಂದೆ ಭೂ ಮಾಫಿಯ ಇದೆ. ಸರ್ಕಾರ ಎಲ್ಲ ಯೋಜನೆಯಂತೆ ಪ್ರಮುಖವಾಗಿ ಕೃಷಿಗೆ ‘ಭೂಮಿ’ ಮೀಸಲು ಇಡಬೇಕಿತ್ತು. ಆದರೆ, ಅದನ್ನೆಲ್ಲ ಗಾಳಿಗೆ ತೂರಿ ಕಾರ್ಪೋರೆಟ್ ಕುಳಗಳ ಸಂತೈಸುವಿಕೆಯಲ್ಲಿ ಆಹಾರ ಉತ್ಪಾದನೆ ಕಡೆಗಣಿಸುತ್ತಿದೆ. ಹಳ್ಳಿಗಳ ಕಡೆಗಣನೆ ಉಚಿತವಲ್ಲ, ಕೃಷಿ ಸಮುದಾಯ ಗ್ರೇಟರ್ ಮೈಸೂರು ವ್ಯಾಪ್ತಿಗೆ ಸೇರಿದರೆ ಕಂದಾಯ ಹೆಚ್ಚುತ್ತದೆ. ವಿದ್ಯುತ್ ನಿಯಮ, ನೀರಿನ ನಿಯಮಗಳೇ ಬದಲಾಗುತ್ತವೆ. ಉಳುವ ಭೂಮಿ ಹೋಗಿ ಲೇಔಟ್ ಆಗುತ್ತದೆ. ಇದರಿಂದ, ಏನನ್ನು ಸಾಧಿಸಲು ಸಾಧ್ಯವಿದೆ? ಇಂತಹ ಅವೈಜ್ಞಾನಿಕ ಯೋಜನೆಗಳು ರೈತರಿಗೆ ಮಾರಕವಾಗಿ ಪರಿಣಮಿಸಲಿವೆ” ಎಂದು ಹೇಳಿದರು.

ಎಸ್‌ಡಿಪಿಐ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, “ಸರ್ಕಾರ ರಿಯಲ್ ಎಸ್ಟೇಟ್ ಮಾಫಿಯಾ ಒತ್ತಡಕ್ಕೆ ಮಣಿದು ‘ಗ್ರೇಟರ್ ಮೈಸೂರು’ ಮಾಡಿದೆಯೇ ಹೊರತು, ಇದರಿಂದ ಯಾವುದೇ ಪ್ರಯೋಜನ ಇಲ್ಲ. ಈಗಿರುವ ಪಾಲಿಕೆ ಕಿಂಚಿತ್ತು ಅಭಿವೃದ್ಧಿ ಕೆಲಸ ಕೈಗೊಳ್ಳಲು ಆಗಿಲ್ಲ, ಆರ್ಥಿಕವಾಗಿ ದಿವಾಳಿಯಾಗಿದೆ. ಹೀಗಿರುವಾಗ, ಸಂಪನ್ಮೂಲ ಕ್ರೋಢಿಕರಣ, ನಿರ್ವಹಣೆ, ಅನುಷ್ಠಾನ ಹೇಗೆ ಸಾಧ್ಯ? ಸಿಟಿಯಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಕುಡಿಯುವ ನೀರಿನಿಂದ ಹಿಡಿದು, ರಸ್ತೆ, ವಿದ್ಯುತ್ ಇನ್ಯಾವುದೇ ಆಗಿರಲಿ ಕಲ್ಪಿಸಲು ಆಗದಿರುವಾಗ, ವ್ಯಾಪ್ತಿ ಹೆಚ್ಚು ಮಾಡಿಕೊಂಡು ನಿರ್ವಹಣೆ ಹೇಗೆ ಮಾಡಲು ಸಾಧ್ಯ? ಈಗಿರುವ ವ್ಯಾಪ್ತಿಯ ಸೌಕರ್ಯ ಕಲ್ಪಿಸಲಾಗದವರು, ದೊಡ್ಡ ವ್ಯಾಪ್ತಿಗೆ ಯಾವ ವೈಜ್ಞಾನಿಕ ಮಾದರಿ ಅನುಸರಿಸಲು ಸಾಧ್ಯವಿದೆ. ಇದರಲ್ಲಿ, ರಾಜಕೀಯ ಇಚ್ಛಾಶಕ್ತಿ ಇದ್ದರೆ ಕಾಂಗ್ರೆಸ್‌ಗೆ ಖಂಡಿತ ಲಾಭ ಇಲ್ಲ, ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ರಾಜಕೀಯಕ್ಕೆ ಅನುಕೂಲ ಮಾಡಿಕೊಟ್ಟಂತೆಯೇ ಹೊರತು ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ” ಎಂದು ಛೇಡಿಸಿದರು.

ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಮಾತನಾಡಿ, “ಈಗಿರುವ ಮೈಸೂರು ಮಹಾನಗರ ಪಾಲಿಕೆ ಸರಿಯಾದ ರೀತಿಯಲ್ಲಿ ಕರ್ತವ್ಯ ನಿಭಾಯಿಸಿಲ್ಲ. ಕುಡಿಯುವ ನೀರಿನ ಮೂಲ ಉಳಿಸಿಕೊಳ್ಳಲು ಆಗಿಲ್ಲ. ನಗರದ ಹೊರವಲಯ, ವರುಣಾ ಕಡೆ ಹೋದರೆ ಯುಜಿಡಿ ನೀರು ಕುಡಿಯುವ ನೀರಿಗೆ ಸೇರುತ್ತಿದೆ. ಇನ್ನು ರೈತರ ಭೂಮಿಗೆ ಕೊಳಚೆ ಸೇರುವುದರಿಂದ ವ್ಯವಸಾಯ ಮಾಡಲಾಗದ ಪರಿಸ್ಥಿತಿ ಎದುರಾಗಿದೆ. ನಗರದಲ್ಲಿ ಉದ್ಯಾನವನ ನಿರ್ವಹಣೆ ಇಲ್ಲ. ಸರ್ಕಾರಿ ಜಾಗಗಳಲ್ಲಿ ದೇವಸ್ಥಾನಗಳು ನಿರ್ಮಾಣವಾಗುತ್ತಿವೆ, ಇವುಗಳನ್ನು ಕೇಳೋರಿಲ್ಲ. ಸರ್ಕಾರಿ ಕಟ್ಟಡಗಳ ನಿರ್ವಹಣೆ, ಕಂದಾಯ, ಬಾಡಿಗೆ ಸಂಗ್ರಹಕ್ಕೆ ವೈಜ್ಞಾನಿಕ ಪರಿಹಾರ ಕಂಡುಕೊಂಡಿಲ್ಲ. ಶೌಚಾಲಯ, ಪಾರ್ಕಿಂಗ್, ಕುಡಿಯುವ ನೀರಿನ ವ್ಯವಸ್ಥೆ ಇಲ್ಲವೇ ಇಲ್ಲ. ಇನ್ನು ರಸ್ತೆಗಳು ಗುಂಡಿ ಬಿದ್ದಿವೆ ನಿರ್ವಹಣೆ ಮಾಡುವುದೇ ಇಲ್ಲ. ನಗರ ವ್ಯಾಪ್ತಿಯಲ್ಲಿ ಕಂದಾಯ ಬಡಾವಣೆ, ಮಹಾನಗರ ಪಾಲಿಕೆ ಬಡಾವಣೆಗಳು ಇವೆ. ಅಗತ್ಯ ಸೌಕರ್ಯ ಒದಗಿಸಲು ಆಗಿಲ್ಲ. ಕುಡಿಯುವ ನೀರಿನ ಕೊರತೆ ಸಾಕಷ್ಟಿದೆ ಇದನ್ನೆಲ್ಲ ಮಾಡಲಾಗದ ಪಾಲಿಕೆ ‘ಗ್ರೇಟರ್ ಮೈಸೂರು’ ಆಗಿ ನಿಜಕ್ಕೂ ಮಾಡುತ್ತದೆಯಾ? ಈಗಿರುವುದನ್ನು ಮೊದಲು ಮಾಡಲಿ, ಈಗಿನ ಪರಿಸ್ಥಿತಿ ಸುಧಾರಣೆಯಾಗದೆ ಯಾವವುದೇ ಬದಲಾವಣೆಯೂ ಸಾಧ್ಯವಿಲ್ಲ. ಮೈಸೂರಿನ ಘನತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಇಂತಹ ಯೋಜನೆಗಳನ್ನು ರೂಪಿಸುವುದು ಸರಿಯಲ್ಲ. ಈಗಿರುವ ಸಮಸ್ಯೆಗಳಿಗೆ ಸಮರ್ಥವಾಗಿ ಸ್ಪಂದಿಸಿ, ಬಗೆಹರಿಸಿ ಬಳಿಕ ನಿರ್ಧಾರ ಕೈಗೊಳ್ಳಬಹುದಿತ್ತು. ಈಗ ಅಪ್ರಸ್ತುತವಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಿಳೆಯರ ಮೇಲಿನ ʼಪುರುಷಹಂಕಾರʼದ ದೌರ್ಜನ್ಯಕ್ಕೆ ಕೊನೆ ಎಂದು?

