ಕನ್ನಡಾಭಿಮಾನ ರಾಜ್ಯೋತ್ಸವ ಆಚರಣೆ ವರ್ಷ ಪೂರ್ತಿ ನಡೆಯಬೇಕು. ಮಾತೃಭಾಷೆ ಮನ ಮನೆಯಲ್ಲಿ ನಿತ್ಯ ಬಳಕೆಯಲ್ಲಿದ್ದು ಕನ್ನಡ ವ್ಯಾಮೋಹ ನಿರಂತರ ಇರಲಿ ಎಂದು ತಹಶೀಲ್ದಾರ್ ಆರತಿ.ಬಿ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಸೈಂಟ್ ಥಾಮಸ್ ಶಾಲೆಯಲ್ಲಿ ಆಯೋಜಿಸಿದ್ದ ಕನ್ನಡಹಬ್ಬ 2025 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅವರು ಎರಡು ಸಾವಿರಕ್ಕೂ ಅಧಿಕ ವರ್ಷದ ಇತಿಹಾಸ ಇರುವ ಕನ್ನಡ ಶಾಸ್ತ್ರೀಯ ಸ್ಥಾನಮಾನ ಗಳಿಸಿಕೊಂಡಿದೆ ಎಂದರು.
ನವಂಬರ್ ಮಾಹೆಯಲ್ಲಿ ಎಲ್ಲಡೆ ಕನ್ನಡ ರಾಜ್ಯೋತ್ಸವ ನಡೆಯುತ್ತದೆ. ಅದೇ ರೀತಿ ಎಲ್ಲಾ ಮಾಹೆಯಲ್ಲಿ ಕನ್ನಡ ರಾರಾಜಿಸಲಿ. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಇತ್ತೀಚಿಗೆ ಕೀಳರಿಮೆ ಬೆಳೆದಿದೆ. ಆಂಗ್ಲ ಮಾಧ್ಯಮ ಜೊತೆ ಕನ್ನಡ ಭಾಷೆ ಕಲಿಯುವುದು ತಪ್ಪೇನಿಲ್ಲ. ಉದ್ಯೋಗ ಭಾಷೆಯಾಗಿ ಕನ್ನಡ ಗುರುತಿಸಿಕೊಂಡು ಅನ್ನಭಾಷೆಯಾಗಿ ಬೆಳೆಯಬೇಕಿದೆ. ಈ ಕೆಲಸ ಎಲ್ಲಾ ಕನ್ನಡಿಗರೂ ಮಾಡಬೇಕಿದೆ ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್ ಮಾತನಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ಎಂಟು ಜ್ಞಾನಪೀಠ ಪಡೆದ ಹೆಗ್ಗಳಿಕೆ ಇದೆ. ಸುಲಲಿತ ಭಾಷೆಯಾಗಿ ಸುಂದರ ನುಡಿಗಟ್ಟು ಸಹ ನಮ್ಮ ಭಾಷೆ ಹೊಂದಿದೆ. ಕವಿತೆಗಳು, ಪದ್ಯಗಳು, ಕೀರ್ತನೆಗಳು, ವಚನಗಳು ಎಲ್ಲವೂ ಕನ್ನಡ ಭಾಷೆಯಲ್ಲಿ ವಿಜೃಂಬಿಸಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಿ.ಎಸ್.ಪುರದ ಚಿ.ಉದಯಶಂಕರ್ ಎಲ್ಲರೂ ಸ್ಮರಿಸಬೇಕಿದೆ ಎಂದರು.
ಸೈಂಟ್ ಥಾಮಸ್ ಶಾಲೆಯ ಅಧ್ಯಕ್ಷೆ ಲತಾ ನಾಗೇಶ್ ಮಾತನಾಡಿ ಕನ್ನಡದ ಪ್ರೀತಿ ಗೌರವ ಹೆಚ್ಚಿಸಲು ಸಣ್ಣ ಮಕ್ಕಳಿಗೆ ಕನ್ನಡ ಅಭಿಮಾನ ಬೆಳೆಸಬೇಕು. ಮನೆಗಳಲ್ಲಿ ಮೊದಲು ಕನ್ನಡ ಬಳಕೆ ಮಾತುಗಾರಿಕೆ ಬರವಣಿಗೆ ರೂಡಿಸಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚು ಮಾತೃಭಾಷೆ ಉಳಿದಿದೆ ಎಂದರೆ ತಪ್ಪಾಗಲಾರದು. ನಗರ ಪ್ರದೇಶದಲ್ಲೇ ಆಂಗ್ಲ ಭಾಷೆಗೆ ಒತ್ತು ನೀಡುತ್ತಾ ಪೋಷಕರೇ ಮನೆಯಲ್ಲಿ ಇಂಗ್ಲೀಷ್ ಬಳಕೆ ಮಾಡುತ್ತಾರೆ. ಕನ್ನಡಾಭಿಮಾನ ಮೊದಲು ಪೋಷಕರು ಬೆಳೆಸಿಕೊಳ್ಳಲು ಮಿದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಕನ್ನಡಹಬ್ಬ ಮೆರವಣಿಗೆ ಊರಿನ ಪ್ರಮುಖ ಬೀದಿಯಲ್ಲಿ ಸಂಚರಿಸಿತು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆಯಲ್ಲಿ ಶಾಲೆಯ ಕಾರ್ಯದರ್ಶಿ ಕೆ.ಎಚ್.ನಾಗೇಶ್, ಪಿಎಸ್ಐ ಧರ್ಮಾಂಜಿ, ಶಾಲೆಯಪೋಷಕ ಹರೀಶ್, ಕರ್ನಾಟಕ ರಕ್ಷಣಾ ವೇದಿಕೆಯ ಬಾಬಣ್ಣ, ಕಂದಾಯ ನಿರೀಕ್ಷಕಿ ಪ್ರಮೀಳಾ, ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿ ಸೇರಿದಂತೆ ಇತರರು ಇದ್ದರು.





