ಹಾಸನ ಜಿಲ್ಲೆ, ಬೇಲೂರು ತಾಲ್ಲೂಕು ಹಳೇಬೀಡಿನ ಶ್ರೀಕ್ಷೇತ್ರ ಪುಷ್ಪಗಿರಿಯಲ್ಲಿ ನಡೆಯುತ್ತಿರುವ ‘ಪದ್ಮಶ್ರೀ ಸುಭಾಷ್ ಪಾಳೇಕರ್ ಕೃಷಿ ಪದ್ಧತಿ’ ಕಾರ್ಯಾಗಾರದಲ್ಲಿ ಶಾಸಕರಾದ ಹೆಚ್ ಕೆ ಸುರೇಶ್ ಮಾತನಾಡಿ, ‘ಹಾಸನ ಜಿಲ್ಲೆ ಎಲ್ಲಾ ಬಗೆಯ ಕೃಷಿಕರನ್ನು ಹೊಂದಿರುವ ತವರೂರು’ ಎಂದು ಬಣ್ಣಿಸಿದರು.
ಹಾಸನ ಜಿಲ್ಲೆಯಲ್ಲಿ, ಕಾಫಿ, ಮೆಣಸು, ಏಲಕ್ಕಿ, ಶುಂಠಿ, ತಂಬಾಕು, ಮೆಕ್ಕೆ ಜೋಳ, ಆಲೂಗೆಡ್ಡೆ, ಶೇಂಗಾ, ಹತ್ತಿ, ಸೂರ್ಯಕಾಂತಿ ಹೀಗೆ ಎಲ್ಲಾ ಬಗೆಯ ಕೃಷಿ ಮಾಡುವ, ಕೃಷಿಕರನ್ನು ಕಾಣಬಹುದು. ಅದರಲ್ಲೂ, ಜಿಲ್ಲೆ ಆಹಾರ ಪದಾರ್ಥ ಬೆಳೆಯುವಲ್ಲಿ ಮುಂದಿದೆ. ಬೇಲೂರು ಆಲೂಗೆಡ್ಡೆಗೆ ಖ್ಯಾತಿ ಹೊಂದಿದೆ. ಒಂದೊಂದು ತಾಲ್ಲೂಕು ಸಹ ಬೇರೆ ಬೇರೆ ಬೆಳೆಗಳಿಗೆ ಹೊಂದಿಕೊಂಡಿರುವ ಪರಿಸರ. ಎಲ್ಲಾ ಮಾದರಿ ಕೃಷಿಯನ್ನ ಇದೊಂದೇ ಜಿಲ್ಲೆಯಲ್ಲಿ ಕಾಣಬಹುದು.

ಪುಷ್ಪಗಿರಿ ಸಂಸ್ಥಾನ ಮಠದಲ್ಲಿ ರೈತರಿಗೆ ನೈಸರ್ಗಿಕ ಕೃಷಿ ತರಬೇತಿ ನೀಡುವ ಕಾರ್ಯಗಾರ ಅಭಿನಂದನಾರ್ಹ. ಸ್ವತಃ ಕೃಷಿಯನ್ನ ಕೈಗೊಳ್ಳುವ ಶ್ರೀಗಳ ನೇತೃತ್ವಕ್ಕೆ ಅಭಾರಿ. ನಾಲ್ಕು ದಿನಗಳ ಶಿಬಿರಕ್ಕೆ ಸಹಕರಿಸಿ, ಎಲ್ಲಾ ನೆರವು ನೀಡುತ್ತಿರುವುದು ಸಂತಸ. ಜೊತೆಗೆ ನಮ್ಮ ತಾಲ್ಲೂಕಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ.
