ಹೆಲಿಕಾಪ್ಟರ್‌ನಲ್ಲಿ ಪ್ರವಾಸ ಮಾಡಲು ಸಂಸದ ಶ್ರೇಯಸ್ ಪಟೇಲ್ ಪೌರ ಕಾರ್ಮಿಕರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ವಿಶೇಷ ಪ್ರವಾಸದಲ್ಲಿ ನಗರದ ಸ್ವಚ್ಛತೆಗೆ ದಿನರಾತ್ರಿ ಶ್ರಮಿಸುತ್ತಿರುವ ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ.
ನಗರದ ಹೊಳಪಿಗಾಗಿ ಶ್ರಮಿಸುವ ಈ “ಮೌನ ಯೋಧರ” ಸೇವೆಗೆ ಕೃತಜ್ಞತೆಯ ಸೂಚಕವಾಗಿ, ನಾಲ್ವರು ಪೌರ ಕಾರ್ಮಿಕರಿಗೆ ಹೆಲಿಕಾಪ್ಟರ್ ಪ್ರವಾಸದ ಅವಕಾಶ ನೀಡಿದ್ದಾರೆ. ಆಕಾಶದಲ್ಲಿ ಹಾರಾಡಿದ ಹೆಲಿಕಾಪ್ಟರ್ ಪ್ರವಾಸವು ಕೇವಲ ಪ್ರವಾಸವಲ್ಲ, ಪೌರ ಕಾರ್ಮಿಕರ ಬೆವರಿನ ಬೆಲೆಗೆ ಸಲ್ಲಿಸಿದ ನಮನವಾಗಿದೆ.
ಇದನ್ನೂ ಓದಿ: ಹಾಸನ | ಸಮೀಕ್ಷೆ ವೇಳೆ ಗಣತಿದಾರರಿಂದ ಲೋಪ; ಕ್ರಮಕ್ಕೆ ಮನವಿ
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, “ನಮ್ಮ ನಗರ ಸ್ವಚ್ಛತೆಯ ನಿಜವಾದ ಹೀರೋಗಳು ಪೌರ ಕಾರ್ಮಿಕರು. ಅವರಿಗೆ ತಲೆಬಾಗುವುದು ನನ್ನ ಗೌರವ. ಆಗಸದಿಂದ ಹಾಸನ ನಗರವನ್ನು ನೋಡಿದ ಅವರ ಮುಖದಲ್ಲಿ ಕಂಡ ಸಂತೋಷ ನನ್ನ ಜೀವನದ ಅತ್ಯಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ” ಎಂದು ಹೇಳಿದ್ದಾರೆ.





