ಕಾರ್ಮಿಕರು, ರೈತರು ಹಾಗೂ ಅಸಂಘಟಿತ ಕಾರ್ಮಿಕರ ಮೇಲೆ ದಬ್ಬಾಳಿಕೆ ಮಾಡುತ್ತಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ರೈತ ಮತ್ತು ಕಾರ್ಮಿಕ ವಿರೋಧಿ ಕಾನೂನು ಜಾರಿ ಮಾಡಿ ಸಂಪೂರ್ಣ ಬದುಕು ಮೂರಾಬಟ್ಟೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ನೋವು ಅನುಭವಿಸಿದ ಸಂಘಟನೆಗಳು ಒಗ್ಗೂಡಿ ಮಹಾ ಮುಷ್ಕರ ಮಾಡುವ ಮೂಲಕ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೆಲ ಕಾಲ ರಸ್ತೆ ತಡೆ, ಮಾನವ ಸರಪಳಿ ನಿರ್ಮಿಸಿ ಹಕ್ಕೊತ್ತಾಯ ಮಾಡಿದರು.
ಗುಬ್ಬಿ ಪಟ್ಟಣದ ಬಸ್ ಸ್ಟ್ಯಾಂಡ್ ಬಳಿ ಜಮಾಯಿಸಿದ ಅಂಗನವಾಡಿ ನೌಕರರ ಸಂಘ ಸದಸ್ಯರು, ಬಿಸಿ ಅಡುಗೆ ತಯಾರಕರು, ರೈತ ಸಂಘ, ಪ್ರಾಂತ ರೈತ ಸಂಘ ಹಾಗೂ ಕಾರ್ಮಿಕ ಸಂಘದ ಸದಸ್ಯರು ಸಿಐಟಿಯು ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ಪ್ರತಿಭಟನಾ ಸಭೆ ನಡೆಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ಕರುಣೆ ಇಲ್ಲದ ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನು ಜಾರಿ ಮಾಡಿ ಈಗ ಹಿಂಪಡೆಯುವ ನಾಟಕ ಆಡುತ್ತಿದೆ. ಬರಿಯ ಭರವಸೆ ನೀಡಿ ಕಾನೂನಾತ್ಮಕವಾಗಿ ಲಿಖಿತ ರೂಪದಲ್ಲಿ ಕಾನೂನು ವಾಪಸ್ ಪಡೆದಿಲ್ಲ. ರೈತರು ಕಾರ್ಮಿಕರು ಹಾಳು ಮಾಡಿ ಈಗ ಮಹಿಳಾ ಸಿಬ್ಬಂದಿಗಳು ಕನಿಷ್ಠ ವೇತನ ಕೇಳಿದರೆ ಇನ್ನೂ ನೀಡಲು ಸರ್ಕಾರ ಮೀನಾ ಮೇಷ ಎಣಿಸಿದೆ. ಕಳೆದ ಹತ್ತು ವರ್ಷದಲ್ಲಿ ದೇಶದ ಬಡತನ ಶೇ.17 ರಷ್ಟು ಹೆಚ್ಚಿದೆ. ಹಂಗಾಮಿ, ದಿನಗೂಲಿ ನೌಕರರಿಗೆ ಕೇವಲ 240 ರೂ ಸಿಗುತ್ತಿದೆ. ಆದರೆ ಕಾರ್ಪೊರೇಟರ್ ಸಂಸ್ಥೆಯ ಲಾಭ ಶೇ. 22.3 ರಷ್ಟು ಹೆಚ್ಚಿದೆ. ಇದರ ಪರಿಣಾಮ ಭಾರತ ದೇಶದಲ್ಲಿ ಅಂತಾರಾಷ್ಟ್ರೀಯ ಬಡತನ ರೇಖೆಗಿಂತ ಶೇ.90 ಗಿಂತ ಕೆಳಗಿದೆ. ಇದು ನಮ್ಮ ದುರಂತ ಎಂದು ಕಳವಳ ವ್ಯಕ್ತಪಡಿಸಿದರು.
