ಅನುಭವದಲ್ಲಿದ್ದವರನ್ನ ದರಕಾಸ್ತು ರದ್ದುಗೊಳಿಸಿ, ಕಳೆದ 50 ವರ್ಷಗಳಿಂದ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಕಾರೆಕೆರೆ ಕಾವಲುಗ್ರಾಮದ 58 ಭೂಹೀನ ದಲಿತ ಕುಟುಂಬಗಳಿಗೆ ಮಂಜೂರು ಮಾಡಲು ಒತ್ತಾಯಿಸಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆಯನ್ನು ಬುಧವಾರ ನಡೆಸಲಾಯಿತು.
ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿಯ ಕಾರೆಕೆರೆ ಕಾವಲಿನ ಸರ್ವೆ ನಂಬರ್ 48, 49, 50, 78, 79, 80, 81, 82, 83, 84, 85, 86, 87, 90, 91, 92, 93, 94, 95, 96, 104, 107, 108, ಹೊಸೂರು ಗ್ರಾಮದ ಸರ್ವೆ ನಂಬರ್ 11, 12, ಹಾಗೂ ಜುಂಜನಹಳ್ಳಿ ಗ್ರಾಮದ ಸರ್ವೆ ನಂಬರ್ 20, 27, 28, 30 ರಲ್ಲಿ ಅನುಭವದಲ್ಲಿ ಇಲ್ಲದವರ ದರಕಾಸ್ತು ಮಂಜೂರು ರದ್ದುಗೊಳಿಸಿ, ಕಳೆದ 60 ವರ್ಷಗಳಿಂದ ಇದೇ ಸರ್ವೆ ನಂಬರ್‌ಗಳಲ್ಲಿ ಭೂಮಿ ಸಾಗುವಳಿ ಮಾಡುತ್ತಿರುವ ಕಾರೆಕೆರೆ ಕಾವಲು ಗ್ರಾಮದ 47 ಭೂಹೀನ ದಲಿತ ಕುಟುಂಬಗಳಿಗೆ ಭೂಮಿ ಮಂಜೂರು ಮಾಡಲು ಕೋರಿ ಮನವಿಯನ್ನು ಮಾಡಲಾಗಿದೆ ಎಂದು ರೈತ ಪ್ರಾಂತ ಸಂಘದ ಹೆಚ್. ಆರ್ ನವೀನ್ ಕುಮಾರ್ ತಿಳಿಸಿದರು.

ಹಾಸನ ತಾಲ್ಲೂಕು ಶಾಂತಿಗ್ರಾಮ ಹೋಬಳಿಯ ಕಾರೆಕೆರೆ ಕಾವಲಿನ ಮೇಲ್ಕಾಣಿಸಿದ ಸರ್ವೆ ನಂಬರ್‌ಗಳಲ್ಲಿ 246 ಎಕರೆ ಭೂಮಿಯನ್ನು 1966 ರಲ್ಲಿ 30 ದಲಿತ ಕುಟುಂಬಗಳಿಗೆ ಮಂಜೂರು ಮಾಡಲಾಗುತ್ತದೆ. ಇದರಲ್ಲಿ ಕಾರೆಕೆರೆ ಕಾವಲಿನಲ್ಲಿ ವಾಸವಿದ್ದು ಭೂಮಿಯನ್ನು ಸ್ವಾದೀನಾನುಭವದಲ್ಲಿ ಉಳುಮೆ ಮಾಡಿದ ಕುಟುಂಬಗಳು ಕೇವಲ 10 ಮಾತ್ರ. ಇನ್ನುಳಿದ ವಾಸವಿಲ್ಲದ 20 ಕುಟುಂಬಗಳು ಅಂದಿನಿಂದ ಇಲ್ಲಿಯವರೆಗೂ ಈ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡು ಉಳುಮೆ ಮಾಡಿರುವುದಿಲ್ಲ. ಅದೇ ಪ್ರದೇಶದಲ್ಲಿ ಕಳೆದ 60 ವರ್ಷಗಳಿಂದ ಕಾರೆಕೆರೆ ಕಾವಲು ಗ್ರಾಮದ 47 ಭೂಹೀನ ದಲಿತ ಕುಟುಂಬಗಳು ಭೂಮಿಯಲ್ಲಿ ಸ್ವಾದೀನಾನುಭವದಲ್ಲಿದ್ದು ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದಾರೆಂದು ಡಿ. ಎಚ್. ಎಸ್ ಮುಖಂಡ ಪೃಥ್ವಿ ತಿಳಿಸಿದರು.
