ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಬಲವಂತದ ಭೂಸ್ವಾಧೀನ ವಿರೋಧೀ ಹೋರಾಟಗಾರರನ್ನು ಬಂಧಿಸಿದ ಪೋಲಿಸರ ದೌರ್ಜನ್ಯ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಹಾಗೂ ಕಾರ್ಪೊರೇಟ್ ಬಂಡವಾಳಿಗರ ಪರವಾದ ನೀತಿಯನ್ನು ಖಂಡಿಸಿ ಹಾಸನದಲ್ಲಿ ಗುರುವಾರ (ಜೂ. 26) ನಗರದ ಮಹಾವೀರ ವೃತ್ತದಲ್ಲಿ ಸಿಐಟಿಯು, ಡಿವೈಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ದೇವನಹಳ್ಳಿ ರೈತರ ಹಕ್ಕೊತ್ತಾಯ ಈಡೇರಿಸಿ, ಭೂ ಹೋರಾಟಗಾರರನ್ನು ಬೇಷರತ್ ಬಿಡುಗಡೆ ಮಾಡಿ, ಅಮಾನವೀಯ ದೌರ್ಜನ್ಯ ಎಸಗಿ ಹೋರಾಟ ಹತ್ತಿಕ್ಕಿದ ಪೋಲಿಸರ ಮೇಲೆ ಕ್ರಮಕೈಗೊಳ್ಳಲು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ಸಿಐಟಿಯು ಜಿಲ್ಲಾಧ್ಯಕ್ಷರಾದ ಧರ್ಮೇಶ್ ಮಾತನಾಡಿ, “ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ದೇವನಹಳ್ಳಿ ತಾಲೂಕು, ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂ ಸ್ವಾಧೀನದ ವಿರುದ್ಧ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಿ ಹೋರಾಟಗಾರರನ್ನು ಬಂಧಿಸಿದ್ದಾರೆ. ಸರ್ಕಾರದ ಈ ಕ್ರಮವನ್ನು ಖಂಡಿಸುತ್ತೇವೆ. ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ತಮ್ಮ 1177 ಎಕರೆ ಭೂಮಿ ಉಳಿಸಿಕೊಳ್ಳಲು 1181 ದಿನಗಳಿಂದ ಪ್ರಜಾತಾಂತ್ರಿಕ ಹೋರಾಟ ಮಾಡುತ್ತಿದ್ದರು. ಸರಕಾರ ಅವರ ಇಷ್ಟು ದಿನಗಳ ಹೋರಾಟಕ್ಕೆ, ಒತ್ತಾಯಕ್ಕೆ ಕಿವಿಕೊಡದೇ ಭೂ ಸ್ವಾಧೀನ ಪ್ರಕ್ರಿಯೆಯ ಅಂತಿಮ ಘಟ್ಟಕ್ಕೆ ಕೈ ಹಾಕಿದ ಹಿನ್ನೆಲೆಯಲ್ಲಿ ಜೂನ್ 25 ರಂದು ಈ ಹೋರಾಟ ಬೆಂಬಲಿಸಿ ರಾಜ್ಯದ ಮೂಲೆ ಮೂಲೆಗಳಿಂದ ರೈತ, ಕಾರ್ಮಿಕ, ದಲಿತ, ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯ ತೀರ್ಮಾನದೊಂದಿಗೆ ಶಾಂತಿಯುತ ಪ್ರತಿಭಟನೆ ನಡೆದಿತ್ತು. ಅನ್ನದಾತರ ಬದುಕಿಗೆ ಕೊಳ್ಳಿ ಇಟ್ಟು ಕಾರ್ಪೊರೇಟ್ ಬಂಡವಾಳಿಗರಿಗೆ ಮೃಷ್ಟಾನ್ನ ತಿನ್ನಿಸುವ ಯೋಜನೆಯ ಈ ಸಂಚು ಜನವಿರೋಧಿ ಎಂಬುದು ಎಲ್ಲರ ಒಕ್ಕೊರಲಿನ ಕೂಗಾಗಿತ್ತು” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಸರ್ಕಾರ ತನ್ನ ಭೂ ಸ್ವಾಧೀನ ನೀತಿ ಕೈ ಬಿಡುವವರೆಗೂ ದೇವನಹಳ್ಳಿ ಸಂತೆ ಮೈದಾನದಲ್ಲಿ ಅನಿರ್ಧಿಷ್ಟಾವಧಿ ಕಾಲ ಶಾಂತಿಯುತ ಹೋರಾಟ ಮುಂದುವರಿಸಲು ನಿರ್ಧರಿಸಿದ್ದರು. ಸಂಜೆ ಐದು ಗಂಟೆಯವರೆಗೆ ಬಹುದೊಡ್ಡ ಸಂಖ್ಯೆಯಲ್ಲಿ ಸಭೆ ಸೇರಿದ್ದರಿಂದ ಅಲ್ಲಿ ತನಕ ಏನೂ ಹೇಳದ ಪೊಲೀಸರು ಐದು ಗಂಟೆ ನಂತರ ಪ್ರಜಾಸತ್ತಾತ್ಮಕ ಹೋರಾಟವನ್ನು ಪ್ರತಿಬಂಧಿಸಿ ಹೋರಾಟಗಾರರನ್ನು ಅಮಾನವೀಯವಾಗಿ ಹಿಂಸಿಸಿ ಬಂಧಿಸಿರುವುದು ರಾಜ್ಯ ಸರ್ಕಾರದ ರೈತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ಅಸಮಾಧಾನಗೊಂಡರು.
