ಗುಬ್ಬಿ ತಾಲೂಕಿನ ಎಲ್ಲಾ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಜಯಂತಿ ಅಂಗವಾಗಿ ಸ್ವಚ್ಚತಾ ಹೀ ಸೇವಾ ಅಥವಾ ಸ್ವಚ್ಚತೆಯೇ ಸೇವೆ ಎಂಬ ವಿಶೇಷ ಜನಾಂದೋಲನವನ್ನು ಹಮ್ಮಿಕೊಂಡಿದ್ದು, ಈ ಪ್ರಯುಕ್ತ “ಸ್ವಚ್ಚತಾ ಹೀ ಸೇವಾ ಪ್ರಾಕ್ಷಿಕ-2025 ಅಭಿಯಾನವನ್ನು ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರವರೆಗೆ “ಸ್ವಚ್ಚೋತ್ಸವ” ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಾಪಂ ಇಒ ಎಸ್.ಶಿವಪ್ರಕಾಶ್ ತಿಳಿಸಿದರು.
ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಅಕ್ಟೋಬರ್ 2 ರಂದು ಸ್ವಚ್ಚ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದೆ. ಸ್ವಚ್ಚತೆಗಾಗಿ ಸ್ವಯಂ ಪ್ರೇರಣೆ ಮತ್ತು ಸಾಮೂಹಿಕ ಶ್ರಮದಾನ ಚಟುವಟಿಕೆಗಳನ್ನು ಹಮ್ಮಿಕೊಂಡು ಸಮುದಾಯದಲ್ಲಿ ಸ್ವಚ್ಚತೆಯ ಆಶಯಗಳನ್ನು ಬಲಪಡಿಸಲು 2017 ರಿಂದ ಸ್ವಚ್ಚತಾ ಹೀ ಸೇವಾ ಪಾಕ್ಷಿಕ ಆಂದೋಲನವನ್ನು ಆಚರಿಸಲಾಗುತ್ತಿದೆ. ಸ್ವಚ್ಚ ಭಾರತ ಅಭಿಯಾನದ 11 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಈ ಯೋಜನೆ ಸಾಧನೆಯ ಮೈಲಿಗಳನ್ನು ಗೌರವಿಸಲು “ಸ್ವಚ್ಚತಾ ಹೀ ಸೇವಾ ಪ್ರಾಕ್ಷಿಕ-2025 ಅಭಿಯಾನವನ್ನು ಆಚರಿಸಲಾಗುತ್ತಿದೆ ಎಂದರು.
ಅಭಿಯಾನದ ಅವಧಿಯಲ್ಲಿ ಸ್ವಚ್ಚತೆಗಾಗಿ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಮತ್ತು ಸಮುದಾಯದ ಭಾಗವಹಿಸುವಿಕೆಗೆ ಅನುಕೂಲ ಮಾಡಿಕೊಡಲಾಗುವುದು. ಅನೈರ್ಮಲ್ಯ ಮತ್ತು ಸಮಸ್ಯಾತ್ಮಕ ಕಸದ ತಾಣಗಳನ್ನು ತೆರವುಗೊಳಿಸಲು ಗಮನಹರಿಸುವ ಬೃಹತ್ ಸ್ವಚ್ಚತಾ ಅಭಿಯಾನಗಳು, ನೈರ್ಮಲ್ಯ ಕಾರ್ಮಿಕರ ಕೊಡುಗೆಯನ್ನು ಗುರುತಿಸುವುದು ಹಾಗೂ ಕಳೆದ ದಶಕದ ಸಾಧನೆಗಳ ಆಚರಣೆ ಮತ್ತು ಸಂಪೂರ್ಣ ಸ್ವಚ್ಚತೆಗೆ ನಮ್ಮ ಬದ್ದತೆಯನ್ನು ಪುನರುಚ್ಚರಿಸಲಾಗುವುದು ಎಂದರು.
ಸ್ವಚ್ಚತಾ ಹೀ ಸೇವಾ ಅಭಿಯಾನವನ್ನು ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಚತಾ ಕಸದ ಸ್ಥಳಗಳ ಗುರುತಿಸುವಿಕೆ, ಸಫಾಯಿ ಮಿತ್ತರ ಸುರಕ್ಷಾ ಶಿಬಿರಗಳ ಆಯೋಜಿಸುವಿಕೆ, ಸ್ವಚ್ಚ ಹಸಿರು ಉತ್ಸವಗಳ ಆಚರಣೆ, ವಿವಿಧ ಪ್ರಚಾರ ಚಟುವಟಿಕೆಗಳು, ಒಂದು ದಿನ ಒಂದು ಗಂಟೆ ಒಟ್ಟಿಗೆ ಶ್ರಮದಾನ ಹಾಗೂ ಇನ್ನಿತರ ಕ್ರಿಯಾಶೀಲಾ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಎಲ್ಲಾ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ಜನರ ಸಹಭಾಗಿತ್ವ ಬಹು ಮುಖ್ಯವಾಗಿದೆ ಎಂದ ಅವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ತಾಲೂಕನ್ನು ಕಸ ಮುಕ್ತ ಪರಿಸರ ಸ್ನೇಹಿ ತಾಲೂಕನ್ನಾಗಿ ಪರಿವರ್ತಿಸಲು ಸಹಕರಿಸುವಂತೆ ಪ್ರಕಟಣೆಯಲ್ಲಿ ಮನವಿ ಮಾಡಿದರು.