ಈ ಭೂಮಿಯಲ್ಲಿ ಸ್ವಾಧೀನಾನುಭವದಲ್ಲಿ ಇಲ್ಲದವರ ಮತ್ತು ಈ ಗ್ರಾಮದಲ್ಲಿ ವಾಸವಿಲ್ಲದವರ ಮೂಲ ಮಂಜೂರಾತಿಯನ್ನು ರದ್ದುಗೊಳಿಸಿ, ಹಾಲಿ ಅನುಭವದಲ್ಲಿದ್ದು ಸಾಗುವಳಿ ಮಾಡುತ್ತಿರುವ ಕಾರೆಕೆರೆ ಕಾವಲು ಗ್ರಾಮದ 47 ಕುಟುಂಬಗಳಿಗೆ ಹೊಸದಾಗಿ ಭೂ ಮಂಜೂರು ಮಾಡಿಕೊಡಬೇಕೆಂದು ಈ ಹಿಂದೆ ಹಲವು ಬಾರಿ ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೆ ರೈತರು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಹಲವು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದ ಅಡಿಯಲ್ಲಿ ಅರ್ಜಿ ನಮೂನೆ 50, 53, ಮತ್ತು 57ನ್ನು ಸಲ್ಲಿಸಿದ್ದಾರೆ. ದಿ. 6.8.2002 ರಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಪತ್ರ ಸಂಖ್ಯೆ ಎಲ್‌ಎನ್‌ಡಿ(1)797:01-02 ಮೈಸೂರು ವಿಭಾಗೀಯ ಕಛೇರಿಗೆ ದರಕಾಸ್ತು ಮಂಜೂರಿ ರದ್ದುಗೊಳಿಸುವ ಕುರಿತು ಪತ್ರ ಬರೆಯಲಾಗಿದ್ದು, ವಿಭಾಗೀಯ ಕಛೇರಿಯಿಂದ ಕೆಲವು ದಾಖಲಾತಿಗಳ ಕುರಿತು ಸ್ಪಷ್ಟೀಕರಣ ಕೇಳಿ ದಿ. 3.9.2022ರಲ್ಲಿ ಹಾಸನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಕುರಿತು ಜಿಲ್ಲಾಡಳಿತದಿಂದ ಸಕಾರಾತ್ಮಕ ಸ್ಪಂದನೆ ದೊರೆತಿರುವುದಿಲ್ಲ.
ಪ್ರಸ್ತುತ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹಾಲಿ ಉಳುಮೆ ಮಾಡುತ್ತಿರುವ ದಲಿತರನ್ನು ಈ ಭೂಮಿಯಿಂದ ವಕ್ಕಲೆಬ್ಬಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆ ಯಾವ ಆದಾಯದ ಮೂಲವೂ ಇಲ್ಲದೇ, ಇದೇ ಭೂಮಿಯನ್ನು ನಂಬಿ ಕೃಷಿ ಮೂಲಕ ಬದುಕು ಸಾಗಿಸುತ್ತಿರುವ ಕಾರೆಕೆರೆ ಕಾವಲು ಗ್ರಾಮದ 46 ದಲಿತ ಕುಟುಂಬಗಳಿಗೆ ದೀರ್ಘಕಾಲದ ಭೂಸ್ವಾಧೀನಾನುಭವ ಮತ್ತು ಸಾಗುವಳಿಯನ್ನು ಪರಿಗಣಿಸಿ, ಸ್ಥಳಪರಿಶೀಲನೆ ನಡೆಸಿ, ಮೂಲ ಮಂಜೂರಾತಿಯನ್ನು ರದ್ದುಗೊಳಿಸಿ, ಹಾಲಿ ಸಾಗುವಳಿದಾರರಿಗೆ ಭೂಮಿಯನ್ನು ಮಂಜೂರು ಮಾಡಬೇಕಾಗಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಮತ್ತು ದಲಿತ ಹಕ್ಕುಗಳ ಸಮಿತಿ – ಕರ್ನಾಟಕ (ಡಿಹೆಚ್‌ಎಸ್) ಹಾಸನ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ 47 ಕುಟುಂಬಗಳು ತಮ್ಮ ಕಛೇರಿಯ ಎದುರು ದಿ. 4ರಂದು ಪ್ರತಿಭಟನೆ ನಡೆಸುವ ಮೂಲಕ ಮನವಿ ಮಾಡಿಕೊಳ್ಳಲಾಗಿದೆ ಎಂದು ಸಂಘಟನೆಯ ಮುಖಂಡರು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಶಾಲಾ ಮೈದಾನ; ಯುವಕನ ಮೃತ ದೇಹ ಪತ್ತೆ
ಈ ವೇಳೆ ಹೆಚ್.ಆರ್. ನವೀನ್ ಕುಮಾರ್, ಎಂ.ಜಿ. ಪೃಥ್ವಿ, ಹೆಚ್. ಸ್ವಾಮಿ, ಪಾಂಡುರಂಗ, ಕರ್ನಾಟಕ ಪ್ರಾಂತ ರೈತ ಸಂಘ, ಕಾರೆಕೆರೆ ಕಾವಲು ಗ್ರಾಮ ಘಟಕ ದೇವರಾಜು, ಸುನಿಲ್, ರವಿಕುಮಾರ್, ಧರ್ಮ, ಮೀನಾಕ್ಷಿ, ಮೂರ್ತಿ ಪ್ರಕಾಶ್, ಸುರೇಶ್, ಬಾಬು, ಶಾಂತ ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.





