ಕಿಡಿಗೇಡಿಗಳು ಜಮೀನಿಗೆ ಬೆಂಕಿ ಹಚ್ಚಿದ ಕಾರಣ ಜಾನುವಾರುಗಳ ಮೇವು, ನೀರಿನ ಪೈಪ್‌ಗಳು ಹಾಗೂ ತೆಂಗಿನಕಾಯಿಗಳು ಬೆಂಕಿಗಾಹುತಿಯಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ತಾಲೂಕಿನ ಸಿಂಗಟಗೆರೆ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಕಿಡಿಗೇಡಿಗಳು ಜಮೀನಿನಲ್ಲಿ ಬೆಂಕಿ ಹಚ್ಚಿದ್ದು, ಮೂರು ಟ್ರ್ಯಾಕ್ಟರ್‌ನಷ್ಟು ಮೇವು, ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ನೀರಾವರಿ ಪೈಪುಗಳು ಹಾಗೂ ನೂರಕ್ಕೂ ಹೆಚ್ಚು ತೆಂಗಿನಕಾಯಿಗಳು ಸುಟ್ಟುಹೋಗಿವೆ. ಜಮೀನು ಮಾಲೀಕ, ರೈತ ಹೇಮಂತ್ ಕಂಗಾಲಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜಮೀನಿನ ಮಾಲೀಕ ಹೇಮಂತ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಯಾರೋ ಕಿಡಿಗೇಡಿಗಳು ಜಮೀನಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಅಲ್ಲಿದ್ದಂತಹ ಕೃಷಿಯ ಪರಿಕರಗಳು, ಜಾನುವಾರುಗಳ ಮೇವು ಸೇರಿದಂತೆ ಇತರೆ ವಸ್ತುಗಳೂ ಕೂಡ ಬೆಂಕಿಗೆ ಆಹುತಿಯಾಗಿದ್ದು, ಸುಟ್ಟು ಕರಕಲಾಗಿವೆ” ಎಂದು ಅವಲತ್ತುಕೊಂಡರು.

“ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಬರುವಷ್ಟರಲ್ಲಿ ಎಲ್ಲ ಪರಿಕರಗಳು ಸುಟ್ಟು ಹೋಗಿದ್ದವು. ಕಿಡಿಗೇಡಿಗಳ ಅವಾಂತರದಿಂದ ಜಾನುವಾರುಗಳಿಗೆ ಮೇವಿಲ್ಲದಂತಾಗಿದ್ದು, ಸುಮಾರು ₹1 ಲಕ್ಷಕ್ಕೂ ಅಧಿಕವಾಗಿ ನಷ್ಟ ಉಂಟಾಗಿದೆ. ಈಗಾಗಲೇ ಮಳೆ ಇಲ್ಲದ ಬರದಂತಹ ಪರಿಸ್ಥಿತಿಯಲ್ಲಿ ಹಗಲು ರಾತ್ರಿ ವಿದ್ಯುತ್ ಬರುವುದನ್ನೇ ಕಾದು ಕುಳಿತಿದ್ದು, ನೀರು ಹಾಯಿಸಿ ದನಕರುಗಳಿಗಾಗಿ ಮೇವು ಉಳಿಸಿಕೊಂಡಿದ್ದೆವು” ಎಂದು ಬೇಸರ ವ್ಯಕ್ತಪಡಿಸಿದರು.

“ಮಳೆ, ಬೆಳೆ ಇಲ್ಲದೆ ದಿಕ್ಕು ತೋಚದಂತಾಗಿದ್ದ ಬರದಂತಹ ಕಾಲದಲ್ಲಿ ಇದ್ದ ಮೇವು ಸುಟ್ಟಿರುವ ಘಟನೆಯಿಂದ ಏನು ಮಾಡುವುದೆಂಬುದೇ ತೋಚದಂತಾಗಿದೆ. ಎರಡು ವರ್ಷಗಳಿಂದ ಸಾಲದ ಸುಳಿಯಲ್ಲಿ ಸಿಲುಕಿ ನಲುಗುತ್ತಿದ್ದೇವೆ. ಹೈನುಗಾರಿಕೆ ಮಾಡಿಕೊಂಡಿದ್ದು, ಉತ್ತಮ ಬೆಳೆ ಬಂದರೆ ಸಾಲ ತೀರಿಸುವ ನಿರೀಕ್ಷೆಯಲ್ಲಿದ್ದೆವು. ಆದರೆ, ಈ ಬಾರಿ ಮಳೆಯೂ ಇಲ್ಲದಾಯಿತು. ಇದೀಗ ಇಂತಹ ದುರ್ಘಟನೆ ನಡೆದಿದೆ. ದನಕರುಗಳಿಗೆ ಮೇವಿಲ್ಲದಂತಾಗಿದೆ” ಎಂದು ನೋವು ತೋಡಿಕೊಂಡರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಯುವಜನರಿಗೆ ಉದ್ಯೋಗ ಹಕ್ಕು ಖಾತ್ರಿಪಡಿಸಿ : ಬಸವರಾಜ ಪೂಜಾರ
ಘಟನೆಗೆ ಸಂಬಂಧಿಸಿದಂತೆ ಸಾಲಗಾಮೆ ಹೋಬಳಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತನಿಖೆಯ ಬಳಿಕ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.




