ಸ್ವಚ್ಛತೆ ಎಲ್ಲರಿಗೂ ಪ್ರೇರಣೆಯಾಗಬೇಕು ರಾಷ್ಟ್ರಕ್ಕಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ಪ್ರಾಣ ತೆತ್ತ ಮಹನೀಯರ, ಹುತಾತ್ಮರ ಸ್ಮರಣಾರ್ಥ ಸ್ವಚ್ಛತೆ ಮಾಡುವ ಮೂಲಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರೀಕರೂ ಸಹ ಸಂವಿಧಾನದ ಆಶಯಗಳಿಗನುಗುಣವಾಗಿ ಕರ್ತವ್ಯಗಳನ್ನು ಪಾಲಿಸಬೇಕು ಎಂದು ಹಾಸನದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿರವರು ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಹಾಸನ ಇವರುಗಳ ಸಹಯೋಗದಲ್ಲಿ ಹುತಾತ್ಮರ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಕಾರ್ಯಕ್ರಮ ಮತ್ತು ಬಂಧಿವಾಸಿಗಳಿಗೆ ಆಧುನಿಕ ಹೈನುಗಾರಿಕೆ ಮತ್ತು ಮೇವು ಅಭಿವೃದ್ಧಿ ಕುರಿತು ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಕಾರಾಗೃಹದ ಆವರಣವನ್ನು ಸ್ವಚ್ಛತೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದಲ್ಲಿ ಉತ್ತಮ ಹಾಗು ಸ್ವಚ್ಛ ಪರಿಸರದ ಅವಶ್ಯಕತೆಯಿದ್ದು ನಮ್ಮ ಸ್ವಚ್ಛತೆಯನ್ನು ನಾವೇ ಕಾಪಾಡಿಕೊಳ್ಳಬೇಕು ಜೊತೆಗೆ ನಮ್ಮ ಈ ಕಾರ್ಯವು ಇತರರನ್ನು ಪ್ರೇರೇಪಿಸಿ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವಂತಾಗಬೇಕು. ಸ್ವಚ್ಛತೆಯನ್ನು ಕೇವಲ ಪಾಲಿಕೆಗಳು, ಪೌರಾಡಳಿತ ಇಲಾಖೆಗಳು ಮಾತ್ರವೇ ಮಾಡುವಂತದ್ದಲ್ಲ ಅದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ. ನಾವು ಯಾರೊಬ್ಬರ ನೆರವನ್ನು ಕಾಯದೆ ನಮ್ಮ ನಮ್ಮ ಸುತ್ತಲಿನ ಪರಿಸರವನ್ನು ನಾವೇ ಸ್ವಚ್ಚವಾಗಿಟ್ಟುಕೊಳ್ಳಬೇಕು ಈ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಬೇಕಾದುದು ಅವಶ್ಯಕ ಇದೆ ಹುತಾತ್ಮರಿಗೆ ಹಾಗೂ ದೇಶಕ್ಕೆ ಸ್ವಚ್ಚತಾ ಕಾರ್ಯವನ್ನು ಮಾಡುವ ಮೂಲಕ ಗೌರವವನ್ನು ಸಮರ್ಪಿಸಿದಂತಾಗುತ್ತದೆ ಮತ್ತು ನಮ್ಮಸಂವಿಧಾನಿಕ ಕರ್ತವ್ಯಗಳನ್ನು ಪಾಲನೆ ಮಾಡಿದಂತಾಗುತ್ತದೆ ಎಂದು ತಿಳಿಸಿದರು.
ಕಾರಾಗೃಹದ ಬಂಧಿವಾಸಿಗಳು ಆಧುನಿಕ ಹೈನುಗಾರಿಕೆಯ ತರಬೇತಿ ಪಡೆಯುವ ಮೂಲಕ ಬಿಡುಗಡೆಯ ನಂತರದಲ್ಲಿ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಆಶಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ ಜೆ ಎಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಕೆ.ಎಂ.ಪುಟ್ಟಸ್ವಾಮಿರವರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂಧಿವಾಸಿಗಳಿಗೆ ಹಲವಾರು ಸುಧಾರಣಾ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತಿದ್ದು ಬಂಧಿಖಾನೆ ಗಳು ಶಿಕ್ಷಾ ಕೇಂದ್ರಗಳಾಗದೆ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ ಇದರ ಉಪಯೋಗವನ್ನು ಬಂಧಿವಾಸಿಗಳೂ ಪಡೆದುಕೊಳ್ಳಬೇಕು ಕೆಟ್ಟ ಘಳಿಗಳಲ್ಲಿ ಆಗಿರುವ ತಪ್ಪುಗಳನ್ನು ಮರೆತು ಹೊಸ ಜೀವನ ನಡೆಸಲು ಮುಂದಾಗಬೇಕು ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ | ಕಾಡಾನೆ ಸಮಸ್ಯೆ ಪರಿಹಾರಕ್ಕಾಗಿ ಸಮನ್ವಯ ಸಮಿತಿ ರಚನೆ
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕರಾದ ಡಾ. ಆರ್.ವಿ. ಕೊಟ್ಟೂರ ರವರು ಮಾತನಾಡಿ, ಆಧುನಿಕ ಹೈನುಗಾರಿಕೆಯನ್ನು ಮಾಡಿದಲ್ಲಿ ಸ್ವಾವಲಂಬಿಗಳಾಗಿ ಬದುಕಬಹುದು ಮತ್ತು ದೇಶದ ಆರ್ಥಿಕ ಪ್ರಗತಿಯು ಕೂಡಾ ಅಭಿವೃದ್ಧಿಯಾಗಲಿದೆ ಎಂದು ತಿಳಿಸಿದರು.





