ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಜಾಗೃತಿ ಮೂಡಿಸಲು ರಾಜ್ಯದ 13 ಜಿಲ್ಲೆಗಳಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಹಾಸನ ಜಿಲ್ಲಾದ್ಯಂತ ಅರಿವಿನ ಜಾಥಾ ಕಾರ್ಯಕ್ರಮದ ಮೂಲಕ 2026ರ ಮಾರ್ಚ್ 8ರಂದು ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ.
ಈ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಡಾ. ಅನುಪಮಾ, “2013ರಲ್ಲಿ ಮಂಗಳೂರಿನಲ್ಲಿ ಆರಂಭವಾದ ಒಕ್ಕೂಟವು ಮೈಸೂರು, ಬೆಂಗಳೂರು, ಬಿಜಾಪುರ, ಕೊಪ್ಪಳ, ಶಿವಮೊಗ್ಗ, ಧಾರವಾಡ, ಮಂಡ್ಯ, ಕೋಲಾರ, ಗುಲ್ಬರ್ಗ, ತುಮಕೂರು, ಉಡುಪಿ, ವಿಜಯಪುರ, ಜಿಲ್ಲೆಗಳಲ್ಲಿ ಅರಿವಿನ ಜಾಥಾ ಕಾರ್ಯಕ್ರಮಗಳೊಂದಿಗೆ ಜಿಲ್ಲಾ ಮಟ್ಟದ ಸಮಾವೇಶಗಳನ್ನು ನಡೆಸಿದೆ. 14ನೇ ಜಿಲ್ಲೆಯಾಗಿ ಹಾಸನವನ್ನು ಆಯ್ಕೆ ಮಾಡಿಕೊಂಡಿದ್ದು, ರಾಜ್ಯದ ಮಹಿಳೆ ಮತ್ತು ಮಕ್ಕಳ ಸಮಸ್ಯೆಗಳಲ್ಲದೆ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಗಮನಹರಿಸಲಾಗುವುದು” ಎಂದು ವಿವರಿಸಿದರು.
ವಾಣಿ ಪೆರಿಯೋಡಿ ಮಾತನಾಡಿ, “ಯುವಜನರ ಜೊತೆ ಒಡನಾಟ ಮತ್ತು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗುವುದು. ಒಕ್ಕೂಟದ ಕಡೆಯಿಂದ ಬೋಧನೆ-ಉಪದೇಶ ಇರುವುದಿಲ್ಲ ಎಂದು ಹೇಳಿ ಮಹಿಳೆ ಮತ್ತು ಮಕ್ಕಳು ಸೇರಿ ಕೌದಿ ಹೊಲೆಯುವ ಒಂದು ವಿಶಿಷ್ಟ ಕಾರ್ಯಕ್ರಮ ಇದೆ. ಕೌದಿ ಹೊಲೆಯುವ ಕೆಲಸದಲ್ಲಿ ತನ್ಮಯತೆ ಸುಖ ದುಃಖ ಹಂಚಿಕೆ, ಕವನ, ಕಥಾ ವಾಚನ ಎಲ್ಲಾ ನಡೆಯುತ್ತದೆ. ವರ್ಷದಲ್ಲಿ ಒಮ್ಮೆ ಅಧ್ಯಯನ ಶಿಬಿರ ನಡೆಯಲಿದೆ. ಇಲ್ಲಿ ಜಾಗತಿಕ ವಿದ್ಯಮಾನಗಳಿಂದ ಹಿಡಿದು ಸ್ಥಳೀಯ ಸಮಸ್ಯೆಗಳ ಕುರಿತು ವಿಚಾರ ಮಂಡನೆ, ಸಂವಾದ ನಡೆಯಲಿದೆ. ಮಾರ್ಚ್ 7, 8 ಅಥವಾ 8, 9 ರಂದು ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗುವುದು” ಎಂದು ಹೇಳಿದರು.
ಟಿ.ಎಲ್. ರೇಖಾಂಬ ಮಾತನಾಡಿ, “ಪ್ರೀತಿ ಮತ್ತು ಧೈರ್ಯವೇ ಒಕ್ಕೂಟದ ಸದಸ್ಯತ್ವ ಪಡೆಯಲು ಬೇಕಾದ ಅರ್ಹತೆ ಎಂದು ಹೇಳುತ್ತಾ ಒಕ್ಕೂಟದ ವೆಬ್ಸೈಟ್, ಯೂಟ್ಯೂಬ್ ಚಾನೆಲ್ ಕೂಡ ಇದೆ” ಎಂದರು.
