ಹಾಸನದ ಹಾಸನಾಂಬ ಜಾತ್ರೆಯಲ್ಲಿ ಯಾವುದೇ ರೀತಿಯ VIP ಪ್ರತಿಷ್ಠೆಗೆ ಮಣೆ ಹಾಕದೆ, ಸಾಮಾನ್ಯರ ದರ್ಶನಕ್ಕೆ ಆದ್ಯತೆ ನೀಡಿದ ಸರ್ಕಾರದ ಪ್ರಯತ್ನದ ಯಶಸ್ಸಿಗೆ ಸಹಕರಿಸಿದ ಜಿಲ್ಲೆಯ ಎಲ್ಲಾ ಪಕ್ಷದ ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದರು.
ಹಾಸನಾಂಭ ದೇವಿ ಮತ್ತು ಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದರು.
“ನಾನು ಕಳೆದ ವರ್ಷವೂ ದರ್ಶನ ಪಡೆದಿದ್ದೆ. ಈ ವರ್ಷವೂ ದರ್ಶನ ಪಡೆದಿದ್ದೇನೆ. ಇಡೀ ರಾಜ್ಯಕ್ಕೆ ಸುಭಿಕ್ಷೆ, ಶಾಂತಿ, ನೆಮ್ಮದಿಗಾಗಿ, ಮಳೆ- ಬೆಳೆ-ರೈತರ ಸಮೃದ್ಧಿಗಾಗಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಈ ಬಾರಿ ಅಗತ್ಯಕ್ಕಿಂತ ಹೆಚ್ವು ಮಳೆ ಬಿದ್ದು ರೈತರಿಗೆ ಆಗಿರುವ ನಷ್ಟ ಭರಿಸಲು NDRF ನಿಧಿ ಜೊತೆಗೆ ರಾಜ್ಯ ಸರ್ಕಾರವೂ ಹೆಚ್ಚುವರಿ ಪರಿಹಾರ ನೀಡುತ್ತಿದ್ದೇವೆ. ಹಿಂದೆಂದೂ ಯಾರೂ ನೀಡದಷ್ಟು ಬೆಳೆ ಹಾನಿ ಪರಿಹಾರವನ್ನು ನಾವು ನೀಡಿದ್ದೇವೆ. ಮುಂದಿನ ವರ್ಷ ಬೆಳೆ ಹಾನಿ ಪರಿಸ್ಥಿತಿ ಬರದಿರಲಿ ಎಂದು ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸಿದ್ದೇನೆ” ಎಂದರು.
“ನಮ್ಮದು ಕುವೆಂಪು ಅವರ ಆಶಯದ “ಸರ್ವ ಜನಾಂಗದ ಶಾಂತಿಯ ತೋಟ” ಆಗಿದೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸೋಣ. ಎಲ್ಲಾ ಧರ್ಮದ ದೇವರ ಆಶಯವೂ ಮನುಷ್ಯ ಪ್ರೀತಿ ಮತ್ತು ಸೌಹಾರ್ದದ ಬದುಕು. ಇದಕ್ಕೆ ತಕ್ಕಂತೆ ನಾವೆಲ್ಲರೂ ಸಹೃದತೆಯಿಂದ ಮನುಷ್ಯ ಧರ್ಮವನ್ನು ಪಾಲಿಸಬೇಕು” ಎಂದರು.
ಇದನ್ನೂ ಓದಿ: ಹಾಸನ | ಹಾಸನಾಂಬ ದೇವಾಲಯ ಸ್ನೇಹ, ಪ್ರೀತಿ, ಸಹಬಾಳ್ವೆ ಬೆಸೆಯುವ ಸ್ಥಳ: ಬಾನು ಮುಷ್ತಾಕ್
ಅಗತ್ಯ ಬಿದ್ದರೆ ಹೆಚ್ಚುವರಿ ಅನುದಾನ: ಹಾಸನಾಂಬ ಜಾತ್ರೆಗೆ ಹೆಚ್ಚುವರಿ ಅನುದಾನದ ಕುರಿತು ಮಾತನಾಡಿದ ಅವರು, “ಜಿಲ್ಲಾಳಿತದ ಜೊತೆ ಚರ್ಚಿಸುತ್ತೇನೆ. ಅಗತ್ಯಬಿದ್ದರೆ ಅನುದಾನ, ಹಣಕಾಸಿನ ನೆರವು ನೀಡಲಾಗುವುದು” ಎಂದರು.
ಈ ವೇಳೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ, ಶಾಸಕ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಹೂಡ ಅಧ್ಯಕ್ಷ ಶಿವಪ್ಪ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾಧಿಕಾರಿ ಲತಾ ಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಮತ್ತಿತರರು ಹಾಜರಿದ್ದರು.





