ವೈಜ್ಞಾನಿಕತೆಗೂ ವೈಚಾರಿಕತೆಗೂ ಇರುವ ಸತ್ಯಾಸತ್ಯತೆಯಲ್ಲಿ ಮೂಢನಂಬಿಕೆ ತೊಡೆಯುವ ಶಕ್ತಿ ವೈಜ್ಞಾನಿಕತೆಗೆ ಇದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಎಚ್.ಆರ್.ಸ್ವಾಮಿ ತಿಳಿಸಿದರು.
ಗುಬ್ಬಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಸೈನ್ಸ್ ಕ್ಲಬ್, ಕನ್ನಡ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಯುವಜನರಲ್ಲಿ ವೈಜ್ಞಾನಿಕ ಮನೋಭಾವನೆ ಎಂಬ ವಿಷಯಾಧಾರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶೂನ್ಯದಿಂದ ವಿಭೂತಿ ಸೃಷ್ಟಿ, ನೀರಿನಲ್ಲಿ ದೀಪ ಉರಿಸುವುದು, ನಾಲಿಗೆ ಮೇಲೆ ಕರ್ಪೂರ ಹಚ್ಚುವುದು, ಚರ್ಮಕ್ಕೆ ಕೊಕ್ಕೆ ಸಿಕ್ಕಿಸುವುದು, ಮಂತ್ರ ಹೇಳಿ ಬೆಂಕಿ ಹಚ್ಚುವುದು ಹೀಗೆ ಅನೇಕ ಪವಾಡ ಬಯಲು ಮಾಡಿರುವುದು ವಿಜ್ಞಾನ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಹೊಟ್ಟೆಪಾಡಿಗೆ ಮೂಢನಂಬಿಕೆ ಬಿತ್ತಿ ಬದುಕು ಸಾಗಿಸುತ್ತಾರೆ. ಇಂತಹ ಕೈಚಳಕವನ್ನು ಬೇದಿಸುವ ಕೆಲಸ ಯುವ ಪೀಳಿಗೆ ಮಾಡಬೇಕು. ಮುಗ್ದ ಜನರನ್ನು ಕಾಪಾಡಿ ವೈಜ್ಞಾನಿಕ ವಿಚಾರ ಜಾಗೃತ ಗೊಳಿಸಬೇಕು ಎಂದು ಕರೆ ನೀಡಿದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರ ಸದಸ್ಯ ಡಾ.ರವಿಕುಮಾರ್ ನಿಹಾ ಮಾತನಾಡಿ ಯಾವುದೇ ವಿಚಾರ ಘಟನೆಯನ್ನು ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಕರಿಸಿ ಒಪ್ಪಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸಂವಿಧಾನ ಪ್ರಕಾರವೇ ವೈಜ್ಞಾನಿಕ ವಿಚಾರ ತಿಳಿಯುವುದು ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ವಿಜ್ಞಾನ ಕಲಿಯುವ ಜೊತೆ ಪ್ರಾಯೋಗಿಕವಾಗಿ ಆವಿಷ್ಕಾರ ಮಾಡುವ ಕಲೆ ಮೈಗೂಡಿಸಿ ಕೊಳ್ಳಬೇಕು ಎಂದು ಕರೆ ನೀಡಿದರು.
ಉಪನ್ಯಾಸಕ ಡಾ.ಮೂರ್ತಿ ತಿಮ್ಮನಹಳ್ಳಿ ಮಾತನಾಡಿ ಮೂಢನಂಬಿಕೆಯಿಂದ ದೂರವಾಗಲು ಮೊದಲು ಪ್ರಶ್ನಿಸುವ ಗುಣ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿಜ್ಞಾನ ಬೆಳೆಯಲು ಪ್ರಶ್ನೆ ಮಾಡುವ ಗುಣವೇ ಮುಖ್ಯ ಕಾರಣ ಎಂದರು.
ಪ್ರಾಚಾರ್ಯ ಎಂ.ಕೆ.ಮಂಜುನಾಥ್ ಮಾತನಾಡಿ ವಾಸ್ತವತೆ ಮತ್ತು ಸತ್ಯ ಸಂಗತಿಗಳನ್ನು ಕಂಡು ಹಿಡಿಯಲು ಮೊದಲು ಘಟನೆಯ ಹಿಂದಿನ ಕಾರಣ ಅರಿಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಲ ವೈಜ್ಞಾನಿಕ ವಿಚಾರವನ್ನು ಪ್ರಾತ್ಯಕ್ಷಿಕೆ ಮಾಡಲಾಯಿತು.
ವೇದಿಕೆಯಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಯತೀಶ್, ಉಪನ್ಯಾಸಕರಾದ ಕೆ.ಲೋಕೇಶ್, ಪರಮೇಶ್, ಮಂಜುನಾಥ್, ಚಂದ್ರಶೇಖರ್, ದೊಡ್ಡಯ್ಯ, ಮೂರ್ತಿ, ಜ್ಯೋತಿ, ಅಂಬಿಕಾ, ಜಗದೀಶ್, ಕಾಲೇಜು ಸಿಬ್ಬಂದಿಗಳಾದ ಮಂಜಣ್ಣ, ನವೀನ್ ಇತರರು ಇದ್ದರು.





