ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತ ಕ್ಷೇತ್ರದ ವ್ಯಾಪ್ತಿಯ ಮಲ್ಹಾರ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳ ಮಾಳಿಗೆಗಳು ಸೋರುತ್ತಿದ್ದರೂ ಶಾಸಕರು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಗ್ರಾಮದ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಗ್ರಾಮದ 2 ಅಂಗನವಾಡಿಗಳ ಸ್ವಂತ ಕಟ್ಟಡವಿದ್ದರೂ ಕೂಡ ಮಳೆ ಬಂದಾಗ ಸೋರುತ್ತಿರುವುದರಿಂದ ಸಂಬಂಧಿಸಿದ ಶಾಸಕರಿಗೆ ಮೂಲಸೌಕರ್ಯ ಒದಗಿಸಲು ಹಲವು ಬಾರಿ ಅಂಗಲಾಚಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಿರ್ವಹಣೆ ಮಾಡಲಾಗುತ್ತಿದ್ದು, ಸಮಸ್ಯೆಗಳಿಗೆ ಸ್ಪಂದಿಸದಿರುವ ಶಾಸಕರನ್ನು ಆಯ್ಕೆ ಮಾಡಿದ್ದಕ್ಕೆ ಪಶ್ಚಾತ್ತಾಪವಾಗುತ್ತಿದೆ” ಎಂದರು.

“ಮಲ್ಹಾರ ಗ್ರಾಮದಲ್ಲಿನ 2 ಅಂಗನವಾಡಿ ಶಾಲೆಗಳ ಕೊಠಡಿಗಳು ಶಿಥಿಲಗೊಂಡು ಸಿಮೆಂಟ್ ಉದುರಿ ಬಿಳುತ್ತಿದ್ದು, ಕಬ್ಬಿಣದ ರಾಡುಗಳ ದರ್ಶನವಾಗುತ್ತಿವೆ. ಸರಳುಗಳು ತುಕ್ಕು ಹಿಡಿದ ಸ್ಥಿತಿಯಲ್ಲಿವೆ. ಅದನ್ನು ದುರಸ್ತಿ ಮಾಡಿಸಲು ಅಗತ್ಯ ಅನುದಾನ ಕೊಡಿಸುವಲ್ಲಿ ಶಾಸಕರು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕುತಂತ್ರಗಳನ್ನು ಹೆಣೆಯುವವನು ಗಣತಂತ್ರದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ತನ್ನ ಅವಧಿಯಲ್ಲಿ ಒಳ್ಳೊಳ್ಳೆಯ ಯೋಜನೆಗಳನ್ನು ತಂದು, ಸಂಕಷ್ಟಗಳನ್ನು ಪರಿಹರಿಸುತ್ತ, ಜನರಿಗೆ ಹತ್ತಿರವಾಗಬೇಕೇ ಹೊರತು ಸುಳ್ಳು ಆಶ್ವಾಸನೆಗಳನ್ನು ನೀಡುತ್ತ ಕೇವಲ ಪ್ರಚಾರಕ್ಕಾಗಿ ಒಂದಿಲ್ಲೊಂದು ಗಿಮಿಕ್ ಮಾಡುತ್ತ ಸಾಗುವುದು ಸಮಂಜಸವಲ್ಲ” ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕರ್ನಾಟಕ ರಾಜ್ಯ 44ನೇ ಚಿಕ್ಕಮಕ್ಕಳ ತಜ್ಞರ ಸಮ್ಮೇಳನ: ಸಚಿವರಿಂದ ಉದ್ಘಾಟನೆ
“ಗುರುಮಠಕಲ್ ಕ್ಷೇತ್ರದ ಶಾಸಕರ ಕಾರ್ಯವು ಅಭಿವೃದ್ಧಿಯಲ್ಲಿ ಶೂನ್ಯವಾಗಿದ್ದು, ಬಿಟ್ಟಿ ಪ್ರಚಾರದಲ್ಲಿ ಅಗ್ರಗಣ್ಯ ಎಂಬುದಕ್ಕೆ ಇತ್ತೀಚಿನ ವಿದ್ಯಮಾನಗಳಿಂದಲೇ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತದಾರರು ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಿ ಕಳಿಸಿದ್ದಾರೆ. ಆದರೆ ಸದನದಲ್ಲಿ ಕ್ಷೇತ್ರಕ್ಕೆ ಸಂಬಂಧವಿಲ್ಲದ ಉಪದೇಶದ ಭಾಷಣ ಮಾಡುತ್ತ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ” ಎಂದು ಗುರುಮಠಕಲ್ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸದಸ್ಯರು ಹಾಗೂ ಯುವ ಕಾಂಗ್ರೆಸ್ ಅಸೆಂಬ್ಲಿ ಉಪಾಧ್ಯಕ್ಷ ಮಂಜುನಾಥ ಮೇತ್ರಿ ಮಲ್ಹಾರ ಆರೋಪಿಸಿದರು.





