ಆಸ್ತಿಗಾಗಿ ಹೆತ್ತ ಮಗನಿಂದ ತೀವ್ರ ಮಾನಸಿಕ ನೋವು ಅನುಭವಿಸಿದ ವೃದ್ಧ ತಾಯಿಯ ಸಂಕಟ ಕೇಳುವರರಿಲ್ಲ. ಜಮೀನಿನಲ್ಲಿ ಮನೆ ಕಟ್ಟುವ ನೆಪದಲ್ಲಿ ತನ್ನ ತಾಯಿಯ ಮನೆಯ ಬಾಗಿಲು ತೆರೆಯದಂತೆ ಮಣ್ಣು ಸುರಿದು ತೊಂದರೆ ನೀಡುತ್ತಿದ್ದಾನೆ ಎಂದು ವೃದ್ಧ ತಾಯಿ ಮಾಧ್ಯಮ ಮುಂದೆ ತನ್ನ ಅಳಲು ತೋಡಿಕೊಂಡರು.
ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದ ವೃದ್ಧ ತಾಯಿ ರುದ್ರಮ್ಮ ತನ್ನ ಹೆಸರಿನ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಬದುಕು ಸಾಗಿಸುತ್ತಿದ್ದು, ಒಟ್ಟು ನಾಲ್ಕು ಮಕ್ಕಳ ಪೈಕಿ ಒಬ್ಬನೇ ಮಂಜುನಾಥ್ ಹೆತ್ತ ತಾಯಿಯನ್ನು ಸಾಕಿ ಸಲಹದೇ ಆಸ್ತಿಗಾಗಿ ತಾಯಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದಾನೆ. ಈ ಬಗ್ಗೆ ಪೊಲೀಸರ ಬಳಿ ಹೇಳಿದರೂ ನ್ಯಾಯ ಸಿಗದೇ ಕಳೆದ ನಾಲ್ಕು ವರ್ಷದಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ ಎಂದು ಮಾಧ್ಯಮ ಮುಂದೆ ವೃದ್ಧ ತಾಯಿ ಅಳಲು ತೋಡಿಕೊಂಡರು.
ಪತಿ ಸಾವಿನ ನಂತರ ಪವತಿ ಆಧಾರದ ಮೂಲಕ ವೃದ್ದೆ ರುದ್ರಮ್ಮ ಹೆಸರಿಗೆ ಬಂದ ಆಸ್ತಿಗಾಗಿ ಒಬ್ಬನೇ ಮಗ ತನ್ನ ಒಡಹುಟ್ಟಿದ ಮೂವರು ಹೆಣ್ಣು ಮಕ್ಕಳಿಗೂ ತೊಂದರೆ ನೀಡಿದ್ದಾನೆ. ನನ್ನ ಸೇರಿ ಐದು ಭಾಗ ಮಾಡುವುದಾಗಿ ಹೇಳಿದರೆ ಅದಕ್ಕೂ ಅಡ್ಡಿ ಪಡಿಸುತ್ತಾ ಪ್ರಸ್ತುತ ಬೆಳೆದ ಅಡಿಕೆ ಬೆಳೆಯನ್ನು ತಾನೇ ಖುದ್ದು ಕಿತ್ತು ಗಲಾಟೆ ಮಾಡುತ್ತಿದ್ದಾನೆ. ನಾನು ಚೇಣಿಗೆ ನೀಡಿದ ರೈತರಿಗೂ ಅಡಿಕೆ ಕಾಯಿ ಕೀಳಲು ಬಿಡದೆ ನನಗೂ ಜೀವನ ನಡೆಸಲು ಬಿಡದೆ ತನ್ನ ಅಕ್ಕಂದಿರಿಗೂ ಹಲ್ಲೆ ಮಾಡುತ್ತಾ ಹಿಂಸೆ ನೀಡುತ್ತಿದ್ದಾನೆ ಎಂದು ತನ್ನ ಮಾನಸಿಕ ಹಿಂಸೆಯನ್ನು ವಿವರಿಸಿದ್ದಾರೆ.
ಆಸ್ತಿಗಾಗಿ ನನ್ನನ್ನು ಊರಿಂದ ಹೊರ ಹಾಕಲು ನನ್ನ ಮನೆಯ ಪಕ್ಕದಲ್ಲೇ ಹೊಸ ಮನೆ ನಿರ್ಮಾಣ ನೆವದಲ್ಲಿ ನನ್ನ ಮನೆಯ ಬಾಗಿಲು ಮುಂದೆ ಮಣ್ಣು ಸುರಿದು ಓಡಾಡಲು ಆಗದಂತೆ ತೊಂದರೆ ನೀಡುತ್ತಿದ್ದು, ನೆಮ್ಮದಿ ಇಲ್ಲದೆ ಹೆಣ್ಣು ಮಕ್ಕಳ ಜೊತೆ ಜೀವನ ನಡೆಸುವ ಅನಿವಾರ್ಯ ಎದುರಾಗಿದೆ. ತನ್ನ ಜಮೀನಿನ ಅಡಿಕೆಯನ್ನು ಕೀಳಲು ಪ್ರಭಾವಿಗಳ ಸಹಕಾರ ಪಡೆದು ನನ್ನನ್ನು ಜಮೀನಿನಿಂದ ಹೊರ ಹಾಕಲು ಸಜ್ಜಾಗಿದ್ದಾನೆ. ನನಗೆ ಸಹಕಾರ ನೀಡಲು ಬರುವವವರಿಗೂ ಬೆದರಿಕೆಯೊಡ್ಡಿ ಯಾರೊಬ್ಬರೂ ನನ್ನ ನೆರವಿಗೆ ಬರುತ್ತಿಲ್ಲ. ಇತ್ತ ಪೊಲೀಸರು ನನಗೆ ನ್ಯಾಯ ಒದಗಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಸಂತ್ರಸ್ತ ವೃದ್ದೆಗೆ ಬಂದ ಆಸ್ತಿಯೇ ಮುಳುವಾಗಿರುವುದು ವಿಪರ್ಯಾಸ. ಒಟ್ಟಾರೆ ಮಾಧ್ಯಮ ಮುಂದೆ ಬಂದ ವೃದ್ಧ ತಾಯಿಗೆ ಪೊಲೀಸರು ನ್ಯಾಯ ಒದಗಿಸುವರೇ ಕಾದು ನೋಡಬೇಕಿದೆ.
ಇದೇ ಸಂದರ್ಭದಲ್ಲಿ ವೃದ್ದೆ ರುದ್ರಮ್ಮನ ಮಕ್ಕಳಾದ ಗೀತಾ, ಪ್ರಮೀಳಾ ಇದ್ದರು.





