ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿರುವ ರಾಣಿಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ನಲ್ಲಿ, ವಿಆರ್ ಟ್ರಸ್ಟ್ ವತಿಯಿಂದ ‘ಗ್ರೇಟರ್ ಮೈಸೂರು-ಗ್ರೇಟರ್ ದೃಷ್ಟಿಕೋನ’ ಹಾಗಾದರೆ, ಮೈಸೂರಿಗೆ ನಿಜವಾಗಿ ಬೇಕಿರುವುದು ಏನು? ಎಂಬ ವಿಷಯದ ಕುರಿತು ಸಾರ್ವಜನಿಕ ಚರ್ಚಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಸಾರ್ವಜನಿಕ ಚರ್ಚಾ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು, ನಿವೃತ್ತ ಉನ್ನತಾಧಿಕಾರಿಗಳು, ಚಿಂತಕರು, ಅಕಾಡೆಮಿಷಿಯನ್‌ಗಳು, ಪರಿಸರವಾದಿಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳು ಭಾಗವಹಿಸಿ, ಮೈಸೂರಿನ ಭವಿಷ್ಯದ ಅಭಿವೃದ್ಧಿ ಕುರಿತಂತೆ ವಿಭಿನ್ನ ಹಾಗೂ ಮುಂದಾಲೋಚನೆಯುಳ್ಳ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಸರ್ಕಾರದಿಂದ ಮೈಸೂರಿನ ಅಭಿವೃದ್ಧಿಗೆ ತರಲಾಗಿರುವ ವಿವಿಧ ಯೋಜನೆಗಳ ಕುರಿತು ವಿವರಿಸಿ, ಮೈಸೂರಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು ಅಭಿವೃದ್ಧಿಯೊಂದಿಗೆ ಸಮಾನವಾಗಿ ಅಗತ್ಯವೆಂದು ಹೇಳಿದರು.
ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ. ಹರೀಶ್ ಗೌಡ ಮಾತನಾಡಿ, ನಗರ ಯೋಜನೆ ಮತ್ತು ಆಡಳಿತದ ಸೂಕ್ಷ್ಮತೆಗಳ ಬಗ್ಗೆ, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸಮನ್ವಯ ಸಾಧಿಸಿದರೆ ಮಾತ್ರ ‘ಗ್ರೇಟರ್ ಮೈಸೂರು’ ಕನಸನ್ನು ನಿಜವಾಗಿಸಬಹುದು ಎಂದು ಅಭಿಪ್ರಾಯಪಟ್ಟರು.
ಖ್ಯಾತ ನಟ ಹಾಗೂ ಚಿಂತಕರಾದ ಪ್ರಕಾಶ್ ಬೆಳವಾಡಿ ಮಾತನಾಡಿ, ಬೆಂಗಳೂರು ನಗರದಲ್ಲಿ ಕಂಡುಬಂದ ಅವ್ಯವಸ್ಥಿತ ಮೂಲಸೌಕರ್ಯ ಅಭಿವೃದ್ಧಿಯನ್ನು ಮೈಸೂರು ಅನುಸರಿಸಬಾರದು ಎಂದು ಎಚ್ಚರಿಕೆ ನೀಡಿದರು. ಮೈಸೂರಿನ ಅಸ್ತಿತ್ವ, ಹಕ್ಕುಗಳು ಹಾಗೂ ಭವಿಷ್ಯವನ್ನು ಕಾಪಾಡಲು ನಾಗರಿಕರು ಒಗ್ಗಟ್ಟಾಗಿ ಒಂದು ವೇದಿಕೆಯಲ್ಲಿ ನಿಲ್ಲಬೇಕು ಎಂದು ಕರೆ ನೀಡಿದರು.
ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ರವೀಂದ್ರ ಅವರು ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಗಳು ಹಾಗೂ ಬೆಂಗಳೂರಿನ ಪರಂಪರೆ ಸಂರಕ್ಷಣೆಯಲ್ಲಿ ಪಡೆದ ಅನುಭವಗಳನ್ನು ಹಂಚಿಕೊಂಡು, ಮೈಸೂರಿಗೆ ಹೊಂದಿಕೊಳ್ಳುವಂತಹ ಉತ್ತಮ ಮಾದರಿಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದರು.
ನರವೈದ್ಯರು ಹಾಗೂ ವಿಆರ್ ಟ್ರಸ್ಟ್‌ನ ಸ್ಥಾಪಕ ಕಾರ್ಯದರ್ಶಿಗಳಾದ ಡಾ. ಸುಶ್ರುತ್ ಗೌಡ ಮಾತನಾಡಿ, ಮೈಸೂರಿನ ನಿರ್ಮಾಣದಲ್ಲಿ ಒಡೆಯರ್ ವಂಶದ ಅಪಾರ ಕೊಡುಗೆ, ಮೈಸೂರಿನ ಪರಂಪರೆ ಸಂರಕ್ಷಣೆಯ ಮಹತ್ವ ಹಾಗೂ ‘ಗ್ರೇಟರ್ ಮೈಸೂರು’ ಪರಿಕಲ್ಪನೆಯ ವ್ಯಾಪಕ ಪರಿಣಾಮಗಳ ಕುರಿತು ಮಾತನಾಡಿದರು. ಮೈಸೂರಿನ ಅಭಿವೃದ್ಧಿ, ಅದರ ಮೂಲ ಸಂಸ್ಕೃತಿ ಮತ್ತು ಮೌಲ್ಯಗಳಲ್ಲಿ ನೆಲೆಸಿರಬೇಕು ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಆಲೋಚನೆಗಳ ಮೇಲೆ ಪ್ರಭಾವ ಬೀರುವುದು, ಬದುಕಿನ ಮೇಲೆ ಪ್ರಭಾವಿಸುವ ಕೆಲಸ ಸಾಂಸ್ಕೃತಿಕ ಹೋರಾಟ: ರಹಮತ್ ತರೀಕೆರೆ
ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಕೆ.ಸಿ. ಬಸವರಾಜು, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಎನ್.ಕೆ. ಲೋಕನಾಥ್, ಕೈಗಾರಿಕೋದ್ಯಮಿ ನಾಗರಾಜ ಗರ್ಗೇಶ್ವರಿ, ಮೈಸೂರು ಎಕ್ಸಿಬಿಷನ್ ಅಥಾರಿಟಿ ಮಾಜಿ ಅಧ್ಯಕ್ಷ ಕೌಟಿಲ್ಯ ರಘು, ಸಿಟಿ ಹೈಲೈಟ್ಸ್ ಪತ್ರಿಕೆಯ ಮುಖ್ಯ ಸಂಪಾದಕರಾದ ಶ್ಯಾಮ್ ಸುಂದರ್ ವಟ್ಟಂ, ಚಾಯ ಕಾಲೇಜಿನ ಪ್ರಾಂಶುಪಾಲ ಡಾ. ಆಂಟನಿ ಪೌಲ್ರಾಜ್, ನಟರಾಜ ಶಾಲೆಯ ಪ್ರಾಂಶುಪಾಲ ಡಾ. ರಾಜೇಶ್ ಸೇರಿದಂತೆ ಅನೇಕ ಎನ್‌ಜಿಒ ಪ್ರತಿನಿಧಿಗಳು, ಪರಿಸರವಾದಿಗಳು, ಸಾಮಾಜಿಕ ಹೋರಾಟಗಾರರು, ಅಕಾಡೆಮಿಷಿಯನ್‌ಗಳು ಹಾಗೂ ಪ್ರಗತಿಪರ ಚಿಂತಕರು ಚರ್ಚೆಯಲ್ಲಿ ಇದ್ದರು.