“ಅಹಿಂದ ಪರ, ರೈತರು, ದಲಿತರು ಹಾಗೂ ಕಾರ್ಮಿಕರ ಪರ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇಂದು ಎಲ್ಲರ ವಿರೋಧಿ ಸರ್ಕಾರ ಎಂದು ತನ್ನ ನಡವಳಿಕೆಯಿಂದಲೇ ಸಾಬೀತು ಪಡಿಸಿಕೊಳ್ಳುತ್ತಿದೆ. ಚನ್ನರಾಯಪಟ್ಟಣದ ರೈತರ ಭೂಮಿ ಪಡೆಯುತ್ತಿರುವುದು ಯಾವುದೊ ಸುಸಜ್ಜಿತವಾದ ಆಸ್ಪತ್ರೆ, ಶಾಲೆ, ಕಾಲೇಜು ಹಾಗೂ ಸಾಮಾಜಿಕ ಹಿತಾಸಕ್ತಿ ಹೊಂದಿರುವ ಕೆಲಸಗಳಿಗಲ್ಲ. ಬದಲಿಗೆ, ಕಾರ್ಪೊರೇಟ್ ವ್ಯಕ್ತಿಗಳ, ಸಂಸ್ಥೆಗಳ ಮನವೊಲಿಸಲು ಕಾರ್ಪೊರೇಟ್ ಮನಸ್ಥಿತಿಗಳಿಗೆ ಮಾರಿಕೊಳ್ಳುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. ಅಲ್ಲದೆ, ಶ್ರಮ ಜೀವಿಗಳ ಕೆಲಸದ ಸಮಯವನ್ನು ಸಹ ಹೆಚ್ಚಿಗೆ ಮಾಡಲು ಸರ್ಕಾರ ಮುಂದಾಗಿದೆ. ಇದೆ ರೀತಿ ಮುಂದುವರಿದರೆ ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರಕ್ಕೂ ಬಂದರು ಆಶ್ಚರ್ಯ ಇಲ್ಲ. ಬಂಧನ ಮಾಡಿರುವ ಹೋರಾಟಗಾರರನ್ನು ತಕ್ಷಣವೇ ಬಿಡುಗಡೆ ಮಾಡಿ ರೈತರ ಜಮೀನುಗಳು ರೈತರಿಗೆ ಉಳಿಯುವಂತೆ ಮಾಡುವ ಮೂಲಕ ವರ್ಷಗಳ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು” ಎಂದು ಒತ್ತಾಯಿಸಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ ಜಿ ಪೃಥ್ವಿ ಮಾತನಾಡಿ, “ರೈತರ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದ್ದು, ತನ್ನ ಭೂಮಿಗಾಗಿ ಹೋರಾಟಕ್ಕಿಳಿದ ರೈತರು ಹಾಗೂ ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯ. ಇನ್ನು ತುರ್ತು ಪರಿಸ್ಥಿತಿ ಯಾಗಿ 50 ವರ್ಷಗಳು ಕಳೆದಿವೆ. ಆ ತುರ್ತು ಪರಿಸ್ಥಿತಿಯ ವಿರುದ್ಧವಾಗಿ ಹೋರಾಡಿದ್ದ ಸಿದ್ದರಾಮಯ್ಯ ಅವರೇ ಈಗ ಮುಖ್ಯಮಂತ್ರಿಯಾಗಿದ್ದರು ಸಹ ರೈತರು ಹಾಗೂ ಹೋರಾಟಗಾರರ ಹಕ್ಕನ್ನು ದಮನ ಮಾಡುವ ರೀತಿ ನಡೆದುಕೊಳ್ಳುತ್ತಿರುವುದು ಅತ್ಯಂತ ಖಂಡನೀಯ ಜನವಿರೋಧಿ ನೀತಿಯಾಗಿದೆ. ಕೇವಲ ಭೂ ಕಬಳಿಸುವವರ ಹಾಗೂ ಹಣವಂತ ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ರಾಜ್ಯ ಸರಕಾರ ನಡೆದುಕೊಳ್ಳುತ್ತಿದ್ದು, ಪೊಲೀಸರೂ ಹಾಗೂ ರಾಜ್ಯ ಸರ್ಕಾರ ತಮ್ಮ ನಿಲುವನ್ನು ಬದಲಿಸಿಕೊಂಡು ರೈತರ ಜಮೀನನ್ನು ರೈತರಿಗೆ ಬಿಟ್ಟು, ಬಂಧನ ಮಾಡಿರುವವರನ್ನು ಬಿಡುಗಡೆ ಮಾಡದೇ ಇದ್ದರೆ ಹೋರಾಟದ ಸ್ವರೂಪ ಬದಲಾಗುತ್ತದೆ” ಎಂದು ಎಚ್ಚರಿಸಿದರು.
