ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಸಂಪರ್ಕದ ಕೇಶಿಪ್ ರಸ್ತೆಗೆ ಜಿ.ಹೊಸಹಳ್ಳಿ ಬಳಿ ನಿರ್ಮಾಣ ಮಾಡುತ್ತಿರುವ ಟೋಲ್ ವಿರುದ್ಧ ಈಗಾಗಲೇ ಪ್ರತಿಭಟಿಸಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಆದರೆ ಸರ್ಕಾರ ಟೋಲ್ ಮರು ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ನೀಡಿರುವ ಕಾರಣ ಈ ಭಾಗದ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕೂಡಲೇ ಕಾಮಗಾರಿ ನಿಲ್ಲಿಸದಿದ್ದರೆ ಬೃಹತ್ ಪ್ರತಿಭಟನೆ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘದ ಕಾರ್ಯಕರ್ತರ ಸಭೆಯಲ್ಲಿ ಎಲ್ಲಾ ಪಕ್ಷದ ಮುಖಂಡರ ಸಹಕಾರದಲ್ಲಿ ಅವೈಜ್ಞಾನಿಕ ಟೋಲ್ ನಿರ್ಮಾಣ ಕೆಲಸ ನಿಲ್ಲಿಸದಿದ್ದರೆ ಇದೇ ತಿಂಗಳ 27 ಸೋಮವಾರ ಬೃಹತ್ ಪ್ರತಿಭಟನೆಯನ್ನು ಸಾವಿರಾರು ರೈತರು ತಮ್ಮ ವಾಹನದೊಂದಿಗೆ ನಡೆಸಲಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರೈತರ ಆಕ್ರೋಶ ಕಟ್ಟೆ ಒಡೆಯುತ್ತದೆ ಎಂದು ಎಲ್ಲಾ ರೈತರು ಒಕ್ಕೊರಲಿನ ಎಚ್ಚರಿಕೆ ನೀಡಿದರು.
ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಕೇವಲ ರೈತರಷ್ಟೇ ಬಳಸುವ ಈ ರಸ್ತೆ ಕೆಲ ಗ್ರಾಮದವರಿಗೆ ಹೊಟ್ಟೆ ಮೇಲೆ ಹೊಡೆದಂತೆ ಆಗುತ್ತದೆ. ಹಾಲು, ಕೃಷಿ ಉತ್ಪನ್ನ ಸಾಗಿಸುವ ರೈತರಿಂದ ಸುಂಕ ವಸೂಲಿ ಸರ್ಕಾರದ ಕೆಟ್ಟ ಕಣ್ಣು ಬಡ ರೈತರ ಮೇಲೆ ಬಿದ್ದಿದೆ. ಯಾವುದೇ ಬಾರಿ ವಾಹನ ಈ ರಸ್ತೆಯಲ್ಲಿ ಸಂಚಾರ ಮಾಡುವುದಿಲ್ಲ. ಗುಬ್ಬಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಈಗಾಗಲೇ ಹಾದು ಹೋಗಿದೆ. ಆದರೂ ಈ ಗ್ರಾಮೀಣ ರಸ್ತೆಗೆ ಸುಂಕ ನೀಡುವುದು ಅವೈಜ್ಞಾನಿಕ. ಇಂತಹ ಟೋಲ್ ಬೇಡ ಎಂದು ಹೋರಾಟ ಈಗಾಗಲೇ ನಡೆಸಿದ್ದೆವು. ಕೆಲಸ ನಿಲ್ಲಿಸಿ ಕೆಲ ತಿಂಗಳಲ್ಲೇ ಮರು ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದು ಖಂಡನೀಯ. ರೈತರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಇದೇ ತಿಂಗಳ 27 ರಂದು ರೈತರ ಹೋರಾಟ ತೀವ್ರತೆ ಗೊಳ್ಳುವ ಮುನ್ನ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಜೆಡಿಎಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ಕಡಬ ಕಸಬ ಎರಡು ಹೋಬಳಿಯ ರೈತರು ಬಳಸುವ ಈ ರಸ್ತೆಗೆ ಟೋಲ್ ನಿರ್ಮಾಣ ಖಂಡನೀಯ. ರೈತರ ಹೋರಾಟಕ್ಕೆ ಬೆಲೆ ನೀಡಿ ಕೆಲಸ ನಿಲ್ಲಿಸಿ ಈಗ ಮರು ನಿರ್ಮಾಣಕ್ಕೆ ಅವಕಾಶ ಮಾಡಿರುವುದು ರೈತರ ಮೇಲೆ ದೌರ್ಜನ್ಯ ಎನಿಸುತ್ತಿದೆ. ಈಗಾಗಲೇ ರೈತರ ಹೇಮಾವತಿ ನೀರು ಕಿತ್ತುಕೊಳ್ಳಾಗುತ್ತಿದೆ. ಈಗ ರೈತರಿಂದ ರಸ್ತೆ ಸುಂಕ ವಸೂಲಿ ಮಾಡಲಾಗುತ್ತಿದೆ. ಇವೆಲ್ಲಾ ರೈತರ ಸಹನೆ ಮೀರಿಸುತ್ತಿದೆ. ಕೂಡಲೇ ಟೋಲ್ ಕೆಲಸ ನಿಲ್ಲಿಸದಿದ್ದರೆ ರೈತರ ಗಟ್ಟಿ ಹೋರಾಟ ಕಾನೂನು ಹೋರಾಟಕ್ಕೂ ತಿರುಗಲಿದೆ ಎಂದರು.
ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಅವೈಜ್ಞಾನಿಕ ಟೋಲ್ ಬಗ್ಗೆ ರೈತರ ಆಕ್ಷೇಪ ತಿಳಿದರೂ ಚುನಾಯಿತ ಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಮಧುಗಿರಿ ಕ್ಷೇತ್ರದಲ್ಲಿ ಅನಗತ್ಯ ಟೋಲ್ ನಿರ್ಮಾಣ ಮಾಡಲು ಮುಂದಾದಾಗ ಶಾಸಕ ರಾಜಣ್ಣ ಅವರು ಸ್ಥಳದಲ್ಲಿ ಪ್ರತಿಭಟನೆ ಮಾಡಿ ಟೋಲ್ ತೆರವು ಮಾಡಿದ್ದರು. ಇಲ್ಲಿ ರೈತರ ಕಷ್ಟ ತಿಳಿಯದಾಗಿದೆ. ಜಿಲ್ಲಾಡಳಿತ ರೈತರ ಮನವಿ ಆಲಿಸದಿದ್ದರೆ ಬೃಹತ್ ಹೋರಾಟ ತಾಲ್ಲೂಕು, ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ತಲುಪಲಿದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಮಾತನಾಡಿ ಟೋಲ್ ಕೆಲಸ ಕೈಬಿಟ್ಟಂತೆ ನಾಟಕವಾಡಿ ಸರ್ಕಾರ ಸಂಬಂಧಪಟ್ಟ ಇಲಾಖೆಯ ಮೂಲಕ ಮರು ನಿರ್ಮಾಣಕ್ಕೆ ಮುಂದಾಗಿದೆ. ಪೊಲೀಸರ ನೆರವು ಪಡೆದು ಕೆಲಸ ಆರಂಭಿಸಿದ್ದ ಕಾರಣ ರೈತರ ಅಸಮಾಧಾನ ಸ್ಫೋಟ ಆಗುತ್ತಿದೆ. ಹೆದ್ದಾರಿಗಳನ್ನು ಬಿಟ್ಟು ರೈತರ ಸಣ್ಣ ರಸ್ತೆಗೆ ಸುಂಕ ವಿಧಿಸುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರೈತರ ಮೇಲೆ ಒಂದಲ್ಲಾ ಒಂದು ಪ್ರಹಾರ ಬೀಸುತ್ತಿದೆ. ಈ ಟೋಲ್ ನಿಲ್ಲದಿದ್ದರೆ ರೈತರು ಸ್ಥಳದಲ್ಲೇ ಕಾಮಗಾರಿ ನಿಲ್ಲಿಸಿ ಪ್ರತಿಭಟನೆ ಮಾಡುತ್ತಾರೆ ಎಂದು ನೇರ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ ಲೋಕೇಶ್, ಶಿವಕುಮಾರ್, ಅರೇಹಳ್ಳಿ ಮಂಜುನಾಥ್, ಸಿ.ಟಿ.ಕುಮಾರ್, ಸಿ.ಟಿ.ಪ್ರಕಾಶ್, ಸತ್ತಿಗಪ್ಪ, ರಾಂಪುರ ಸತೀಶ್, ಹೊಸಹಳ್ಳಿ ಗ್ರಾಪಂ ಸದಸ್ಯರಾದ ರೇಣುಕಪ್ರಸಾದ್, ನರೇಶ್ ಇತರರು ಇದ್ದರು.





