ಸಮಾಜಕ್ಕೆ ಕೊಡುಗೆ ನೀಡಿದ ಗಣ್ಯರ ಜನ್ಮ ದಿನವನ್ನು ಒಂದು ಸಮಾಜಕ್ಕೆ ಸೀಮಿತ ಮಾಡದೆ ಎಲ್ಲಾ ಸಮುದಾಯ ಒಗ್ಗೂಡಿ ಆಚರಣೆ ಮಾಡಬೇಕಿದೆ. ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಸಮಾಜದಲ್ಲಿ ವ್ಯಕ್ತಿತ್ವ ಬೆಳೆಸಿಕೊಳ್ಳುವ ಆದರ್ಶ ತಿಳಿಸಿದ್ದಾರೆ. ಅವರ ಸನ್ಮಾರ್ಗ ಪ್ರಸ್ತುತ ಸಮಾಜಕ್ಕೆ ಅವಶ್ಯವಿದೆ. ಅದನ್ನು ಅಳವಡಿಸಿಕೊಂಡು ಮುಂದೆ ಸಾಗುವಂತೆ ಶಾಸಕ ಎಸ್.ಆರ್.ಶ್ರೀನಿವಾಸ್ ಕರೆ ನೀಡಿದರು.
ಗುಬ್ಬಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಪರಿವರ್ತನೆಗೆ ರಾಮಾಯಣ ಉತ್ತಮ ತತ್ವ ತಿಳಿಸಿದೆ. ವ್ಯಕ್ತಿಯ ಬದುಕು ಹೇಗೆ ಇರಬೇಕು ಹಾಗೂ ಆಡಳಿತಾತ್ಮಕ ಅಂಶಗಳು ಸಹ ಸಾವಿರಾರು ವರ್ಷಗಳ ಹಿಂದೆಯೇ ವಾಲ್ಮೀಕಿ ಮಹರ್ಷಿಗಳು ರಚಿಸಿದ್ದಾರೆ. ವಿಶ್ವ ಶ್ರೇಷ್ಠ ಗ್ರಂಥ ರಚಿಸಿದ ವಾಲ್ಮೀಕಿ ಅವರನ್ನು ಒಂದು ಜನಾಂಗಕ್ಕೆ ಸೀಮಿತ ಮಾಡದೆ ಎಲ್ಲಾ ಸಮುದಾಯ ಸೇರಿ ಆಚರಣೆ ನಡೆಸಬೇಕಿದೆ ಎಂದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಎಲ್ಲಾ ಜಾತಿ ಧರ್ಮದವರನ್ನು ಗಣನೆಗೆ ತೆಗೆದುಕೊಂಡು ಸಮಾನತೆ ಸಾರುವ ಕೆಲಸ ಮಾಡಿದ್ದಾರೆ. ಆದರೆ ಅವರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಲಾಗುತ್ತದೆ. ಈ ರೀತಿಯ ಆಚರಣೆ ಮಾಡದೆ ಎಲ್ಲರೂ ಸೇರಿ ಸರ್ಕಾರಿ ಕಾರ್ಯಕ್ರಮ ಸಾರ್ವಜನಿಕ ಕಾರ್ಯಕ್ರಮ ಆಗಿ ನಡೆಯಲಿ ಎಂದ ಅವರು ವಾಲ್ಮೀಕಿ ನಾಯಕ ಸಂಘಕ್ಕೆ ಸೂಕ್ತ ಸ್ಥಳ ನೀಡಿದ್ದೇವೆ. ಅದರಲ್ಲಿ ಸಮುದಾಯ ಭವನ ಕಟ್ಟುವ ಬದಲು ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಲು ಹಾಸ್ಟೆಲ್ ನಿರ್ಮಾಣ ಮಾಡಿ ಎಂದು ಸಲಹೆ ನೀಡಿದರು.