ರೈತ ಹೋರಾಟಕ್ಕೆ ತನ್ನದೇ ಆದ ಕೊಡುಗೆ ನೀಡಿದವರು ಪ್ರೊ ನಂಜುಂಡಸ್ವಾಮಿ. ರಾಜ್ಯದಲ್ಲಿ ಸಂಚಲನ ಮೂಡಿಸಿ ಸಂಘಟನೆಯ ಮೂಲಕ ಆಂದೋಲನದ ಗತಿಯನ್ನೇ ಬದಲಾಯಿಸದರು. ಮುಂದಿನ ಪೀಳಿಗೆಗೆ ಕೃಷಿಯನ್ನ ಉಳಿಸಿ, ಅರಿವು ಮೂಡಿಸುವ ಕೆಲಸ ಜರೂರಿರುವಾಗ ಕಾರ್ಯಾಗಾರ ನಡೆಸುತ್ತಿರುವುದು, ಅದರಲ್ಲೂ, ಪದ್ಮಶ್ರೀ ಸುಭಾಷ್ ಪಾಳೇಕರ್ ಅವರ ನೇತೃವದಲ್ಲಿ ನಡೆಯುತ್ತಿರುವುದು ಸಮಂಜಸ.
ಕೃಷಿಯಲ್ಲಿ ಗೊಬ್ಬರ, ರಾಸಾಯನಿಕ ಬಳಸುವುದನ್ನು ತಪ್ಪಿಸಬೇಕಿದೆ. ಆರೋಗ್ಯ ಸುಧಾರಿಸಲು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕಿದೆ. ತರಬೇತಿಯ ಜೊತೆಗೆ ಅಭಿವೃದ್ಧಿ ಪಡಿಸುವುದು ಮುಖ್ಯ. ಕೃಷಿಯಲ್ಲಿ ಅಳವಡಿಸಿಕೊಂಡು ಮಾದರಿಯಾಗುವುದು ಅಗತ್ಯವಿದೆ ಎಂದರು.

ಹಿರಿಯ ಮುಖಂಡರಾದ ಹೊನ್ನೂರು ಪ್ರಕಾಶ್ ಮಾತನಾಡಿ, “ರೈತರ ಭೂಮಿಗಳನ್ನು ಕಸಿದುಕೊಂಡು ಕಾರ್ಪೋರೆಟ್ ಕುಳಗಳಿಗೆ ನೀಡುವ ಹುನ್ನಾರವನ್ನು ಸರ್ಕಾರಗಳು ನಡೆಸುತ್ತಿವೆ. ನಮ್ಮ ಭೂಮಿ, ನಮ್ಮ ಪರಿಸರ ಉಳಿಸಿಕೊಳ್ಳುವುದು ನಮ್ಮೆಲ್ಲರ ಹಕ್ಕು. ರೈತರು ಆಳುವ ವರ್ಗಗಳಿಗೆ ಭಾಗದೆ ತಮ್ಮ ತನ ಉಳಿಸಿಕೊಳ್ಳಲು ಮುಂದಾಗಬೇಕು. ನಾಟಿ ಬೀಜ ಉಳಿಸಿಕೊಳ್ಳಲು. ಬೀಜ ಕಾಯ್ದೆ ವಿರುದ್ಧ ಹೋರಾಟ ನಡೆಸಬೇಕು”.
ರೈತರು ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡುವ ಮೂಲಕ ಮಾರುಕಟ್ಟೆ ಸೃಷ್ಟಿಸಬೇಕು. ಕಚ್ಚಾ ಪದಾರ್ಥ ಮಾರಾಟದಿಂದ ಲಾಭ ಕಾಣಲು ಸಾಧ್ಯವಿಲ್ಲ. ಮಾರುಕಟ್ಟೆ ಸೃಷ್ಟಿಸುವ ಮೂಲಕ ರೈತರಿಗೆ ಲಾಭಧಾಯಕ ವಾತಾವರಣ ಸೃಷ್ಟಿ ಮಾಡಬೇಕು. ತನ್ನ ಮನೆಗೆ ಬೇಕಾದುದನ್ನು ಬೆಳೆದುಕೊಳ್ಳುವಂತೆ ಆಗಬೇಕು, ಇದರ ಜೊತೆಗೆ ಸ್ವಾವಲಂಬಿ ಆಗುವ ಮೂಲಕ ರೈತರ ಜೀವನ ಸುಧಾರಿಸುವ ಕೆಲಸ ಆಗಬೇಕಿದೆ.
