ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ 10 ಕೋಟಿ ರೂಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಅತೀ ಶೀಘ್ರದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಆಗಲಿದೆ ಎಂದು ಕೆಎಸ್ಆರ್ ಟಿಸಿ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಭರವಸೆ ನೀಡಿದರು.
ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಕಿಟ್ಟದಕುಪ್ಪೆ ಹಾಗೂ ಹೊದಲೂರು ಗ್ರಾಮದಲ್ಲಿ ಒಟ್ಟು 1.32 ಕೋಟಿ ರೂಗಳ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನೂತನ ಡಿಪೋ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಸದ್ಯದಲ್ಲಿ ನಡೆಯಲಿದೆ. ಡಿಪೋ ಆರಂಭವಾದಲ್ಲಿ ಗ್ರಾಮೀಣ ಭಾಗಕ್ಕೆ ಬಸ್ಸುಗಳ ವ್ಯವಸ್ಥೆ ಆಗಲಿದೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಸೇರಿದಂತೆ ಕೆಲ ಸಲಕರಣೆ ಕೊರತೆ ಕಾಣುತ್ತಿದೆ ಎಂಬ ದೂರು ಬಂದಿರುವ ಕಾರಣ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ ಆರೋಗ್ಯ ಇಲಾಖೆ ಅಧಿಕಾರಿಗಳ ಸಂಪರ್ಕಿಸಿ ಎಲ್ಲಾ ವ್ಯವಸ್ಥೆ ಮಾಡುವ ಭರವಸೆ ನೀಡಿದ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶೇಕಡಾ 92 ರಷ್ಟು ಮುಗಿದಿದೆ. ಬಾಕಿ ಇರುವ ಕುಟುಂಬ ಸಂಪರ್ಕಿಸಿ ನೂರರಷ್ಟು ಸಮೀಕ್ಷೆ ಮಾಡುವ ಕೆಲಸ ಗಣತಿದಾರರು ಮಾಡುತ್ತಿದ್ದಾರೆ ಎಂದರು.
ಗ್ರಾಮೀಣ ಭಾಗದಲ್ಲಿ ರಸ್ತೆ ಅಭಿವೃದ್ಧಿ ನಿರಂತರ ನಡೆದಿದೆ. ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಟ್ಟದಕುಪ್ಪೆ ಗ್ರಾಮಕ್ಕೆ ಒಂದೂವರೆ ಕೋಟಿ ರೂಗಳನ್ನು ನೀಡಲಾಗಿದೆ. ಹೊದಲೂರು ಕಾಲೋನಿ ಗ್ರಾಮಕ್ಕೆ 40 ಲಕ್ಷ ರಸ್ತೆಗೆ ಪೂಜೆ ಮಾಡಲಾಗಿದೆ. ಎತ್ತಿನಹೊಳೆ ಯೋಜನೆಯಲ್ಲಿ 30 ಕೋಟಿ ರಸ್ತೆ ಕೆಲಸ ನಡೆಯಲಿದೆ. ಹೇಮಾವತಿ ಇಲಾಖೆಯಿಂದ ನೂರು ಕೋಟಿ ಕೆಲಸಕ್ಕೆ ಪೂಜೆ ಸಲ್ಲಿಸಬೇಕಿದೆ. ಶಿರಾ ನೆಲ್ಲಿಗೆರೆ ರಸ್ತೆಗೆ 35 ಕೋಟಿ, ಸಂಸದರ ಸಹಕಾರದಲ್ಲಿ ಸಂಪಿಗೆ ರಸ್ತೆಗೆ 28 ಕೋಟಿ, ಹೊಸಕೆರೆ ರಸ್ತೆಗೆ 6 ಕೋಟಿ ಹಾಗೂ ಮುಖ್ಯಮಂತ್ರಿಗಳ ನಿಧಿಯಿಂದ 50 ಕೋಟಿ ರಸ್ತೆ ಕೆಲಸಗಳು ನಡೆಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ರಾಧಮಣಿ, ಉಪಾಧ್ಯಕ್ಷೆ ಪಾವನ, ಸದಸ್ಯರಾದ ಶಿವಪ್ಪ, ಶ್ರೀನಿವಾಸ್, ಗೌರಮ್ಮ, ಪುಟ್ಟಸ್ವಾಮಯ್ಯ, ಗೌಸ್ ಖಾನ್, ಮುಖಂಡರಾದ ಶಿವಕುಮಾರ್, ದಿವಾಕರ್, ದಯಾನಂದ್, ಬೊಮ್ಮರಸನಹಳ್ಳಿ ರಮೇಶ್, ವೆಂಕಟೇಶ್, ಲೋಕೋಪಯೋಗಿ ಎಇಇ ಯೋಗೀಶ್, ಗುತ್ತಿಗೆದಾರ ಕೋಳಾಲ ಗಂಗಾಧರ್ ಇತರರು ಇದ್ದರು.