ಸಾಮಾಜಿಕ ಹೋರಾಟಗಾರ್ತಿ ಪಿ ಎಸ್ ಸಂಧ್ಯಾ ಮಾತನಾಡಿ, “ಮೈಸೂರು ನಗರದ ವಿಸ್ತರಣೆ ಮತ್ತು ನಗರೀಕರಣವನ್ನು ಒಂದು ವಿವೇಚನಾತ್ಮಕ ನೋಟದಿಂದ ಹೇಳುವುದಾದರೆ, ​ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸುವ ಅಥವಾ ಕೇಂದ್ರೀಕೃತ ನಗರೀಕರಣಕ್ಕೆ ಒತ್ತು ನೀಡುವ ಪ್ರಕ್ರಿಯೆಯು ಮೇಲ್ನೋಟಕ್ಕೆ ಅಭಿವೃದ್ಧಿಯಂತೆ ಕಂಡರೂ, ಅದರ ಹಿಂದೆ ಅನೇಕ ಗಂಭೀರ ಸವಾಲುಗಳು ಮತ್ತು ಹಿತಾಸಕ್ತಿಗಳು ಅಡಗಿವೆ. ಈ ಬಗ್ಗೆ ಕೂಲಂಕಷವಾದ ಅಧ್ಯಯನ ಹಾಗೂ ದೂರದೃಷ್ಟಿಯ ಅಗತ್ಯವಿದೆ” ಎಂದು ಹೇಳಿದರು.

“ಮೂಲಸೌಕರ್ಯದ ಸವಾಲುಗಳು ಅತಿಯಾಗಿ ಕೇಂದ್ರೀಕೃತವಾದರೆ ಕುಡಿಯುವ ನೀರಿನ ಪೂರೈಕೆ, ಒಳಚರಂಡಿ ವ್ಯವಸ್ಥೆ(UGD) ನಿರ್ವಹಿಸುವುದು ಅತ್ಯಂತ ಕಷ್ಟಕರವಾಗುತ್ತದೆ. ಜನದಟ್ಟಣೆ ಹೆಚ್ಚಾದಂತೆ ಈ ಸೇವೆಗಳ ಮೇಲೆ ಒತ್ತಡ ಬೀಳುತ್ತದೆ. ​ತೆರಿಗೆಯ ಹೊರೆ ಪಾಲಿಕೆ ವ್ಯಾಪ್ತಿಗೆ ಹೊಸ ಹಳ್ಳಿಗಳನ್ನು ಸೇರಿಸುವುದರಿಂದ ಭೂಮಿಯ ಮೌಲ್ಯ ಹೆಚ್ಚಾಗಬಹುದು. ಆದರೆ, ಸಾಮಾನ್ಯ ಜನರಿಗೆ ಮತ್ತು ಹಳ್ಳಿಯ ರೈತರಿಗೆ ‘ನಗರ ತೆರಿಗೆ’ಯ ಹೊರೆ ಅತಿಯಾಗುತ್ತದೆ. ಇದು ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು” ಎಂದು ಕಳವಳ ವ್ಯಕ್ತಪಡಿಸಿದರು.

