ಸುಸಜ್ಜಿತವಾದ ಗುಬ್ಬಿಯ ರಂಗಮಂದಿರದಲ್ಲಿ ಕಲಾವಿದರಿಗೆ ಪ್ರೋತ್ಸಾಹ ಹಾಗೂ ಚೈತನ್ಯ ತುಂಬುವ ಶಕ್ತಿ ಇದೆ ಎಂದು ಖ್ಯಾತ ರಂಗಕರ್ಮಿ ನಟ ನಿರ್ದೇಶಕ ಮಂಡ್ಯ ರಮೇಶ್ ಅಭಿಪ್ರಾಯ ಪಟ್ಟರು.
ಗುಬ್ಬಿ ಪಟ್ಟಣದ ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಡಾ.ಗುಬ್ಬಿ ವೀರಣ್ಣ ಟ್ರಸ್ಟ್ ಹಾಗೂ ಮಾಲತಮ್ಮ ಆರ್ಟ್ ಫೌಂಡೇಶನ್ ವತಿಯಿಂದ ಜರುಗಿದ ನಾಟಕೋತ್ಸವದಲ್ಲಿ ನಟನಾ ಕಲಾ ತಂಡದ ಸ್ಥಾವರ ಜಂಗಮ ನಾಟಕ ಪ್ರದರ್ಶನ ಸಂದರ್ಭದಲ್ಲಿ ಮಾತನಾಡಿದರು.
ನಾಟಕರತ್ನ ಗುಬ್ಬಿ ವೀರಣ್ಣನವರ ಜನ್ಮ ಭೂಮಿ ಗುಬ್ಬಿಯಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಅರ್ಥಪೂರ್ಣ. ಪುಣ್ಯ ರಂಗಭೂಮಿಯ ಮಹಾನ್ ದಿಗ್ಗಜ ವೀರಣ್ಣನವರ ಗರಡಿಯಲ್ಲಿ ಈ ನಾಡಿನ ಅನೇಕ ಮೇರು ನಟರು ಬೆಳೆ ದಿದ್ದಾರೆ ಎಂದ ಅವರು ಬಿ.ಜಯಶ್ರೀ ನನಗೆ ನಾಗಮಂಡಲ ಚಲನಚಿತ್ರದಿಂದ ಹೊಸ ಹುರುಪು ನೀಡಿದ್ದಾರೆ. ಈ ವಯಸ್ಸಿನಲ್ಲಿ ತಮ್ಮ ತಾಯಿಯ ಹೆಸರಿನಲ್ಲಿ ಟ್ರಸ್ಟ್ ಸ್ಥಾಪನೆ ಮಾಡಿ ರಂಗ ಪರಂಪರೆಯನ್ನು ಮುಂದುವರೆಸುತ್ತಿರುವುದು ಅಭಿನಂದಾರ್ಹ. ನಮ್ಮಂತಹ ಕಲಾವಿದರಿಗೆ ಆಶ್ರಯದಾತರಾಗಿದ್ದಾರೆ ಎಂದು ಸ್ಮರಿಸಿದರು.
ಜಯಶ್ರೀ ಅವರು ರಾಜ್ಯಸಭಾ ಸದಸ್ಯರಾಗಿದ್ದಾಗ ನಾಡಿನ ಮೂಲೆ ಮೂಲೆ ಗಳಲ್ಲಿ ರಂಗಮಂದಿರಗಳಿಗೆ ಹಣ ನೀಡಿದ್ದಾರೆ. ಅದರಲ್ಲಿ ನಟನಾ ಸಂಸ್ಥೆ ಕೂಡಾ ಒಂದು ಎಂದ ಅವರು ಅವರ ತಾತ ಗುಬ್ಬಿ ವೀರಣ್ಣ ಅವರ ಹೆಸರಿನಲ್ಲಿ ಹುಟ್ಟೂರಿನಲ್ಲಿ ಸುಸಜ್ಜಿತ ರಂಗಮಂದಿರ ಕಟ್ಟಿ ಟ್ರಸ್ಟ್ ಮೂಲಕ ನಾಟಕೋತ್ಸವ, ಸಂಗೀತೋತ್ಸವ, ನೃತ್ಯೋತ್ಸವ ಹಾಗೂ ಪೌರಾಣಿಕ ಐತಿಹಾಸಿಕ ಸ್ಥಳೀಯ ರಂಗ ನಾಟಕಗಳ ಉತ್ಸವ ನಡೆಸಿ ತಮ್ಮ ಪರಂಪರೆ ಮುಂದುವರೆಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷೆ ಬಿ.ಜಯಶ್ರೀ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯತೀಶ್, ನಾಟಕೋತ್ಸವ ಸಂಚಾಲಕ ರಾಜೇಶ್ ಗುಬ್ಬಿ, ಟ್ರಸ್ಟಿ ಹೆಚ್.ಎಂ.ರಂಗಯ್ಯ ಇನ್ನಿತರರು ಭಾಗವಹಿಸಿದ್ದರು.





