ಹಾಡಹಗಲೇ ಕಾರಿನ ಕಿಡಕಿ ಹೊಡೆದು ಕಾರಿನಲ್ಲಿದ್ದ ಬರೋಬ್ಬರಿ 15 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದ ಘಟನೆ ಕೆಲ ತಿಂಗಳ ಹಿಂದೆ ಗುಬ್ಬಿ ಪಟ್ಟಣದ ಎಪಿಎಂಸಿ ಆವರಣದ ಕಛೇರಿ ಮುಂದೆ ನಡೆದಿತ್ತು. ಈ ಪ್ರಕರಣದ ಬೆನ್ನು ಹತ್ತಿದ ಗುಬ್ಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಓಜಿಕುಪ್ಪಂ ಗ್ಯಾಂಗ್ ನ ಇಬ್ಬರು ಕುಖ್ಯಾತಿ ಕಳ್ಳರನ್ನು ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಆಂಧ್ರ ಮೂಲದ ಶಿವ(44) ಹಾಗೂ ಸುಬ್ರಹ್ಮಣ್ಯ ಅಲಿಯಾಸ್ ಮಣಿ (38) ಬಂಧಿತ ಆರೋಪಿಗಳು. ಗುಬ್ಬಿ ಪ್ರಕರಣದಲ್ಲಿ ಪತ್ತೆಯಾದ ಸುಮಾರು 13.60 ಲಕ್ಷ ನಗದು ಹಣ ಮತ್ತು ಇತರೆ ಪ್ರಕರಣದ ಒಂದು ಚಿನ್ನದ ಬ್ರಾಸ್ಲೈಟ್ ಸೇರಿ ಒಟ್ಟು ಮೌಲ್ಯ 16 ಲಕ್ಷ ರೂಗಳನ್ನು ಲಪಟಾಯಿಸಿದ ಆರೋಪಿಗಳಾಗಿದ್ದಾರೆ.
ಶಿವರಾಜು ಎಂಬ ವರ್ತಕ ನಿಟ್ಟೂರು ಬ್ಯಾಂಕ್ ಖಾತೆಯಿಂದ 15 ಲಕ್ಷ ನಗದು ಹಣವನ್ನು ಡ್ರಾ ಮಾಡಿಕೊಂಡು ತನ್ನ ಕಾರಿನಲ್ಲಿ ಇಟ್ಟುಕೊಂಡು ಗುಬ್ಬಿ ಎಪಿಎಂಸಿ ಯಾರ್ಡ್ ನಲ್ಲಿರುವ ಎಪಿಎಂಸಿ ಕಚೇರಿಯ ಮುಂಭಾಗ ಕಾರನ್ನು ನಿಲ್ಲಿಸಿ, 15 ಲಕ್ಷ ನಗದು ಹಣ ಹಾಗೂ ಇತರೆ ದಾಖಲಾತಿಗಳನ್ನು ಬಿಟ್ಟು ಕಚೇರಿಗಳಿಗೆ ಹೋಗಿ ವಾಪಸ್ ಬರುವುದರೊಳಗೆ 15 ಲಕ್ಷ ನಗದು ಹಣ ಕಿಟಿಕಿ ಗ್ಲಾಸ್ ಒಡೆದು ಕಳವು ಮಾಡಿರುತ್ತಾರೆ.
ಪ್ರಕರಣ ಕೈಗೆತ್ತಿಕೊಂಡ ಶಿರಾ ಉಪ ವಿಭಾಗದ ಡಿವೈಎಸ್ಪಿ ಶೇಖರ್ ಮಾರ್ಗಸೂಚನೆ ಮೇರೆಗೆ ಗುಬ್ಬಿ ವೃತ್ತ ನಿರೀಕ್ಷಕರಾದ ರಾಘವೇಂದ್ರ ಅವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ಈ ಇಬ್ಬರನ್ನು ಬಂದಿಸಿದ್ದಾರೆ.
ಈ ಆರೋಪಿತರು ಅಂತರ್ ಜಿಲ್ಲಾ ರಾಜ್ಯ ಅಪರಾಧಿಗಳಾಗಿದ್ದು ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಾದ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ , ಸಿರಾ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ, ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದು ಈ ಎಲ್ಲಾ ಐದು ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ನಗದು ಹಣ ಹಾಗೂ ಒಂದು ಚಿನ್ನದ ಬ್ರಾಸ್ಲೈಟ್ ಸೇರಿ ಒಟ್ಟು 16 ಲಕ್ಷ ಮೌಲ್ಯದ ಸ್ವತ್ತನ್ನು ಅಮಾನತು ಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿತರಾದ ಅಂಕಯ್ಯ, ಕಿರಣ್ ಮತ್ತು ರಾಜಶೇಖರಯ್ಯ ತಲೆಮೆರೆಸಿಕೊಂಡಿದ್ದು ಇವರ ಪತ್ತೆ ಕಾರ್ಯ ಮುಂದುವರಿಸಲಾಗಿದೆ. ಗುಬ್ಬಿ ಪೊಲೀಸರ ಭರ್ಜರಿ ಕಾರ್ಯಾಚರಣೆಗೆ ತುಮಕೂರು ಜಿಲ್ಲಾ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ವೆಂಕಟ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.





