ತಾಯಿ ಚಿರತೆಯಿಂದ ಬೇರ್ಪಟ್ಟಿದ್ದ ಮೂರು ಮರಿಗಳನ್ನು ಮರಳಿ ತಾಯಿ ಮಡಿಲಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದು, ಅರಣ್ಯ ಇಲಾಖೆಯ ಕಾರ್ಯವೈಖರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಹಾಸನದ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಗ್ರಾಮದ ಚೆಲುವೇಗೌಡ ಎಂಬುವವರ ಕಬ್ಬಿನ ತೋಟದಲ್ಲಿ ಅ. 2 ರಂದು ಚಿರತೆಯೊಂದು ಮೂರು ಮರಿಗಳಿಗೆ ಜನ್ಮ ನೀಡಿತ್ತು. ಕಬ್ಬು ಕಟಾವು ಕಾರ್ಯ ಆರಂಭಿಸಿದಾಗ ತಾಯಿ ಚಿರತೆ ಹೆದರಿ ಮರಿಗಳನ್ನು ಅಲ್ಲೇ ಬಿಟ್ಟು ಹೋಗಿತ್ತು. ಕಬ್ಬು ಕಟಾವು ಕಾರ್ಮಿಕರು ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಬ್ ಕುಮಾರ್ ಹಾಗೂ ಡಿಆರ್‌ಎಫ್‌ಒ ಶಂಕರ್, ಸಿಬ್ಬಂದಿ ಮರಿಗಳ ಆರೈಕೆ ಮಾಡಿ ತಾಯಿ ಜೊತೆಗೆ ಸೇರಿಸಿದ್ದಾರೆ.


ಕಬ್ಬಿನ ಗದ್ದೆಯಿಂದ ಮನೆಗೆ ತೆಗೆದುಕೊಂಡು ಹೋಗಿದ್ದ ಮರಿ ಚಿರತೆಗಳನ್ನು ವಶಕ್ಕೆ ಪಡೆದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮರದ ಪೆಟ್ಟಿಗೆಯೊಂದರಲ್ಲಿ ಹಾಕಿ ತಾಯಿ ಚಿರತೆ ಬರಬಹುದೆಂಬ ನಿರೀಕ್ಷೆಯಿಂದ ಜನ್ಮ ಪಡೆದ ಸ್ಥಳದಲ್ಲೇ ಇಟ್ಟಿದ್ದರು. ಕರುಳ ಕುಡಿಗಳ ಚೀರಾಟ ಶಬ್ದ ಕೇಳಿದ್ದ ತಾಯಿ ಚಿರತೆ ಮೊದಲ ದಿನ ಬಂದು ಒಂದು ಮರಿಯನ್ನು ಎತ್ತಿಕೊಂಡು ಹೋಗಿತ್ತು. ಅದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಉಳಿದ ಎರಡು ಮರಿಗಳಿಗೆ ನಿಪ್ಪಲ್ ಸಹಾಯದಿಂದ ಹಾಲುಣಿಸಿ ಪೋಷಿಸಿದ್ದರು. ಮತ್ತೆ ಎರಡು ದಿನಗಳ ಬಳಿಕ ಬಂದಿದ್ದ ಚಿರತೆ ಮತ್ತೊಂದು ಮರಿಯನ್ನು ಹೊತ್ತೊಯ್ದಿದೆ. ಉಳಿದ ಒಂದು ಮರಿಯನ್ನು ಕರೆದೊಯ್ಯಲು ಆರು ದಿನಗಳಾದರೂ ಬರಲಿಲ್ಲ. ಹುಟ್ಟಿದ ಆರು ದಿನವಾದರೂ ತಾಯಿ ಚಿರತೆ ಜೊತೆಗೆ ಸೇರದ ಮರಿಯನ್ನು ಹೇಗಾದರೂ ಮಾಡಿ ಸೇರಿಸಬೇಕೆಂದು ಪಣ ತೊಟ್ಟಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ತಾಯಿ ಚಿರತೆಯ ಜಾಡು ಹಿಡಿದು ಹೊರಟರು. ಅದಕ್ಕಾಗಿ ಭದ್ರಾ ಅರಣ್ಯದಿಂದ ಶ್ವಾನದಳವನ್ನು ಕರೆಸಿಕೊಂಡರು.
ಇದನ್ನೂ ಓದಿ: ಹಾಸನ | ಸಮೀಕ್ಷೆ ವೇಳೆ ಗಣತಿದಾರರಿಂದ ಲೋಪ; ಕ್ರಮಕ್ಕೆ ಮನವಿ
ಚಿರತೆ ಹೆಜ್ಜೆಯ ಜಾಡು ಹಿಡಿದ ಶ್ವಾನ ಒಂದು ಕಿ.ಮೀ. ವರೆಗೆ ಸಾಗಿ ನಿಂತಿತು. ನಂತರ ಥರ್ಮಲ್ ಡೋನ್ ಹಾರಿಸಿ ಎರಡು ಮರಿಗಳ ಜೊತೆ ತಾಯಿ ಚಿರತೆ ಇರುವುದನ್ನು ಪತ್ತೆ ಹಚ್ಚಿದರು. ಅಲ್ಲೇ ಹತ್ತಿರದಲ್ಲಿ ಕಡಿಮೆ ಹಾಲುಣಿಸಿ ಮರಿಯನ್ನು ಬಿಡಲಾಗಿತ್ತು. ಮಧ್ಯರಾತ್ರಿ ಮರಿಯ ಕಿರುಚಾಟ ಕೇಳಿದ ತಾಯಿ ಚಿರತೆ ಅಲ್ಲಿಗೆ ಬಂದು ಅದನ್ನು ಎತ್ತಿಕೊಂಡು ಹೋಗಿದೆ. ತಾಯಿ ಚಿರತೆ ಹಾಗೂ ಮರಿಗಳನ್ನು ಒಂದು ಗೂಡಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಒಂದು ವಾರಗಳ ಕಾಲ ನಡೆಸಿದ ಪ್ರಯತ್ನ ಕೊನೆಗೂ ಸಫಲಗೊಂಡಿದೆ.





