ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಬಳಿಯ ಕೇಶಿಪ್ ರಸ್ತೆಯ ಟೋಲ್ ನಿರ್ಮಾಣಕ್ಕೆ ವಿರೋಧ ವ್ಯಕ್ತವಾಗಿ ಎರಡು ಬಾರಿ ಪ್ರತಿಭಟನೆ ಎರಡು ಬಾರಿ ಸಂಧಾನ ಸಭೆ ನಡೆದು ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದರೂ ಕೆಲ ರೈತರಲ್ಲಿ ಸಮಾಧಾನ ಕಾಣಲಿಲ್ಲ.
ಶಾಸಕ ಎಸ್.ಆರ್.ಶ್ರೀನಿವಾಸ್ ನೇತೃತ್ವದಲ್ಲಿ ಎರಡನೇ ಸಭೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಯಿತು. ತಹಶೀಲ್ದಾರ್ ಆರತಿ.ಬಿ, ರೈತ ಸಂಘದ ಎಲ್ಲಾ ಮುಖಂಡರು, ಕೇಶಿಪ್ ಅಧಿಕಾರಿಗಳು, ಟೋಲ್ ಗುತ್ತಿಗೆದಾರರು ಸುಮಾರು ಎರಡು ತಾಸು ಸುದೀರ್ಘ ಚರ್ಚೆ ನಡೆಸಿ ದ್ವಿಚಕ್ರ, ತ್ರಿಚಕ್ರ, ಟ್ರ್ಯಾಕ್ಟರ್ ಹಾಗೂ ಸ್ಥಳೀಯರ ವೈಟ್ ಬೋರ್ಡ್ ಕಾರುಗಳಿಗೆ ಉಚಿತ ಪ್ರಯಾಣಕ್ಕೆ ಒಪ್ಪಿಗೆ ಸಿಕ್ಕಿತು. ಆದರೆ ರೈತರು ಕೃಷಿ ಉತ್ಪನ್ನ ಸಾಗಿಸುವ ಬೊಲೆರೋ ವಾಹನಕ್ಕೆ ಅನುವು ಮಾಡಲು ರೈತರು ಒತ್ತಾಯ ಹೇರಿದರು.
ನಂತರ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಮತ್ತೊಮ್ಮೆ ಸಭೆಯಿಂದ ಹೊರ ನಡೆದು ಚರ್ಚೆ ಮಾಡಿಕೊಂಡು ಸಭೆಗೆ ಹಾಜರಾಗಿ ಯಲ್ಲೋ ಬೋರ್ಡ್ ಅಂದರೆ ಕಮರ್ಷಿಯಲ್ ವಾಹನ. ಇದಕ್ಕೆ ಉಚಿತ ನೀಡಿದರೆ ಟೋಲ್ ತೆರಿಗೆ ಹೇಗೆ ಸಂಗ್ರಹ ಮಾಡುವುದು. ಹಾಗೆಯೇ ಹೇಗೆ ಸರ್ಕಾರಕ್ಕೆ ಹಣ ಭರಿಸುವುದು ಎಂದು ಗುತ್ತಿಗೆದಾರರು ಮನವಿ ಮಾಡಿದರು. ಶಾಸಕರ ಮಾತಿನಂತೆ ರೈತರ ಬೈಕ್, ಟ್ರ್ಯಾಕ್ಟರ್ ಹಾಗೂ ಆಟೋಗೆ ಅನುವು ಮಾಡಿದ್ದೇವೆ. ಇದರಲ್ಲೇ ನಮಗೆ ಸಾಕಷ್ಟು ನಷ್ಟ ಸಂಭವಿಸುತ್ತದೆ. ಮತ್ತೇ ಕಮರ್ಷಿಯಲ್ ವಾಹನಕ್ಕೂ ಉಚಿತ ನೀಡಿದರೆ ಟೋಲ್ ನಡೆಸೋದು ಕಷ್ಟಸಾಧ್ಯ ಎಂದರು.
ಎಲ್ಲಾ ಚರ್ಚೆ ಆಲಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಎಲ್ಲಾ ವಾಹನಕ್ಕೆ ಉಚಿತ ನೀಡುವುದು ಕಷ್ಟ. ತಾಲ್ಲೂಕಿನ ರೈತರಿಗೆ ಅನುಕೂಲಕ್ಕೆ ತಕ್ಕಂತೆ ಉಚಿತ ಪ್ರಯಾಣಕ್ಕೆ ಅನುವು ಮಾಡಲಾಗುತ್ತಿದೆ. ಕಮರ್ಷಿಯಲ್ ವಾಹನ ಬಗ್ಗೆ ಮುಂದಿನ ಹದಿನೈದು ದಿನಗಳ ಸರ್ವೇ ನಡೆಸಿ ಎಷ್ಟು ವಾಹನ ಓಡಾಡುತ್ತದೆ. ಅಂಕಿ ಅಂಶಗಳು ಪಡೆದು ಮತ್ತೊಮ್ಮೆ ಚರ್ಚೆ ಮಾಡುತ್ತೇನೆ. ಕಡಿಮೆ ವಾಹನ ಇದ್ದರೆ ಉಚಿತ ಪ್ರಯಾಣಕ್ಕೆ ಪ್ರಯತ್ನ ಮಾಡೋಣ. ಸ್ಥಳೀಯ ಕಮರ್ಷಿಯಲ್ ವಾಹನಕ್ಕೆ ತಿಂಗಳ ಪಾಸ್ ವ್ಯವಸ್ಥೆ ಮಾಡಲಾಗುವುದು. ನಿಗದಿತ ತೆರಿಗೆಯಲ್ಲಿ ಶೇಕಡಾ 50 ರ ರಿಯಾಯತಿ ಪಾಸ್ ಸಿಗಲಿದೆ. ಉಳಿದಂತೆ ಹದಿನೈದು ದಿನಗಳ ಸರ್ವೇ ಮುಗಿದ ಬಳಿಕ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ಸಭೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಜೆಡಿಎಸ್ ಮುಖಂಡ ಹೊನ್ನಗಿರಿಗೌಡ, ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್, ಸಿ.ಟಿ.ಪ್ರಕಾಶ್, ಗ್ರಾಪಂ ಸದಸ್ಯ ರೇಣುಕಾ ಪ್ರಸಾದ್, ಜಿ.ಎಂ.ಶಿವಾನಂದ್, ಪ್ರತಾಪ್, ರಾಜಣ್ಣ, ಸಿ.ಎಸ್.ಪುರ ಹರೀಶ್ ಇತರರು ಇದ್ದರು.





