ಹೇಮಾವತಿ ಜಲಾಶಯ ಯೋಜನೆಯ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರೂ, ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್.ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದ ಮೇರೆಗೆ ಹೇಮಾವತಿ ಜಲಾಶಯದಿಂದ 2025-26ನೇ ಸಾಲಿಗೆ ಖಾರಿಫ್ ಅವಧಿಯ ಬೆಳೆಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಚನ್ನರಾಯಪಟ್ಟಣ ಹೇಮಾವತಿ ನಾಲಾ ವೃತ್ತದ ಸೂಪರೀಟೆಂಡಿಂಗ್ ಇಂಜಿನಿಯರ್ ತಿಳಿಸಿದ್ದಾರೆ.
ಅದರನ್ವಯ, ಜು.16 ರಿಂದ ನ.30ರವರೆಗೆ ಹೇಮಾವತಿ ಎಡದಂಡ ನಾಲೆ ಹಾಗೂ ನದಿ ಅಣೆಕಟ್ಟು ನಾಲೆಗಳಾದ ಶ್ರೀರಾಮದೇವರ ಉತ್ತರ ನಾಲೆ. ಹೇಮಗಿರಿ ನಾಲೆ, ಅಕ್ಕಿಹೆಬ್ಬಾಳು ನಾಲೆ, ಮಂದಗೆರೆ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ಈ ಕೆಳಕಂಡಂತೆ ಖುಷ್ಕಿ ಹಾಗೂ ಭತ್ತದ ಬೆಳೆಗಾಗಿ ನೀರನ್ನು ಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮೇಲ್ಕಂಡ ನೀರಿನ ನಿಯಂತ್ರಣವನ್ನು ಹೇಮಾವತಿ ಜಲಾಶಯದಲ್ಲಿ ಇರುವ ನೀರಿನ ಶೇಖರಣೆ ಮತ್ತು ಮಳೆಯನ್ನು ಆಧರಿಸಿ, ಜಲಾಶಯಕ್ಕೆ ಹರಿದು ಬರಬಹುದಾದ ಪರಿಮಾಣವನ್ನು ಅಂದಾಜು ಮಾಡಲಾಗಿದ್ದು, ಇಂತಹ ನಿಯಂತ್ರಣ ಪ್ರಾಕೃತಿಕ ಅಥವಾ ನೈಸರ್ಗಿಕ ವ್ಯತ್ಯಾಸದಿಂದ ನೀರಿನ ಕೊರತೆ ಉಂಟಾಗಿ ಬೆಳೆ ನಷ್ಟವಾದಲ್ಲಿ ಇಲಾಖೆಯವರು ಜವಾಬ್ದಾರರಲ್ಲ ಹಾಗೂ ರೈತ ಬಾಂಧವರಿಗೆ ಇದರಿಂದ ಯಾವ ಪರಿಹಾರ ಕೇಳುವ ಹಕ್ಕೂ ಇರುವುದಿಲ್ಲ ಎಂದೂ ತಿಳಿಸಿದ್ದಾರೆ.
ನೀರಿನ ನಿಯಂತ್ರಣ ಸೌಲಭ್ಯವನ್ನು ರೈತರು ಕೃಷಿ ಅಧಿಕಾರಿಗಳ ಸಲಹೆ ಪಡೆದು ಸೂಕ್ತ ಬೆಳೆಗಳನ್ನು ಅಳವಡಿಸಿ ಸದುಪಯೋಗ ಪಡೆಯಬೇಕೆಂದು ತಿಳಿಸಿದ್ದಾರೆ. ರೈತ ಬಾಂಧವರು ನಿಗದಿತ ಬೆಳೆಯನ್ನೇ ಬೆಳೆಯತಕ್ಕದ್ದು, ತಿಳಿಸಿರುವ ಬೆಳೆಗಳಿಗೆ ವಿರುದ್ಧವಾಗಿ ಬೇರೆ ಬೆಳೆ ಬೆಳೆದಲ್ಲಿ ರ್ನಾಟಕ ನೀರಾವರಿ ಕಾಯ್ದೆಯ ಹಾಗೂ ಚಾಲ್ತಿಯಲ್ಲಿರುವ ನಿಯಮಾವಳಿಗಳ ಪ್ರಕಾರ ದಂಡ ಕರವನ್ನು ವಿಧಿಸಲಾಗುವುದು ಹಾಗೂ ಆಗಬಹುದಾದ ನೀರಿನ ಕೊರತೆ ಮತ್ತು ಬೆಳೆ ನಷ್ಕಕ್ಕೆ ರೈತರೇ ಜವಾಬ್ದಾರರಾಗುತ್ತಾರೆ ಎಂದು ಇಂಜಿನಿಯರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಹಾಸನ | ಜಿಲ್ಲೆಯಲ್ಲಿ ಹೆಚ್ಚಾದ ಹಠಾತ್ ಸಾವು: ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಒತ್ತಾಯಿಸಿ ದುಂಡು ಮೇಜಿನ ಸಭೆ
ವಿವಿಧ ವಿತರಣಾ ನಾಲೆಗಳಲ್ಲಿ ನೀರು ಬಿಡುವ ಮತ್ತು ನಿಲ್ಲಿಸುವ ಅವಧಿಯ ದಿನಾಂಕವನ್ನು ಆಯಾ ವಿಭಾಗಕ್ಕೆ ಸಂಬಂಧಿಸಿದಂತೆ ಎಕ್ಸಿಕ್ಯುಟಿವ್ ಇಂಜಿನಿಯರ್ರುಗಳು ಪ್ರತ್ಯೇಕವಾಗಿ ಪ್ರಕಟಣೆ ಹೊರಡಿಸಿ ಅಚ್ಚುಕಟ್ಟು ಪ್ರದೇಶದ ಗ್ರಾಮ ಪಂಚಾಯಿತಿಗಳಿಗೆ ಹಾಗೂ ರೈತ ಬಾಂಧವರಿಗೆ ತಲುಪಿಸಿ ಸೂಕ್ತ ತಿಳುವಳಿಕೆ ನೀಡುವುದು. ನೀರಾವರಿಗೆ ಸಂಬಂಧಪಟ್ಟ ವಿತರಣಾ ನಾಲಾವಾರು, ಗ್ರಾಮವಾರು, ಸರ್ವೆ ನಂಬರು, ಮುಂತಾದ ಮಾಹಿತಿಗೆ ಸಂಬಂಧಿಸಿದಂತೆ ವಿಭಾಗ ಹಾಗೂ ಉಪ ವಿಭಾಗ ಕಚೇರಿಗಳಲ್ಲಿ ಪಡೆಯಬಹುದು. ನೀರನ್ನು ನಿಲ್ಲಿಸುವ ಅವಧಿಯನ್ನು ಯಾವುದೇ ಸಂದರ್ಭದಲ್ಲಿ ಅಥವಾ ಯಾವುದೇ ಕಾರಣಗಳಿಗಾಗಿಯೂ ಮುಂದುವರೆಸಲಾಗುವುದಿಲ್ಲ ಎಂದು ಚನ್ನರಾಯಪಟ್ಟಣ ಹೇಮಾವತಿ ನಾಲಾ ವೃತ್ತದ ಸೂಪರೀಟೆಂಡಿಂಗ್ ಇಂಜಿನಿಯರ್ ತಿಳಿಸಿದ್ದಾರೆ.





