ಹೇಮಾವತಿ ನೀರು ಹರಿದು ತುಂಬಿದ ಕಸಬ ಹೋಬಳಿ ಲಕ್ಕೇನಹಳ್ಳಿ ಕೆರೆಗೆ ಗಂಗಾಪೂಜೆ ಸಲ್ಲಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಗ್ರಾಮ ದೇವರು ತುಳಸಿಕಟ್ಟೆ ಶ್ರೀ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಲಕ್ಕೇನಹಳ್ಳಿ ಕೆರೆಯ ಕೋಡಿಯವರೆಗೆ ತುಳಸಿಕಟ್ಟೆ ಶ್ರೀ ರಂಗನಾಥಸ್ವಾಮಿ ದೇವರನ್ನು ಮೆರವಣಿಗೆ ಮೂಲಕ ಬರ ಮಾಡಿಕೊಂಡ ಸ್ಥಳೀಯ ಗ್ರಾಮಸ್ಥರು ಕೋಡಿ ಬಿದ್ದ ಸ್ಥಳದಲ್ಲಿ ಗಂಗಾಪೂಜೆ ಸಲ್ಲಿಸಿ ಸುತ್ತಲಿನ ಆರು ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಗೆ ಈ ಲಕ್ಕೇನಹಳ್ಳಿ ಕೆರೆ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಶಾಸಕರು ಪ್ರತಿ ವರ್ಷ ಕೆರೆ ತುಂಬಿಸಲು ಮೊದಲ ಆದ್ಯತೆ ನೀಡಿದ್ದಾರೆ ಎಂದು ಪ್ರಶಂಸಿಸಿದರು.
ಬಾಗಿನ ಅರ್ಪಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ತಾಲ್ಲೂಕಿನ ಬಹುತೇಕ ಗ್ರಾಮಗಳ ಕೆರೆಯು ಹೇಮಾವತಿ ನೀರಿನಿಂದ ತುಂಬಿವೆ. ಕೆಲ ಕೆರೆಗಳು ಮಳೆ ನೀರಿನಿಂದ ಸಹ ತುಂಬಿವೆ. ಕುಡಿಯುವ ನೀರಿನ ಮಹತ್ವ ಯೋಜನೆಗಳಲ್ಲಿ ಮುಖ್ಯವಾದ ಹಾಗಲವಾಡಿ, ಮಠದಹಳ್ಳ ಕೆರೆ ಹಾಗೂ ಬಿಕ್ಕೆಗುಡ್ಡ ಯೋಜನೆ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ. ಈ ಜೊತೆಗೆ ಎತ್ತಿನಹೊಳೆ ಯೋಜನೆ ಕೂಡಾ ನಡೆದಿದ್ದು, ನೀರಾವರಿ ಕಾಮಗಾರಿಗಳು ಪೂರ್ಣಗೊಳ್ಳಲು ಅಗತ್ಯ ಅನುದಾನವನ್ನು ಸರ್ಕಾರದ ಗಮನಕ್ಕೆ ತಂದು ಮಂಜೂರು ಮಾಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಕೃಷ್ಣಮೂರ್ತಿ, ಮಹೇಂದ್ರಕುಮಾರ್, ಮುಖಂಡರಾದ ಪಟೇಲ್ ದಿನಕರ್, ಜೆಸಿಬಿ ಗಂಗಾಧರ್, ಮಂಜುನಾಥ್, ಶಿವರಾಂ, ಮಹೇಶ್, ಪಾಂಡುರಂಗ, ಎಲ್.ಆರ್.ಗಂಗಾಧರ್, ಹನುಮಂತರಾಯ, ನರಸಿಯಪ್ಪ ಇತರರು ಇದ್ದರು.





