ಎರಡು ದಿನಗಳ ಹಿಂದೆ ಪಟ್ಟಣದ ಮಹಾಲಕ್ಷ್ಮೀನಗರ ಬಡಾವಣೆಯಲ್ಲಿ ವಾಹನವೊಂದು ಗುದ್ದಿದ ಅಪಘಾತದಲ್ಲಿ ಹಿಂಬದಿಯ ಎರಡು ಕಾಲು ಕಳೆದುಕೊಂಡ ಬೀದಿ ನಾಯಿಯ ರೋಧನೆಗೆ ಕೂಡಲೇ ಸ್ಪಂದಿಸಿದ ಪ್ರಾಣಿಪ್ರಿಯ ಪಿ.ಬಿ.ಚಂದ್ರಶೇಖರಬಾಬು (ಗ್ಯಾಸ್ ಬಾಬಣ್ಣ) ತುಮಕೂರಿಗೆ ಕರೆದೊಯ್ದು ನಾಯಿಗೆ ಸೂಕ್ತ ಚಿಕಿತ್ಸೆ ನೀಡಿ ಹಾರೈಸಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾದರು.
ಕಳೆದೆರಡು ರಾತ್ರಿಯಿಂದ ಮಹಾಲಕ್ಷ್ಮೀನಗರ ಬಡಾವಣೆಯ ಚರಂಡಿಯಲ್ಲಿ ಬಿದ್ದಿದ್ದು ಮೇಲೆ ಬರಲು ಪರದಾಡುತ್ತಿದ್ದ ನಾಯಿಯನ್ನು ಕೆಲ ನಾಗರೀಕರು ಮೇಲೆತ್ತಿ ಬಿಟ್ಟಾಗ ನಾಯಿಗೆ ಹಿಂಬದಿಯ ಎರಡು ಕಾಲು ಮುರಿದಿರುವುದು ಬೆಳಕಿಗೆ ಬಂದಿದೆ. ಅಲ್ಲಿಯೇ ರೋಧಿಸುತ್ತಾ ತೆವಳಿ ಮುಂದಕ್ಕೆ ಬರಲಾಗದೆ ಹೈರಾಣಾಗಿತ್ತು. ನಾಯಿಯ ನೋವಿನ ಕೂಗು ಆಲಿಸಿದ ಕೆಲ ಸ್ಥಳೀಯರು ಪಟ್ಟಣ ಪಂಚಾಯಿತಿ ಸದಸ್ಯರಿಗೆ ಮಾಹಿತಿ ಹಾಕಿದ್ದರು.
ಮಾಹಿತಿ ತಿಳಿದ ಪಪಂ ಸದಸ್ಯರಾದ ಅಣ್ಣಪ್ಪಸ್ವಾಮಿ ಹಾಗೂ ಶಿವಕುಮಾರ್ ಅವರು ಕೂಡಲೇ ಶ್ವಾನ ಪ್ರೇಮಿ ಗ್ಯಾಸ್ ಬಾಬಣ್ಣ ಅವರಿಗೆ ಮಾಹಿತಿ ಹಾಕಿದ್ದರು. ತಕ್ಷಣ ಸ್ಥಳಕ್ಕೆ ಬಂದ ಬಾಬಣ್ಣ ಮತ್ತು ಸಂಗಡಿಗರು ನಾಯಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ತುಮಕೂರಿನ ಶಿರಾ ಗೇಟ್ ಬಳಿಯ ಸ್ಪೆಶಾಲಿಟಿ ಪಶು ಆಸ್ಪತ್ರೆಗೆ ಕಾರಿನಲ್ಲೇ ಕರೆದೊಯ್ದು ಎಕ್ಸರೇ ತೆಗೆಸಿ ಮುರಿದಿದ್ದ ಮೂಳೆಗೆ ಶಸ್ತ್ರ ಚಿಕಿತ್ಸೆ ಮಾಡಿಸಿದರು.
ಮರಳಿ ಗುಬ್ಬಿಗೆ ಕರೆತಂದು ತಮ್ಮ ಗೋಡಾನ್ ನಲ್ಲಿ ನಾಯಿಗೆ ಹಾಲು ಆಹಾರ ಹಾಗೂ ಔಷಧಿ ನೀಡಿ ಹಾರೈಕೆ ಮಾಡುತ್ತಿದ್ದಾರೆ. ಈ ಮೂಕ ಪ್ರಾಣಿಯ ವೇದನೆಗೆ ಸ್ಪಂದಿಸಿದ ಗ್ಯಾಸ್ ಬಾಬಣ್ಣ ಅವರ ಪ್ರಾಣಿ ಪ್ರೇಮ ತಾಲ್ಲೂಕಿನಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.