ಪಪಂ ಸದಸ್ಯ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ ಕೋವಿಡ್ ಹಿನ್ನಲೆ ವಾಲ್ಮೀಕಿ ಜಯಂತಿ ಕಳೆದ ಐದು ವರ್ಷ ಸರಳ ಆಚರಣೆ ಮಾಡಲಾಗಿತ್ತು. ಈ ಬಾರಿ ಶಾಸಕರ ಸಹಕಾರದಲ್ಲಿ ಅದ್ದೂರಿಯಾಗಿ ನಡೆಸಿದ್ದೇವೆ. ವಾಲ್ಮೀಕಿ ಸಂಘಕ್ಕೆ ಸ್ಥಳ ನೀಡಿದ ತಾಲ್ಲೂಕು ಆಡಳಿತಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ನ್ಯಾಯ ನೀತಿ ಧರ್ಮ ಸತ್ಯ ನಿಷ್ಠೆ ಪ್ರಾಮಾಣಿಕತೆ ಬಗ್ಗೆ ಸಂಪೂರ್ಣ ಮಾಹಿತಿ ರಾಮಾಯಣದಲ್ಲಿ ಅಡಗಿದೆ. ಈ ಆದರ್ಶ ನಾವು ಪಾಲಿಸೋಣ ಎಂದು ಕರೆ ನೀಡಿದರು.
ಕಡಬ ಕೆ ಪಿ ಎಸ್ ಶಾಲಾ ಶಿಕ್ಷಕ ಮುರಳೀಧರ್ ಮಾತನಾಡಿ ಆಧ್ಯಾತ್ಮಿಕ ಮನಸ್ಸಿನ ಮಹರ್ಷಿ ವಾಲ್ಮೀಕಿ ಮೊಟ್ಟ ಮೊದಲ ಶ್ಲೋಕ ರಚಿಸಿದ ಆದಿ ಕವಿ ಎನ್ನಲಾಗಿದೆ. 7 ಖಂಡ, 24 ಸಾವಿರ ಶ್ಲೋಕ ಮೂಲಕ ರಚಿಸಿದ ರಾಮಾಯಣ ಬದುಕಿನ ಮೌಲ್ಯ ತಿಳಿಸಿದೆ. ರತ್ನಾಕರ್ ಮೂಲ ಹೆಸರಿನ ವಾಲ್ಮೀಕಿ ಮಹರ್ಷಿ ಆಗಿರುವುದೇ ಅದ್ಬುತ ಬದುಕು ಎಂದು ವಾಲ್ಮೀಕಿ ಜೀವನ ಚರಿತ್ರೆ ತಿಳಿಸಿದರು.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯದಿಂದ ವಾಲ್ಮೀಕಿ ಭಾವಚಿತ್ರವನ್ನು ವಿವಿಧ ಸಾಂಸ್ಕೃತಿಕ ಕಲಾ ತಂಡದೊಂದಿಗೆ ಮೆರವಣಿಗೆ ಮೂಲಕ ಕಾಲೇಜು ಮೈದಾನ ತಲುಪಿತ್ತು.
ನಂತರ ವಾಲ್ಮೀಕಿ ನಾಯಕ ಸಮಾಜದ ಗಣ್ಯರಿಗೆ ಹಾಗೂ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಆರತಿ.ಬಿ, ಪಪಂ ಅಧ್ಯಕ್ಷೆ ಆಯಿಷಾ ತಾಸೀನ್, ಸದಸ್ಯರಾದ ಮಹಮ್ಮದ್ ಸಾದಿಕ್, ರೇಣುಕಾ ಪ್ರಸಾದ್, ಜಿ.ಸಿ.ಕೃಷ್ಣಮೂರ್ತಿ, ಕುಮಾರ್, ಶಶಿಕುಮಾರ್, ಜಿ.ಆರ್.ಶಿವಕುಮಾರ್, ಆನಂದ್, ತಾಪಂ ಇಓ ರಂಗನಾಥ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ವೀಣಾ, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಅಧ್ಯಕ್ಷ ಅಡವೀಶ್, ಗೌರವಾಧ್ಯಕ್ಷ ನರಸಿಂಹಮೂರ್ತಿ, ರಾಮಚಂದ್ರಯ್ಯ, ರಾಘವೇಂದ್ರ, ಜಿ.ಎಲ್.ರಂಗನಾಥ್, ಸಣ್ಣ ರಂಗಯ್ಯ, ನಟ ಅರ್ಜುನ್ ಪಾಳೇಗಾರ್, ವಾಲ್ಮೀಕಿ ನಾಯಕ ಮಹಿಳಾ ಸಂಘದ ಅಧ್ಯಕ್ಷೆ ಸೌಭಾಗ್ಯಮ್ಮ, ಸಣ್ಣ ರಂಗಯ್ಯ, ಹೇರೂರು ನಾಗರಾಜು ಇತರರು ಇದ್ದರು.