ಈ ಸುದ್ದಿ ಓದಿದ್ದೀರಾ? ಕೃಷಿ ಕೇವಲ ಓದಲ್ಲ, ಅದುವೇ ಅನುಭವಗಳ ಬುತ್ತಿ: ಜಿಲ್ಲಾಧಿಕಾರಿ ಲತಾಕುಮಾರಿ

ಈ ಎಲ್ಲದರ ನಿಟ್ಟಿನಲ್ಲಿ ನೈಸರ್ಗಿಕ ಕೃಷಿ ಕೈಗೊಳ್ಳುವುದು ಪರ್ಯಾಯ ಮಾರ್ಗ. ಯುವ ಜನತೆ ಕೃಷಿ ಬಿಟ್ಟರೆ ಕಾರ್ಪೋರೆಟ್ ಕುಳಗಳ ಪಾಲಾಗಲಿದೆ ಕೃಷಿ ಭೂಮಿ. ಕೃಷಿಯಲ್ಲಿ ಏಕ ಬೆಳೆ ಆಧಾರಿತವಾಗಿ ಇರದೆ, ಬಹು ಬೆಳೆ ಆಧಾರಿತವಾಗಿ ನಡೆಸಬೇಕು. ಅದರಲ್ಲೂ, ನೆರೆಹೊರೆಯವರ ಆಹಾರದ ಮೂಲವಾಗಿಯೂ ಪರಿವರ್ತನೆ ಹೊಂದಬೇಕಿದೆ. ರೈತ ಯುವಕರಿಗೆ ಹೆಣ್ಣು ಕೊಡಲ್ಲ ಎನ್ನುವ ಅಪವಾದವನ್ನು ತೊಡೆಯುವ ನಿಟ್ಟಿನಲ್ಲಿ ಮುಂದಾಗಿ, ಆರ್ಥಿಕವಾಗಿ ಶಕ್ತಿ ವೃದ್ಧಿಪಡಿಸಿಕೊಳ್ಳಬೇಕಿದೆ.
ಕಾರ್ಯಾಗಾರದ ಲೈವ್ ವೀಕ್ಷಿಸಿ: https://www.youtube.com/live/EdQWnDCPRWI?si=ZUefcWFEBE2ಸಂನ್ಸ್ಲಕ್
ರಾಸಾಯನಿಕ ಕೃಷಿಯಿಂದ ಭೂಮಿ ಹಾಳಾಗಿದೆ, ತಿನ್ನುವ ಆಹಾರ ವಿಷವಾಗಿದೆ, ಅಂತರ್ಜಲ ಕುಸಿದಿದೆ ಇದರಿಂದಾಗಿ, ರೈತ ಸಂಸ್ಕೃತಿ ಕೆಡಲಿದೆ. ಭೂಮಿ, ಪರಿಸರ ಉಳಿಸಬೇಕಾದ ಜವಾಬ್ದಾರಿ ನಮ್ಮಗಳ ಮೇಲಿದೆ. ಒಳ್ಳೆಯ ಆಹಾರ ಬೆಳೆದುಕೊಡುವ ಹೊಣೆಗಾರಿಕೆ ನಮ್ಮೆಲ್ಲರದ್ದು. ಸಮಾಜದ ಸ್ವಾಸ್ತ್ಯ ಕಾಪಾಡಲು ಆರೋಗ್ಯಕರ ಕೃಷಿ ಪದ್ಧತಿ ಕೈಗೊಳ್ಳಬೇಕು. ಸರ್ಕಾರದ ಮೇಲೆ ಎಲ್ಲದಕ್ಕೂ ಅವಲಂಬನೆ ಆಗದೆ, ಪ್ರಶ್ನೆ ಮಾಡುವುದರ ಜೊತೆಗೆ ನಮ್ಮಗಳ ಕಾಯಕ ಮಾಡುವುದು ಅತ್ಯಗತ್ಯ ಎಂದು ಹೇಳಿದರು.