ಸಿಐಟಿಯು ಮುಖಂಡ ಲೋಕೇಶ್ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಇರುವ ಕೈಗಾರಿಕಾ ವಲಯ ಏಷ್ಯಾದಲ್ಲೇ ದೊಡ್ಡ ಪ್ರದೇಶ ಎಂದೆನಿಸಿದೆ. ಇಲ್ಲಿನ ಕಾರ್ಮಿಕರ ಸ್ಥಿತಿ ಹೇಳತೀರದಾಗಿದೆ. ಎನ್ ಡಿಎ ಸರ್ಕಾರ ಕಾರ್ಮಿಕರ 29 ಕಾನೂನು ನಾಲ್ಕು ಭಾಗವಾಗಿ ವಿಭಾಗಿಸಿ ಕಾರ್ಮಿಕರನ್ನು ಹೀನವಾಗಿ ಕಾಣುತ್ತಿದ್ದಾರೆ. ಈ ಜೊತೆಗೆ ಮಹಿಳೆಯನ್ನು ರಾತ್ರಿಪಾಳಿ ಮಾಡಬಾರದು ಎಂದು ಕಾನೂನು ಇದ್ದರೂ ಈಗ ತಿದ್ದುಪಡಿ ಮಾಡಿ ಮಹಿಳೆಯರನ್ನು ರಾತ್ರಿಪಾಳಿಯಲ್ಲಿ ಕೆಲಸ ಮಾಡಿ ಶೋಷಣೆ ಮಾಡಲಾಗುತ್ತಿದೆ. ಕನಿಷ್ಠ ವೇತನದಲ್ಲಿ ಬದುಕು ಕಟ್ಟಿಕೊಳ್ಳಲು ಪರದಾಡುವ ಅಂಗನವಾಡಿ, ಬಿಸಿಯೂಟ ತಯಾರಕರು, ಆಶಾ ಕಾರ್ಯಕರ್ತೆಯರು ಇವರ ಬದುಕು ಹಸನಗೊಳಿಸುವ ಕೆಲಸ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಅನುಸೂಯ ಮಾತನಾಡಿ ರೈತರ ಭೂಮಿ ಕಸಿದು ಕೃಷಿ ಚಟುವಟಿಕೆಗೆ ಬ್ರೇಕ್ ಹಾಕಿ ಕೃಷಿಕ ವರ್ಗವನ್ನು ಬೀದಿಗೆ ತಂದಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಲಿಲ್ಲ. ಕನಿಷ್ಠ ವೇತನ ಕೂಡಾ ನೀಡದೆ ಅಂಗನವಾಡಿ ನೌಕರರನ್ನು ಅಸಡ್ಡೆ ಮಾಡಿ ಸ್ತ್ರೀ ಶಕ್ತಿಯನ್ನು ಕಡೆಗಣಿಸಿದ್ದಾರೆ. ಸರ್ಕಾರದ ನಿರ್ಲಕ್ಷ್ಯಕ್ಕೆ ತಕ್ಕ ಪಾಠ ಕಲಿಸಲು ಸಾರ್ವತ್ರಿಕ ಮುಷ್ಕರ ಕಾರ್ಮಿಕ ಸಂಘಟನೆಯ ಜಂಟಿ ಸಮಿತಿ ಮೂಲಕ ಕರೆ ನೀಡಿ ಗುಬ್ಬಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ ಎಂದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಆರತಿ.ಬಿ ಅವರಿಗೆ ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಾಂತ ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜ್ಜಪ್ಪ, ರೈತಸಂಘದ ಸಿ.ಜಿ.ಲೋಕೇಶ್, ಸತ್ತಿಗಪ್ಪ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸರೋಜಮ್ಮ ಇತರರು ಇದ್ದರು.





