ಜೋರು ಮಳೆಗೆ ಮನೆಯ ಗೋಡೆ ಕುಸಿದು ನಿತ್ಯ ಬಳಕೆಯ ವಸ್ತುಗಳು ಹಾಳಾದ ಘಟನೆ ತಾಲ್ಲೂಕಿನ ನಿಟ್ಟೂರು ಹೋಬಳಿ ಪುರ ಗ್ರಾಮದಲ್ಲಿ ನಡೆದಿದೆ.
ಶಿವಮ್ಮ ಎಂಬುವವರಿಗೆ ಸಂಬಂಧಿಸಿದ ಕೆಂಪು ಹೆಂಚಿನ ವಾಸದ ಮನೆಯ ಗೋಡೆ ಸಂಜೆ ಸುರಿದ ಮಳೆಗೆ ಸಂಪೂರ್ಣ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಆದರೆ ಮನೆಯ ನಿತ್ಯ ಬಳಕೆಯ ಸಾಮಾನು ಸರಂಜಾಮು ಗೋಡೆಯ ಕೆಳಗೆ ಸಿಲುಕಿ ಸಾವಿರಾರು ರೂ ಬೆಲೆಯ ನಷ್ಟ ಸಂಭವಿಸಿದೆ.
ಹಳೆಯ ಮನೆಯ ಮಣ್ಣು ಮಿಶ್ರಿತ ಇಟ್ಟಿಗೆ ಮನೆ ದಿಢೀರ್ ಕುಸಿದು ಶಿವಮ್ಮ ಕುಟುಂಬ ವಾಸಕ್ಕೆ ಮನೆ ಇಲ್ಲದೆ ಪರದಾಡುವಂತಾಗಿದೆ. ಸಂಬಂಧಪಟ್ಟ ಕಂದಾಯ ಅಧಿಕಾರಿಗಳು ಸಂತ್ರಸ್ತ ಮಹಿಳೆಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು. ಈ ಜೊತೆಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಡ ಸಂತ್ರಸ್ತೆಗೆ ವಸತಿ ಯೋಜನೆ ಮೂಲಕ ಅನುದಾನ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಶಂಕರಾನಂದ ಮನವಿ ಮಾಡಿದ್ದಾರೆ.





