ವಿಜಯ ನಗರ ಜಿಲ್ಲೆಯ ಹಂಪಿಯಲ್ಲಿ ನಡೆಯಲಿರುವ ‘ಹಂಪಿ ಉತ್ಸವ’ಕ್ಕೆ ಪೌರ ಕಾರ್ಮಿಕರನ್ನು ಖುದ್ದು ಜಿಲ್ಲಾಧಿಕಾರಿಯೇ ಭೇಟಿಯಾಗಿ, ವಿಐಪಿ ಪಾಸ್ ನೀಡಿ ಸ್ವಾಗತಿಸಿದ್ದಾರೆ.
ವಿಜಯ ನಗರ ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ ಅವರು ಗುರುವಾರ ಹೊಸಪೇಟೆ ಪಟ್ಟಣದಲ್ಲಿರುವ ಪೌರ ಕಾರ್ಮಿಕರ ಮನೆಗಳಿಗೆ ಭೇಟಿ ನೀಡಿದ್ದರು. ಪೌರ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರಿಗೆ ಸುಮಾರು 2,000 ವಿಐಪಿ ಪಾಸ್‌ಗಳನ್ನು ಕೊಟ್ಟು, ಉತ್ಸವಕ್ಕೆ ಆಹ್ವಾನಿಸಿದ್ದಾರೆ.
“ಹಬ್ಬದ ದಿನಗಳೂ ಸೇರಿದಂತೆ ಪ್ರತಿನಿತ್ಯ ನಗರವನ್ನು ಸ್ವಚ್ಛವಾಗಿಡುವ ಕಾಯಕದಲ್ಲಿ ಪೌರ ಕಾರ್ಮಿಕರು ತೊಡಗಿದ್ದಾರೆ. ಅವರನ್ನು ನಾವು ಗೌರವಿಸಬೇಕು. ಈ ಬಾರಿಯ ಹಂಪಿ ಉತ್ಸವದಲ್ಲಿ ಪೌರ ಕಾರ್ಮಿಕರಿಗಾಗಿ ಪ್ರತ್ಯೇಕ ಗ್ಯಾಲರಿಯನ್ನು ನಿರ್ಮಿಸಿದ್ದೇವೆ. ಅವರೆಲ್ಲರೂ ಎಲ್ಲ ಮನರಂಜನೆ ಮತ್ತು ಕಾರ್ಯಕ್ರಮಗಳನ್ನು ಹತ್ತಿರದಿಂದ ವೀಕ್ಷಿಸಲು ಸಾಧ್ಯವಾಗುವಂತೆ ಮಾಡಿದ್ದೇವೆ” ಎಂದು ಜಿಲ್ಲಾಧಿಕಾರಿ ದಿವಾಕರ ತಿಳಿಸಿದ್ದಾರೆ.
ಮಾನ್ಯ ಜಿಲ್ಲಾಧಿಕಾರಿಗಳು ಪೌರ ಕಾರ್ಮಿಕ ಕುಟುಂದವರಿಗೆ ಹಂಪಿ ಉತ್ಸವ 2025 ರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ VIP PASS ಗಳನ್ನು ನೀಡಿ ಎಲ್ಲಾ ಪೌರ ಕಾರ್ಮಿಕ ಕುಟುಂಬದವರು ಹಾಗೂ ಮುಕ್ತಿ ಆಶ್ರಮ [ಕುಷ್ಠ ರೋಗ ಸಂತ್ರಸ್ಥರ ಆಶ್ರಮ] ದಲ್ಲಿನ ನಿವಾಸಿಗಳಿಗೆ VIP ಗ್ಯಾಲರಿನಲ್ಲಿ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸುವಂತೆ ಅಹ್ವಾನ ನೀಡಿದರು. pic.twitter.com/jWLNZzAu9C
— DC, Vijayanagara (@dcvijayanagara) February 26, 2025
“ಹಂಪಿ ಉತ್ಸವದ ಯಶಸ್ಸಿಗಾಗಿಯೂ ಸುಮಾರು 500ಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ, ಅವರಲ್ಲಿ ಹಲವರು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರ್ಯಕ್ರಮಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರಿಗೆ ವಿಐಪಿ ಪಾಸ್ ನೀಡಿ, ಕುಟುಂಬದೊಂದಿಗೆ ಕಾರ್ಯಕ್ರಮಗಳನ್ನು ನೋಡಲು ಸಾಧ್ಯವಾಗುವಂತೆ ಮಾಡಿದ್ದೇವೆ. ಇದು ಅವರಿಗೆ ಜಿಲ್ಲಾಡಳಿತದಿಂದ ನೀಡುವ ಗೌರವವಾಗಿದೆ” ಎಂದು ಹೇಳಿದ್ದಾರೆ.




