ನ್ಯಾಯಾಲಯದ ಆವರಣದಲ್ಲಿ ಪ್ರಕರಣವೊಂದರ ಹಿನ್ನಲೆ ಆಗಮಿಸಿದ್ದ ಮಹಿಳೆ ಮೇಲೆ ಡೆಡ್ಲಿ ಅಟ್ಯಾಕ್ ನಡೆಸಿದ ನಾಯಿ ಮುಖ, ಕುತ್ತಿಗೆ ಕಚ್ಚಿ ಭಯಾನಕ ಗಾಯಗೊಳಿಸಿದ ಘಟನೆ ಇಡೀ ಗುಬ್ಬಿ ಪಟ್ಟಣವನ್ನೇ ಬೆಚ್ಚಿಬೀಳಿಸಿದೆ.
ತಿಪಟೂರು ತಾಲೂಕಿನ ಬೀರಸಂದ್ರ ಗ್ರಾಮದ ಮಹಿಳೆ ಗಂಗಾಭವಾನಿ ಅವರ ಮೇಲೆ ದಾಳಿಮಾಡಿದ ನಾಯಿ ಹುಚ್ಚು ಹಿಡಿದಿರುವ ಸಾಧ್ಯತೆ ಇದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಆಕೆಯ ಮುಖದ ಭಾಗಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಕಣ್ಣಿನ ಕೆಳ ಭಾಗ ಕೆನ್ನೆ ಕಿತ್ತು ಹೊರ ಬಂದಿದೆ. ಗುಬ್ಬಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ತುಮಕೂರು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಗಂಭೀರ ಗಾಯಗೊಂಡ ಗಂಗಾಭವಾನಿ ಕೇಸ್ ಹಿನ್ನಲೆ ಬೆಳಿಗ್ಗೆ ಕೋರ್ಟ್ ಬಂದಿದ್ದರು. ಮಧ್ಯಾಹ್ನ ವೇಳೆ ಶೌಚಾಲಯ ಹೋಗಿ ಬರುವ ವೇಳೆ ಆವರಣದಲ್ಲಿದ್ದ ನಾಯಿ ಏಕಾಏಕಿ ಆಕೆಯ ಮೇಲೆರಗಿ ಕಚ್ಚಿ ಗಾಯಗೊಳಿಸಿದೆ. ಸ್ಥಳೀಯರು ನಾಯಿಗೆ ಬೆದರಿಸಿದರೂ ಜಗ್ಗದ ನಾಯಿ ಆಕೆಯ ಮೇಲೆ ಮತ್ತೇ ಮೇಲೇರಗಿದೆ. ಕೊನೆಗೆ ಕೋಲು ಹಿಡಿದು ನಾಯಿಗೆ ಬಡಿದು ಆಕೆಯನ್ನು ಉಳಿಸಲಾಯಿತು. ತಡವಾಗಿದ್ದರೆ ಜೀವಕ್ಕೆ ಕುತ್ತು ಬರುತ್ತಿತ್ತು.
ಇತ್ತೀಚಿನ ದಿನದಲ್ಲಿ ಗುಬ್ಬಿ ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರು ಮನೆಯಿಂದ ಹೊರಗೆ ಬರಲು ಹೆದರಿದ್ಧಾರೆ. ಸಂಬಂಧಪಟ್ಟ ಇಲಾಖೆಯವರು ತುರ್ತಾಗಿ ಈ ನಾಯಿಗಳ ಹಾವಳಿ ಬಗ್ಗೆ ಗಮನ ಹರಿಸಿ ಸಾರ್ವಜನಿಕರ ಹಿತ ಕಾಪಾಡು ಬೇಕಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.