“​ಪರಿಸರ ಮತ್ತು ಸಂಚಾರ ದಟ್ಟಣೆ ವಿಕೇಂದ್ರೀಕೃತ ನಗರ ಪ್ರದೇಶಗಳು ಉತ್ತಮ. ಒಂದೇ ಕಡೆ ಜನದಟ್ಟಣೆ ಹೆಚ್ಚಾದಷ್ಟು ವಾಹನ ಸಂಚಾರದ ಕಿರಿಕಿರಿ ಮತ್ತು ವಾಯುಮಾಲಿನ್ಯ ಉಲ್ಬಣಗೊಳ್ಳುತ್ತದೆ. ಇದು ಜನರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ​ರಿಯಲ್ ಎಸ್ಟೇಟ್ ಲಾಬಿ ಮತ್ತು ರಾಜಕೀಯ ಹಿತಾಸಕ್ತಿ, ​ನಗರದ ವಿಸ್ತರಣೆಯ ಹಿಂದೆ ಲಾಬಿ ಮತ್ತು ಅದಕ್ಕೆ ಪೂರಕವಾದ ರಾಜಕೀಯ ಹಿತಾಸಕ್ತಿಗಳು ಕೆಲಸ ಮಾಡುತ್ತಿರುವ ಸಾಧ್ಯತೆ ಹೆಚ್ಚಿದೆ. ಕೇವಲ ಭೂಮಿಯ ಬೆಲೆ ಹೆಚ್ಚಿಸಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ತರಾತುರಿಯಲ್ಲಿ ನಗರ ವಿಸ್ತರಣೆ ಮಾಡುವುದು ಸರಿಯಲ್ಲ. ​ಯಾವುದೇ ಯೋಜನೆಯನ್ನು ಜಾರಿಗೆ ತರುವ ಮೊದಲು ಅದರ ಸಾಧಕ-ಬಾಧಕಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಯಬೇಕು. ಸ್ಥಳೀಯ ನಿವಾಸಿಗಳ ಅಭಿಪ್ರಾಯ ಪಡೆಯಬೇಕು. ನಗರೀಕರಣವು ಕೇವಲ ಕಟ್ಟಡಗಳ ಏರಿಕೆಯಾಗಬಾರದು, ಅದು ಜನರ ಜೀವನಮಟ್ಟದ ಸುಧಾರಣೆಯಾಗಬೇಕು. ಆದ್ದರಿಂದ, ಪ್ರಜಾತಾಂತ್ರಿಕವಾಗಿ ಜನಾಭಿಪ್ರಾಯದ ಮೂಲಕ ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವುದು ಹೆಚ್ಚು ಸೂಕ್ತ” ಎಂದು ಸಲಹೆ ನೀಡಿದರು.

ಬೃಹತ್‌ ಮೈಸೂರು ಮಹಾನಗರದ ಯಶಸ್ಸು ಸಾಧಿಸುವುದು ಕೇವಲ ವಿಸ್ತರಣೆಯಿಂದಲ್ಲ. ವೈಜ್ಞಾನಿಕ ಯೋಜನೆ, ಪಾರದರ್ಶಕ ನಿರ್ವಹಣೆ ಮತ್ತು ಸ್ಥಳೀಯರ ಅಭಿಪ್ರಾಯಗಳನ್ನು ಪರಿಗಣಿಸುವುದರಲ್ಲಿ ಅಡಗಿದೆ. ಮುಂದಿನ ದಿನಗಳಲ್ಲಿ ಟ್ರ್ಯಾಫಿಕ್, ತ್ಯಾಜ್ಯ ನಿರ್ವಹಣೆ, ನೀರು ಮತ್ತು ಪರಿಸರ ಸಂರಕ್ಷಣೆಯಂತಹ ಸಮಸ್ಯೆಗಳನ್ನು ಪರಿಹರಿಸಿ, ಸುಸ್ಥಿರ ಅಭಿವೃದ್ಧಿಯ ಮಾದರಿಯಾಗಿ ‘ಗ್ರೇಟರ್ ಮೈಸೂರು’ ಮಾರ್ಪಡಬೇಕು. ಇದು ನಗರದ ಘನತೆ, ಸಂಸ್ಕೃತಿ ಮತ್ತು ಕೃಷಿ ಸಮುದಾಯದ ಹಿತಗಳನ್ನು ಕಾಪಾಡಿದರೆ ಮಾತ್ರ ಸಾರ್ಥಕವಾಗಲಿದೆ. ಆಕ್ಷೇಪಣೆಗಳನ್ನು ಪರಿಗಣಿಸಿ, ದೂರದೃಷ್ಟಿಯೊಂದಿಗೆ ಅನುಷ್ಠಾನ ಮಾಡಿದರೆ, ಮೈಸೂರು…. ರಾಜ್ಯದ ಹೊಸ ಬೆಳಕಿನ ನಗರವಾಗಿ ಬೆಳೆಯುವ ಸಾಧ್ಯತೆಯಿದೆ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...