ವಿಜಯಪುರ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಅರಿವಿನ ಜಾಥಾ ನಡೆಸಿದ ತಂಡದ ಪ್ರಮುಖರಾದ ನಸರಿನ್, ಮೇಘನ, ಆಶಾ, ಬಾನು ತರೀಕೆರೆ, ಎಂ.ಕೆ. ಸಹೇಲ್, ಅವರು ಜಾಥಾದ ಅನುಭವಗಳನ್ನು ಹಂಚಿಕೊಂಡರು.
ಹಾಸನದ ರೂಪ ಮಾತನಾಡಿ, “ರಾಜ್ಯದ ಮಹಿಳೆಯರು ಹಾಗೂ ಮಕ್ಕಳು ಅನುಭವಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಅಂಕಿ ಅಂಶಗಳ ಮೂಲಕ ವಿವರಿಸಿದರು. ಪ್ರತಿವರ್ಷ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆ ಬಿಟ್ಟು ಆಚೆ ಬರುತ್ತಿರುವುದು ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಮುಖ್ಯ ಕಾರಣ. ಲೈಂಗಿಕ ಕಾರ್ಯಕರ್ತೆಯರೆಂದು ಕರೆಯುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು ಅವರನ್ನು ಲೈಂಗಿಕ ದಮನಿತರು ಎಂದು ಕರೆಯಬೇಕೆಂದು ತಿಳಿಸಿದರು. ಸಾವಿರ ಸಾವಿರ ಸಂಖ್ಯೆ ಹೆಣ್ಣು ಮಕ್ಕಳು ಕಣ್ಮರೆಯಾಗಿ ವೇಶ್ಯಾಗೃಹಗಳನ್ನು ಬಲವಂತದಿಂದ ಸೇರ್ಪಡೆ ಆಗುತ್ತಿರುವುದನ್ನು ತಪ್ಪಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಜಾಗೃತ ದಳಗಳನ್ನು ಚುರುಕುಗೊಳಿಸ ಬೇಕಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಹಾಸನ | 21 ವರ್ಷದ ಯುವಕ ಹೃದಯಾಘಾತಕ್ಕೆ ಬಲಿ
ಜುಲೈ 27ರಂದು ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಿವಿನ ಪಯಣದ ಪ್ರಸ್ತುತಿ ಕಾರ್ಯಕ್ರಮ ಏರ್ಪಡಿಸುವ ಕುರಿತು ಸಭೆ ನಿರ್ಧರಿಸಿತು. ಅರಿವಿನ ಪಯಣಕ್ಕೆ ಸ್ಥಳೀಯ ತಂಡಗಳಿಗೆ ತರಬೇತಿ ನೀಡುವುದು, ಅಧ್ಯಯನ ಶಿಬಿರ ಏರ್ಪಡಿಸುವುದು, ಶಾಲೆ ಕಾಲೇಜುಗಳಿಗೆ ಭೇಟಿ ನೀಡುವುದು, ತಾಲೂಕು ಮಟ್ಟದ ಒಕ್ಕೂಟದ ಘಟಕಗಳನ್ನು ರೂಢಿಸುವುದು, ಮುಂತಾದ ಕಾರ್ಯಕ್ರಮ ನಡೆಸುವ ಬಗ್ಗೆ ನಿರ್ಧರಿಸಲಾಯಿತು.
ನಗರದ ರೆಡ್ ಕ್ರಾಸ್ ಭವನದಲ್ಲಿ ಏರ್ಪಡಿಸಲಾಗಿದ್ದ ಒಕ್ಕೂಟದ ಮೊದಲ ಸಭೆಯಲ್ಲಿ ಸಬಿಹಾ ಭೂಮಿಗೌಡ, ಡಾ. ಎಚ್.ಎಸ್. ಅನುಪಮಾ, ಸುನಂದ ಜಯರಾಮ್, ರೂಪ ಹಾಸನ, ವಾಣಿ ಪೆರಿಯೋಡಿ, ಟಿ.ಎಲ್. ರೇಖಾಂಬ, ಸಬಿತಾ ಬನ್ನಾಡಿ, ಗೌರಿ ಬೆಂಗಳೂರು, ಸುಮ ನಾನೆಟ್ಕರ್, ಲಿನೆಟ್ ಡಿಸಿಲ್ಟಾ, ಡಾ. ಸಾವಿತ್ರಿ, ಆರ್. ಸುನಂದಮ್ಮ, ಲೀಲಾವತಿ, ಕೆ. ಜಿ. ಕವಿತಾ, ಗೀತಾ, ಶಾಂತ ಅತ್ನಿ, ಕಲಾವತಿ ಮಧುಸೂದನ್ ಮುಂತಾದವರು ಪಾಲ್ಗೊಂಡಿದ್ದರು.





