ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಇಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ಧ್ವನಿ – ಕಾದ್ರೊಳ್ಳಿ ಬಣ) ವತಿಯಿಂದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂವೀರಪುರ ಗ್ರಾಮದಲ್ಲಿ ನಡೆದ ಏಳು ತಿಂಗಳ ಗರ್ಭಿಣಿಯ ಅಮಾನವೀಯ ಮರ್ಯಾದಾ ಹತ್ಯೆಯನ್ನು ತೀವ್ರವಾಗಿ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.
ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ, ಸಮಿತಿಯು ಹಳಿಯಾಳ ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿಯನ್ನು ಸಲ್ಲಿಸಿದರು.
ಹುಬ್ಬಳ್ಳಿ ತಾಲೂಕಿನ ಇನಾಂವೀರಪುರ ಗ್ರಾಮದ ನಿವಾಸಿ ಮಾನ್ಯ ವಿವೇಕಾನಂದ ದೊಡ್ಡಮನಿ (20 ವರ್ಷ) ಎಂಬ ಯುವತಿ, ದಲಿತ ಸಮುದಾಯದ ಯುವಕನನ್ನು ಪ್ರೀತಿಸಿ ಅಂತರಜಾತಿ ವಿವಾಹವಾಗಿದ್ದರು. ಈ ಮದುವೆಯು ಆಕೆಯ ಕುಟುಂಬದವರ ತೀವ್ರ ಕೆಂಗಣ್ಣಿಗೆ ಗುರಿಯಾಗಿತ್ತು.
ಇದೇ ತಿಂಗಳ 20ರಂದು ಮಾನ್ಯಳ ತಂದೆ ಪ್ರಕಾಶಗೌಡ ಪಾಟೀಲ ಹಾಗೂ ಸಂಬಂಧಿಕರಾದ ವೀರನಗೌಡ ಮತ್ತು ಅರುಣಗೌಡ ಸೇರಿಕೊಂಡು ಮಾನ್ಯಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಆರೋಪಿಗಳು ಮಾನ್ಯಳು ಏಳು ತಿಂಗಳ ಗರ್ಭಿಣಿ ಎಂಬ ಕನಿಷ್ಠ ಮಾನವೀಯತೆಯನ್ನೂ ತೋರದೆ, ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ.

ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಹುಬ್ಬಳ್ಳಿಯ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯ ವೇಳೆ ಯುವತಿಯ ಪತಿಯ ಕಡೆಯ ಸಂಬಂಧಿಕರ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಆರು ಜನರು ಪ್ರಸ್ತುತ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ವರದಿಯಾದರೂ ಅಲುಗಾಡದ ಆಡಳಿತ: ಅಧಿಕಾರಿಗಳ ‘ಮೌನ’ಕ್ಕೆ ಕಾರಣವೇನು?
ಈ ಘಟನೆಯು ಕೇವಲ ವೈಯಕ್ತಿಕ ಕೊಲೆಯಲ್ಲ, ಇದು ವ್ಯವಸ್ಥಿತ ಮರ್ಯಾದಾ ಹತ್ಯೆಯಾಗಿದೆ. ಈ ಕ್ರೌರ್ಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆ ಹಾಗೂ ಗಲ್ಲು ಶಿಕ್ಷೆಯಾಗಬೇಕು ಎಂದು ಸಮಿತಿಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಮಿತಿಯ ಉತ್ತರ ಕರ್ನಾಟಕ ಅಧ್ಯಕ್ಷರಾದ ಕಲ್ಲಪ್ಪ ಸುಭಾಸ ಕಾದ್ರೊಳ್ಳಿ, ಬೆಳಗಾವಿ ವಿಭಾಗೀಯ ಅಧ್ಯಕ್ಷ ಸುಭಾನಿ ನಾಯ್ಕ, ಹಳಿಯಾಳ ತಾಲೂಕು ಅಧ್ಯಕ್ಷ ರವಿ ದೊಡ್ಡಮನಿ, ಹನೀಫ ಜಮಾದಾರ, ಅಬ್ದುಲ್ ರೆಹಮಾನ್ ಜಂಬೂವಾಲೆ, ಶ್ರೀಮತಿ ಜನ್ನತಬಿ ನಾಯಕ, ಲಕ್ಷ್ಮಿ ಮಿರಾಶಿ, ಫ್ರಾನ್ಸಿಸ್ ರೊಡ್ರಿಗಸ್, ನವೀನ್ ಸೋನಾರ್, ಅಲ್ಲಾಭಕ್ಷ ಬಂಕಾಪುರ, ಇರ್ಫಾನ್ ಪಿರೋಜಿ, ಬುಡನಸಾಬ, ಮಹಮ್ಮದ್ ಅವರು ಉಪಸ್ಥಿತರಿದ್ದರು.
ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು. ಒಂದು ವೇಳೆ ನೊಂದ ಕುಟುಂಬಕ್ಕೆ ನ್ಯಾಯ ಸಿಗದಿದ್ದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.





