ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೊಲ್ಲಹಳ್ಳಿ ಗ್ರಾಮದಲ್ಲಿ ಆನೆ ದಾಳಿ ಮಾಡಿದ್ದು, ಯುವಕನೋರ್ವ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗ್ರಾಮದ ಮಲ್ಲಿಕಾರ್ಜುನ (26) ಮಂಗಳವಾರ ಬೆಳಿಗ್ಗೆ ಮನೆಯ ಹತ್ತಿರವಿರುವ ಜೋಳದ ಹೊಲದಲ್ಲಿ ಹಸುಗಳಿಗೆ ಮೇವು ತರಲು ಹೋಗಿದ್ದಾಗ, ದಿಢೀರನೇ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಆ ಸಮಯದಲ್ಲಿ ಗ್ರಾಮಸ್ಥರು ಸಿಡಿಸಿದ ಪಟಾಕಿ ಸದ್ದಿನಿಂದ ಗಾಬರಿಗೊಂಡ ಕಾಡಾನೆ ತನ್ನನ್ನು ಕಂಡು ಓಡುತ್ತಿದ್ದ ಯುವಕನನ್ನು ಬೆನ್ನಟ್ಟಿ ದಾಳಿ ಮಾಡಿದ್ದರಿಂದ ಗಾಯಗೊಂಡಿದ್ದಾರೆ.
ಯುವಕ ಕೆಳಗೆ ಬಿದ್ದ ಕಾರಣ ಆತನನ್ನು ಆನೆ ಕಾಲಿನಿಂದ ಯುವಕನ ಎದೆಭಾಗಕ್ಕೆ ತುಳಿದಿದ್ದು, ತಲೆಗೆ ಗಾಯವಾಗಿದೆ. ಒಂದು ಕೈ ಮೂಳೆ ಮುರಿದಿದೆ. ಚಿಕಿತ್ಸೆಗಾಗಿ ಆತನನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆ ಕಂಡ ಸ್ಥಳೀಯರು ಗಾಬರಿಯಿಂದ ಕೂಗಾಡಿದ್ದರಿಂದ ಆನೆ ಜನರತ್ತ ಧಾವಿಸಲು ಮುಂದಾಗಿದೆ. ಗ್ರಾಮಸ್ಥರು ಕೂಡಲೇ ಪಟಾಕಿ ಸಿಡಿಸಿ ಬೆದರಿಸಿದ್ದರಿಂದ ಆನೆ ಅಲ್ಲಿಂದ ವಾಪಸಾಗಿದೆ. ಯುವಕನ ಪ್ರಾಣ ಉಳಿದಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಅಕ್ರಮ ಒತ್ತುವರಿ ನೆಪದಲ್ಲಿ ತೆರವು; ಬೆಳಂ ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದ ನಗರಸಭೆ
ಸ್ಥಳೀಯರು ಕೂಡಲೇ ಆತನನ್ನು ಚಿಕಿತ್ಸೆಗೆಂದು ಆಲೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.





