ಈ ಶಾಲೆಯ ಮಕ್ಕಳಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು, ಆಟದ ಮೈದಾನ ಇಲ್ಲ. ಇನ್ನು ಶಾಲೆಗೆ ಕಾಂಪೌಂಡ್ ವ್ಯವಸ್ಥೆ ಇಲ್ಲದ ಕಾರಣ ಪ್ರಾಣಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಶಿಥಿಲಗೊಂಡ ಕೋಣೆಯಲ್ಲಿ ಭಯದಲ್ಲೇ ಕುಳಿತು ಮಕ್ಕಳು ಪಾಠ ಕೇಳಬೇಕಾದ ಅನಿವಾರ್ಯ.
ಹೌದು, ಇದು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕು ಕೇಂದ್ರದ ಹೃದಯಭಾಗದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.
ಪಟ್ಟಣ ಪಂಚಾಯಿತಿ ಬಳಿಯ ವಾರ್ಡ- 6 ರಲ್ಲಿರುವ ಈ ಶಾಲೆ 1ರಿಂದ 7ನೇ ತರಗತಿವರೆಗೆ ಇದೆ. ಒಟ್ಟು 65 ಮಕ್ಕಳು ಓದುತ್ತಿದ್ದಾರೆ. ಮುಖ್ಯಗುರು ಸೇರಿ ನಾಲ್ಕು ಶಿಕ್ಷಕರಿದ್ದಾರೆ. ಆದರೆ ಕೊಠಡಿಗಳ ಕೊರೆತೆಯಿಂದ ಇಲ್ಲಿನ ಮಕ್ಕಳು ಸುಸಜ್ಜಿತ ತರಗತಿ ಕೋಣೆ ಸೇರಿದಂತೆ ಅಗತ್ಯ ಮೂಲಸೌಕರ್ಯದಿಂದ ವಂಚಿತವಾಗಿದೆ.
ʼ1964 ರಲ್ಲಿ ಪ್ರಾರಂಭವಾದ ಈ ಶಾಲೆ ನಿಡಗುಂದಿಯ ಹೃದಯ ಭಾಗದಲ್ಲಿತ್ತು. ಆದರೆ, 2003ರಲ್ಲಿ ಶಾಸಕರ ಅನುದಾನದಿಂದ ಬೇರೆ ಸರ್ಕಾರಿ ಜಾಗದಲ್ಲಿ ಎರಡು ಹೊಸ ಕಟ್ಟಡದೊಂದಿಗೆ ನಿರ್ಮಾಣ ಮಾಡಲಾಗಿತ್ತು. ಆರು ದಶಕ ಹಳೆಯ ಉರ್ದು ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅರ್ಧ ಶತಮಾನದ ಈ ಶಾಲೆ ಇಂದು ಮೂಲಭೂತ ಸೌಕರ್ಯಗಳಿಲ್ಲದೇ ಸೊರಗಿರುವುದು ಬೇಸರದ ಸಂಗತಿʼ ಎಂಬುದು ಇಲ್ಲಿಯ ಸ್ಥಳೀಯರ ಅಭಿಪ್ರಾಯ.

ʼಕಳೆದ 20 ವರ್ಷಗಳ ಹಿಂದೆ ನಿರ್ಮಿಸಿಲಾದ ಶಾಲಾ ಕಟ್ಟಡ ಕಳಪೆ ಕಾಮಗಾರಿಯಿಂದ ಬಹುತೇಕ ಶಿಥಿಲಾವಸ್ಥೆಗೆ ತಲುಪಿದೆ. ಮೂರು ಕೊಠಡಿಗಳು ಮಳೆ ಬಂದರೆ ಸೋರುತ್ತವೆ. ಎರಡು ಕೋಣೆ ಕಳಪೆ ಕಾಮಗಾರಿಯಿಂದ ಕುಸಿದು ಬಿದ್ದಿವೆ. ಒಂದು ಕೊಠಡಿಗೆ ಛಾವಣಿ ಇಲ್ಲದಿರುವುದರಿಂದ ತಗಡಿನ ಶೀಟ್ ಹಾಕಿ ನಡೆಸುತ್ತಿದ್ದೇವೆ. ಆದರೆ, ಮಳೆ ಬಂದರೆ ತರಗತಿ ನಡೆಸಲು ತೊಂದರೆಯಾಗುತ್ತಿದೆʼ ಎಂದು ಹೆಸರು ಹೇಳಲು ಇಚ್ಚಿಸದ ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ.
ಕುಡಿಯುವ ನೀರು, ಶೌಚಾಲಯ ಇಲ್ಲ
ಈ ಶಾಲೆಯ ಮಕ್ಕಳಿಗೆ ಕುಡಿಯುವ ನೀರಿಲ್ಲ, ಹೀಗಾಗಿ ಮನೆಯಿಂದಲೇ ಬಾಟಲಿ ನೀರು ತರಬೇಕಾದ ಪರಿಸ್ಥಿತಿ ಇದೆ. ಇನ್ನು ಶೌಚಾಲಯ ಇಲ್ಲದ ಕಾರಣ ಮಕ್ಕಳ ಶೌಚಕ್ಕೆ ಬಯಲೇ ಗತಿಯಾಗಿದೆ. ಇಂತಹ ಮೂಲ ಸೌಕರ್ಯ ಕೊರತೆಯಿಂದ ಕೂಡಿದ ಶಾಲೆಯ ಬಗ್ಗೆ ಉತ್ಸಾಹ ತೋರದ ಪೋಷಕರು, ಪ್ರಸಕ್ತ ಸಾಲಿನಲ್ಲಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ.

ʼಶಾಲೆಗೆ ಅಗತ್ಯವಾದ ಮೂಲ ಸೌಕರ್ಯ ಕೊರತೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಇಲ್ಲಿಯವರೆಗೆ ಹೊಸ ಕೋಣೆ ಸೇರಿದಂತೆ ಯಾವುದೇ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಂಡಿಲ್ಲʼ ಎಂದು ಶಾಲೆಯ ಮುಖ್ಯ ಗುರು ಅಬ್ದುಲ್ ರಝಾಕ್ ಹೇಳಿದರು.
ಕ್ಷೇತ್ರ ಶಿಕ್ಷಣದಿಕಾರಿ ವಸಂತ ರಾಠೋಡ್ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ಶಾಲೆಯ ಸಮಸ್ಯೆಗಳ ಬಗ್ಗೆ ನಮ್ಮ ಗಮನದಲ್ಲಿವೆ. ಜಿಲ್ಲಾ ಪಂಚಾಯತ್ ಸಿಇಒ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದಷ್ಟು ಬೇಗ ಶಾಲೆಯ ಸಮಸ್ಯೆಗಳು ಬಗೆಹರಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇಶದಲ್ಲೇ ಅತಿಹೆಚ್ಚು ಪಿಂಚಣಿ ನೀಡುತ್ತಿರುವ ರಾಜ್ಯ ಕರ್ನಾಟಕ: ಕೃಷ್ಣ ಬೈರೇಗೌಡ
ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲೆಯ ಸಮಸ್ಯೆ ಬಗೆಹರಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವರೇ ಎಂದು ಕಾದು ನೋಡಬೇಕಿದೆ.




