ಐತಿಹಾಸಿಕ ಹಿನ್ನಲೆಯ ಸರ್ಕಾರಿ ಪ್ರೌಢಶಾಲೆ 75 ವರ್ಷದ ಅಮೃತ ಮಹೋತ್ಸವ ಆಚರಣೆಗೆ ಸಮೀಪದಲ್ಲಿದೆ. ಆದರೆ ಶಾಲೆಗೆ ಸೂಕ್ತ ಕಾಂಪೌಂಡ್ ಇಲ್ಲದೆ ಶೋಚನೀಯ ಸ್ಥಿತಿ ತಲುಪುತ್ತಿದೆ. ದಿನ ಕಳೆದಂತೆ ದಾಖಲಾತಿ ಇಳಿಮುಖವಾಗುತ್ತಿದೆ. ಕಾಂಪೌಂಡ್ ಬಗ್ಗೆ ಯಾವ ಚುನಾಯಿತ ಪ್ರತಿನಿಧಿಗಳು ಕಾಳಜಿ ವಹಿಸಿಲ್ಲ. ಕಳೆದ 20 ವರ್ಷದಿಂದ ಶಿಥಿಲಾವಸ್ಥೆ ತಲುಪಿದ ಕಾಂಪೌಂಡ್ ಶೀಘ್ರ ನಿರ್ಮಿಸಲಿ ಎಂದು ಇಲಾಖೆ ಹಾಗೂ ಸಾರ್ವಜನಿಕರ ಗಮನಕ್ಕೆ ತರುವ ನಿಟ್ಟಿನಲ್ಲಿ ಗುಬ್ಬಿ ಪಟ್ಟಣ ಹಿತ ರಕ್ಷಣಾ ಸಮಿತಿ ಕರೆ ನೀಡಿದ್ದ ಧರಣಿ ಸತ್ಯಾಗ್ರಹ ಯಶಸ್ವಿಯಾಗಿ ನಡೆಯಿತು.
ಬೆಳಿಗ್ಗೆ ಸರ್ಕಾರಿ ಪ್ರೌಢಶಾಲೆಯ ಮುಂದೆ ಧರಣಿ ಕುಳಿತ ಸಮಿತಿಯ ಪದಾಧಿಕಾರಿಗಳು, ಸಾಮಾಜಿಕ ಹೋರಾಟಗಾರರು, ಹಳೇ ವಿದ್ಯಾರ್ಥಿಗಳ ಸಂಘ ಕಾಂಪೌಂಡ್ ಇಲ್ಲದೆ ಶಾಲೆಯ ವಾತಾವರಣ ಹದಗೆಟ್ಟಿದೆ. ಕೂಡಲೇ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಂಪೌಂಡ್ ನಿರ್ಮಿಸದಿದ್ದರೆ ಪಟ್ಟಣದಲ್ಲಿ ಶೋಚನೀಯ ಸ್ಥಿತಿ ವಿವರಿಸಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ಮಾಡಿ ಕಾಂಪೌಂಡ್ ನಿರ್ಮಾಣ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗುಬ್ಬಿ ಪಟ್ಟಣ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ಎಚ್.ಡಿ.ಯಲ್ಲಪ್ಪ ಮಾತನಾಡಿ ಕಳೆದ ಇಪ್ಪತ್ತು ವರ್ಷಗಳಿಂದ ಹಾಳಾದ ಕಾಂಪೌಂಡ್ ಬಿದ್ದು ಮೈದಾನಕ್ಕೆ ಏಕಾಏಕಿ ವಾಹನಗಳು ನುಗ್ಗುತ್ತಿವೆ. ಬೈಕ್ ಗಳು ಶಾಲಾ ಕಿಟಿಕಿಯ ಸಮೀಪದಲ್ಲೇ ಓಡಾಡುವ ಕಾರಣ ಮಕ್ಕಳಲ್ಲಿ ಏಕಾಗ್ರತೆ ಕೊರತೆ ಆಗುತ್ತಿದೆ. ಶಿಕ್ಷಕರು ಈ ಸಮಸ್ಯೆಯಿಂದ ಹೈರಣಾಗಿದ್ದಾರೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗುಡುಗಿದರು.
