ದಲಿತ ಸಾಹಿತ್ಯ ಪರಿಷತ್‌ಗೆ ಸುಮಾರು 500 ವರ್ಷಗಳ ಇತಿಹಾಸ ಇದ್ದರೂ ಕೂಡ ಸಂಘಟನಾತ್ಮಕವಾಗಿ ಹಿಂದುಳಿದಿರುವುದು ಬೇಸರದ ಸಂಗತಿ ಎಂದು ಹೇಳಿದ ಹಿರಿಯ ಸಾಹಿತಿ ಹಾಗೂ ಸಾಮಾಜಿಕ ಚಿಂತಕ ಗುರುಮೂರ್ತಿಯವರು ದಲಿತ ಸಾಹಿತ್ಯ ಪರಿಷತ್‌ಗೆ ಶಕ್ತಿ ತುಂಬಲು ಸಂಘಟನೆ ಬಹಳ ಮುಖ್ಯ ಎಂಬುದನ್ನು ಒತ್ತಿ ಹೇಳಿದರು.
ಹಾಸನ ನಗರದ ಸ್ವಾಭಿಮಾನಿ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ರಾಜ್ಯ ಹಾಗೂ ಜಿಲ್ಲಾ ಘಟಕದಿಂದ ನಡೆದ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದರು.
“ಸಾಹಿತ್ಯಾತ್ಮಕವಾಗಿ ದಲಿತರ ಬದುಕು ಭಾವನೆಗಳನ್ನು ಬರವಣಿಗೆ ಮೂಲಕ ಸಮಾಜಕ್ಕೆ ತಿಳಿಸುವ ಸಲುವಾಗಿ ರೂಪುಗೊಂಡ ದಲಿತ ಸಾಹಿತ್ಯ ಪರಿಷತ್ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಹರಸಾಹಸ ಪಡುವಂತಾಗಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಇದ್ದರೂ ಕೂಡ ಈವರೆಗೆ ರಾಜಕೀಯವಾಗಿ ಹಾಗೂ ಯಾವುದೇ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗಿಲ್ಲ. ಇದಕ್ಕೆ ಸಂಘಟನಾತ್ಮಕವಾಗಿ ಹಿಂದುಳಿದಿರುವುದೇ ಕಾರಣ” ಎಂದು ಹೇಳಿದರು.
“ಹಾಸನ ಜಿಲ್ಲೆಯಲ್ಲಿ ದಲಿತ ಸಾಹಿತ್ಯ ಪರಿಷತ್ ಜವಾಬ್ದಾರಿಯನ್ನು ಓರ್ವ ಮಹಿಳೆಯ ಹೆಗಲಿಗೆ ಹಾಕಿದ್ದು, ಅವರಿಗೆ ಬೆಂಬಲವಾಗಿ ಎಲ್ಲರೂ ನಿಲ್ಲುವ ಮೂಲಕ ಸಹಕಾರ ನೀಡುವ ಅಗತ್ಯವಿದೆ. ದಲಿತ ಸಾಹಿತ್ಯ ಪರಿಷತ್ತನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ ಎಲ್ಲರೂ ಒಂದಾಗಬೇಕಿದೆ. ಹಾಗೆಯೇ ಬಲಗೊಳಿಸುವ ಅಗತ್ಯವೂ ಇದೆ” ಎಂದು ಸಲಹೆ ನೀಡಿದರು.

ದಲಿತ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಐಚನಹಳ್ಳಿ ಕೃಷ್ಣಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ದಲಿತ ಸಾಹಿತ್ಯ ಪರಿಷತ್ ಹುಟ್ಟು ಬೆಳವಣಿಗೆ ಹಾಗೂ ಸಂಘಟನೆ ಸೇರಿದಂತೆ ಇದರಿಂದಾದ ಕಾರ್ಯ ಕ್ರಮಗಳ ಕುರಿತು ಮಾಹಿತಿ ನೀಡಿದರು. ಹಿರಿಯ ದಲಿತ ಮುಖಂಡ ಕೃಷ್ಣದಾಸ್ 11ನೇ ದಲಿತ ಸಾಹಿತ್ಯ ಪರಿಷತ್ ರಾಜ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ತಾಪುರದಲ್ಲಿ ಪಥಸಂಚಲನ ಕಗ್ಗಂಟು: ವಾಗ್ವಾದ ಉಂಟಾಗಿ ಶಾಂತಿಸಭೆ ಮೊಟಕು
ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷೆ ಡಾ.ಸುಮಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಚಂದ್ರಗುಪ್ತ, ಹಿರಿಯ ದಲಿತ ಮುಖಂಡ ಈರೇಶ್ ಹಿರೇಹಳ್ಳಿ, ಎಂ ಕೆ ಕೃಷ್ಣಯ್ಯ, ಶಿಕ್ಷಕಿ ಶಾಂತಮ್ಮ, ಬ್ಯಾಕರವಳ್ಳಿ ವೆಂಕಟೇಶ್ ಹಾಗೂ ದಲಿತ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷರು, ಜಿಲ್ಲಾ ಘಟಕದ ಪದಾಧಿಕಾರಿಗಳು ಸೇರಿದಂತೆ ಸಾಹಿತಿಗಳು, ಕವಿಗಳು ಇದ್ದರು.





