ಪ್ರತಿ ಮಳೆಗಾಲದಲ್ಲಿ ಗ್ರಾಮೀಣ ರಸ್ತೆಗಳು ಹದಗೆಡುವ ಕಾರಣ ಹೆಚ್ಚಿನ ಅನುದಾನ ಬಳಸಿ ಗ್ರಾಮೀಣ ಭಾಗದ ರೈತ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದೇವೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡದಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಗ್ರಾಮೀಣಾಭಿವೃದ್ಧಿ ಇಲಾಖೆಯ 50 ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ತಿರುಮಲ ದೇವರಹಟ್ಟಿ 40 ಲಕ್ಷ ರೂಗಳ ಸಿಸಿ ರಸ್ತೆಗೆ ಕೂಡ ಈ ದಿನ ಪೂಜೆ ಮಾಡಲಾಗಿದೆ ಎಂದರು.
ಹಳ್ಳಿಗಾಡಿನ ರೈತರ ಜಾನುವಾರುಗಳ ಯೋಗಕ್ಷೇಮ ಕಾಪಾಡಲು ಪಶು ಆಸ್ಪತ್ರೆ ಅವಶ್ಯಕತೆ ಅರಿತು ಈಗಾಗಲೇ ನೂತನ ಪಶು ಆಸ್ಪತ್ರೆಯನ್ನು ನಲ್ಲೂರು ಗ್ರಾಮದಲ್ಲಿ ನಿರ್ಮಿಸಲಾಗಿದೆ. ಸುಸಜ್ಜಿತ ಪಶು ಚಿಕಿತ್ಸಾಲಯ ಅಲ್ಲಿನ ರೈತರಿಗೆ ನೆರವಾಗಲಿದೆ. ಮತ್ತೊಂದು ಪಶು ಆಸ್ಪತ್ರೆಗೆ ಮಂಚಲದೊರೆ ಗ್ರಾಮದಲ್ಲಿ 50 ಲಕ್ಷ ರೂಗಳಲ್ಲಿ ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದರು.
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಗ್ರಾಮಗಳಲ್ಲೂ ಸಿಸಿ ರಸ್ತೆ ಕೆಲಸ ಹಾಗೂ ಗ್ರಾಮೀಣ ರಸ್ತೆ ಅಭಿವೃದ್ಧಿ ಮಾಡಲು ಅನುದಾನ ಬಳಸಲಾಗುತ್ತಿದೆ. ಎತ್ತಿನಹೊಳೆ ಯೋಜನೆ ಹಾಗೂ ಹೇಮಾವತಿ ಇಲಾಖೆಯಿಂದ 150 ಕೋಟಿ ಕಾಮಗಾರಿ ಶೀಘ್ರ ನಡೆಯಲಿದೆ. ಈ ಜೊತೆಗೆ ಮುಖ್ಯಮಂತ್ರಿ ನಿಧಿಯಿಂದ 50 ಕೋಟಿ ಕಾಮಗಾರಿಗಳು ಸಹ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಗುಡ್ಡದಹಳ್ಳಿ ಬಸವರಾಜು, ರಮೇಶ್, ಯತೀಶ್, ಶಿವಲಿಂಗಯ್ಯ, ಮೈಲಾರಯ್ಯ, ಶಿವಾಜಿರಾವ್, ಮೂರ್ತಪ್ಪ, ಪಂಚಾಯತ್ ರಾಜ್ ಎಇಇ ಚಂದ್ರಶೇಖರ್, ಜೆಇ ಗೋಪಿನಾಥ್, ಪಿಡಿಓ ಅಶೋಕ್ ಬಸವನಾಳ ಇತರರು ಇದ್ದರು.





