ಗುಬ್ಬಿ ಪಟ್ಟಣದ ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಕ್ರೀಡಾಪಟು ಜಿ.ಕವನ ಯಾದವ್ ತುಮಕೂರು ವಿವಿಯಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟದ 10 ಕಿಮೀ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ತಾಲ್ಲೂಕಿಗೆ ಕೀರ್ತಿ ತಂದ ಹಿನ್ನಲೆ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಓಬಳ್ಳಿ ಗ್ರಾಮದ ಜಿ.ಕವನ ಪ್ರಸ್ತುತ ತುಮಕೂರಿನ ಸಿದ್ದಗಂಗಾ ಕಾಲೇಜಿನಲ್ಲಿ ದ್ವಿತೀಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದು ಗುಬ್ಬಿಯ ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಕೊಕ್ಕೋ ಆಟಗಾರ್ತಿ. 10 ಕಿಮೀ ಗುಡ್ಡಗಾಡು ಓಟವನ್ನು 52 ನಿಮಿಷದಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ತಾಲ್ಲೂಕಿನ ಎಲ್ಲಾ ಕ್ರೀಡಾಭಿಮಾನಿಗಳ ಪರವಾಗಿ ಕವನ ಅವರನ್ನು ಗುಬ್ಬಿ ಮೈದಾನದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ ಎಂದು ಶ್ರೀ ಚನ್ನಬಸವೇಶ್ವರ ಯುವಕ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಸಿ.ಆರ್ ಶಂಕರ್ ಕುಮಾರ್ ತಿಳಿಸಿದರು.
ಪಪಂ ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಕ್ರೀಡಾಪಟುವಿಗೆ ಸನ್ಮಾನಿಸಿದರು. ತರಬೇತುದಾರ ಪ್ರಶಾಂತ್ ಇನ್ನಿತರರು ಉಪಸ್ಥಿತರಿದ್ದರು.