ಶ್ರೀ ಚನ್ನಬಸವೇಶ್ವರ ಯುವಕ ಸಂಘ ಕಾರ್ಯದರ್ಶಿ ಸಿ.ಆರ್.ಶಂಕರ್ ಕುಮಾರ್ ಮಾತನಾಡಿ 1952 ರಲ್ಲಿ ಮೈಸೂರು ಅರಸರ ಹಸ್ತದಿಂದ ಆರಂಭವಾದ ಮುನ್ಸಿಪಲ್ ಶಾಲೆ ಈಗ ಸರ್ಕಾರಿ ಪ್ರೌಢಶಾಲೆಯಾಗಿದೆ. ಈ ಕಾಂಪೌಂಡ್ ಸುಮಾರು 315 ಅಡಿಗಳಲ್ಲಿ ನಿರ್ಮಾಣ ಆಗಬೇಕಿದೆ. ಅಂದಾಜು 75 ಲಕ್ಷ ರೂಗಳ ಅವಶ್ಯಕತೆ ಇದೆ. ಈ ಹಿಂದೆ 35 ಲಕ್ಷ ರೂಗಳಲ್ಲಿ ಕ್ರಿಯಾಯೋಜನೆ ಮಂಜೂರಾಗಿತ್ತು. ಬಂದ ಹಣ ಕೋವಿಡ್ ಸಮಯದಲ್ಲಿ ವಾಪಸ್ ಹೋಯಿತು. ನಂತರ ಶಾಸಕರು, ಸಂಸದರಿಗೂ ಮನವಿ ಮಾಡಲಾಗಿತ್ತು. ಆದರೆ ಇಲಾಖೆ ಜಾಣ ಮೌನ ತಾಳಿತು. ದಾನಿಗಳನ್ನು ಹುಡುಕಿ ಕಾಂಪೌಂಡ್ ನಿರ್ಮಾಣ ಮಾಡಬೇಕಿತ್ತು. ಇಚ್ಛಾಶಕ್ತಿ ಕಾಣಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗುಬ್ಬಿ ಹಿತ ರಕ್ಷಣಾ ಸಮಿತಿಯ ಸಲೀಂಪಾಷ ಮಾತನಾಡಿ ಸರ್ಕಾರಿ ಈ ಶಾಲೆ ಪಾರಂಪರಿಕ ಹಿನ್ನಲೆ ಹೊಂದಿದ್ದರೂ ಶಾಪಗ್ರಸ್ತ ಎನಿಸಿದೆ. ಹೆದ್ದಾರಿ ಪಕ್ಕದಲ್ಲೇ ಬಿದ್ದಿರುವ ಕಾಂಪೌಂಡ್ ಕಾಣುತ್ತಿದ್ದರೂ ಯಾವ ಜನಪ್ರತಿನಿಧಿಗಳು ಕಿಂಚಿತ್ತೂ ಕಾಳಜಿ ತೋರದೆ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಬರುತ್ತಾರೆ ಹೋಗುತ್ತಾರೆ. ಸದುದ್ದೇಶದಿಂದ ಎಚ್ಎಎಲ್ ಘಟಕ ಶೌಚಾಲಯ ನಿರ್ಮಾಣ ಮಾಡಿಕೊಟ್ಟರೆ ಅದನ್ನು ಶಾಲೆಯ ಮುಂದೆ ಕಟ್ಟಿ ವಾಸ್ತು ದೋಷ ಮಾಡಿದ್ದಾರೆ ಎನ್ನಿಸುತ್ತಿದೆ. ಶಾಲೆಯು ಪ್ರತಿ ವರ್ಷ ದಾಖಲಾತಿ ಕಡಿಮೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಬೇಗ ಕಾಂಪೌಂಡ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ಜಿ.ಆರ್ ಶಿವಕುಮಾರ್ ಮಾತನಾಡಿದರು. ನಂತರ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಮನವಿ ಸ್ವೀಕರಿಸಿ ನಮ್ಮ ಜವಾಬ್ದಾರಿ ಎಚ್ಚರಿಸಿದ ಸಮಿತಿಯ ಮನವಿಯಂತೆ ಮೇಲಾಧಿಕಾರಿಗಳಿಗೆ ತಿಳಿಸಿ ಕಾಂಪೌಂಡ್ ನಿರ್ಮಾಣ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಧರಣಿಯಲ್ಲಿ ಕಾಲೇಜು ಅಭಿವೃದ್ದಿ ಸಮಿತಿಯ ರಂಗಸ್ವಾಮಿ, ಹಳೇ ವಿದ್ಯಾರ್ಥಿಗಳಾದ ಅರ್ಜುನ್, ಶಿವಾನಂದ್, ಜಿ.ಎಲ್.ರಂಗನಾಥ್, ಮನೋಜ್, ಚನ್ನಬಸವಣ್ಣ, ಚಂದನ್, ಕಾಂತರಾಜ್ ಇತರರು ಇದ್ದರು.





