ಹೇಮಾವತಿ ನಾಲೆಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ದಂಪತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಟ್ಟೆ ತೊಳೆಯುವ ಸಂದರ್ಭ ದೀಪು ಕಾಲುಜಾರಿ ನಾಲೆಗೆ ಬಿದ್ದಿದ್ದಾರೆ. ತಕ್ಷಣವೇ ಪತ್ನಿಯನ್ನು ರಕ್ಷಿಸಲು ಗೋಪಾಲ್ ನಾಲೆಗೆ ಇಳಿದಿದ್ದಾರೆ. ಹರಿಯುತ್ತಿದ್ದ ಭಾರೀ ಪ್ರಮಾಣದ ನೀರಿನ ಹರಿವು ಇಬ್ಬರನ್ನೂ ಒಯ್ದುಹಾಕಿದೆ. ಇಬ್ಬರೂ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

ದಂಪತಿ ಮನೆಗೆ ಮರಳದಿದ್ದ ಕಾರಣ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿ, ನಾಲೆ ದಡದಲ್ಲಿ ಬಟ್ಟೆಗಳು ಇರುವುದನ್ನು ಕಂಡು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಿನ್ನೆ (ನ.24) ಬೆಳಗ್ಗೆ ಅಗ್ನಿಶಾಮಕದಳದ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ಗೋಪಾಲ್ ಅವರ ಮೃತದೇಹ ಪತ್ತೆಹಚ್ಚಲಾಗಿದೆ. ಶೋಧ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ: ಹಾಸನ | ಬಿಜೆಪಿ ಸರ್ಕಾರ ಧರ್ಮವನ್ನು ಮುಂದೆ ತಂದು ಕಾರ್ಮಿಕರ ನಡುವೆ ಒಡೆದಾಳುವ ನೀತಿ ಅನುಸರಿಸುತ್ತಿದೆ: ಸಿಐಟಿಯು ಕೆ ಹೇಮಲತಾ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮದ ಯುವ ದಂಪತಿಯ ದಾರುಣ ಮರಣ ಸ್ಥಳೀಯರಲ್ಲಿ ತೀವ್ರ ದುಃಖ ಮತ್ತು ಆಘಾತ ಮೂಡಿಸಿದೆ.