ಇದನ್ನೂ ಓದಿ: ಹಾಸನ | ಡಾ. ಬಿ ಆರ್ ಅಂಬೇಡ್ಕರ್‌ರವರು ಕಾರ್ಮಿಕ, ಮಹಿಳಾ ವಿಮೋಚಕರೆಂದರೆ ತಪ್ಪಿಲ್ಲ: ಡಾ. ಶಿವಕುಮಾರ್
ಈ ವೇಳೆ ದಲಿತ ಸಂಘರ್ಷ ಸಮಿತಿ ಮುಖಂಡ ಅಂಬುಗ ಮಲ್ಲೇಶ್, ಕೆಪಿಆರ್‌ಎಸ್ ಜಿಲ್ಲಾ ಉಪಾಧ್ಯಕ್ಷ ಎಚ್ ಎಸ್ ಮಂಜುನಾಥ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಬಿ ಪುಷ್ಪ, ಸಂವಿಧಾನ ಓದು ಅಭಿಯಾನ ರಾಜು ಗೊರೂರು, ಎಸ್ ಎಫ್ ಐ ಮುಖಂಡ ವಿವೇಕ್, ಡಿ ಎಚ್ ಎಸ್ ಸಹ ಸಂಚಾಲಕ ರಾಜು ಸಿಗರನಹಳ್ಳಿ, ಜನವಾದಿ ಮಹಿಳಾ ಸಂಘಟನೆ ಜಯಲಕ್ಷ್ಮಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು, ರೈತರು, ಹೋರಾಟದ ಸಂಗಾತಿಗಳು ಭಾಗಿಯಾಗಿದ್ದರು.
ಪ್ರತಿಭಟನಾ ನಿರತರ ಆಗ್ರಹಗಳು ಈ ಕೆಳಕಂಡಂತಿವೆ…
ಹೋರಾಟಗಾರರ ಬಂಧನವನ್ನು ತೀವ್ರವಾಗಿ ಖಂಡಿಸಿ ಹಾಗೂ ರಾಜ್ಯ ಸರ್ಕಾರದ ಸಂವಿಧಾನ ವಿರೋಧಿ ನಡೆಯನ್ನು ವಿರೋಧಿಸಿ ಜೂನ್ 26 ರಂದು ಹಾಸನದ ಮಹಾವೀರ ವೃತ್ತದಲ್ಲಿ ಸಿಐಟಿಯು, ಕೆಪಿಆರ್‌ಎಸ್, ದಲಿತ ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸುವ ಮುಖಾಂತರ ಈ ಕೆಳಕಂಡಂತೆ ಆಗ್ರಹಿತ್ತೇವೆ.
1) ಫಲವತ್ತಾದ ಭೂಮಿಯಲ್ಲಿ ತಮ್ಮ ಬದುಕು ಕಂಡುಕೊಂಡ ಯಾವುದೇ ರೈತರ ತಂಟೆಗೆ ಬರಬೇಡಿ. ರೈತರ ಭೂಮಿ ರೈತರದ್ದೇ ಆಗಿ ಉಳಿಸಬೇಕು, ಬೇಷರತ್ತಾಗಿ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ರೈತರ ಭೂಮಿಯನ್ನು ಸರ್ಕಾರದ ಯಾವುದೇ ಯೋಜನೆಗೆ ನೀಡಬಾರದು, ಕೂಡಲೇ ಕ್ಯಾಬಿನೆಟ್ ನಿರ್ಣಯ ಮಾಡಬೇಕು.
2) ಬಂಧಿತ ಹೋರಾಟಗಾರರನ್ನು ಯಾವುದೇ ಪ್ರಕರಣಗಳನ್ನು ಹಾಕದೇ ಬೇಷರತ್ ಬಿಡುಗಡೆ ಮಾಡಬೇಕು. ವೈಯಕ್ತಿಕವಾಗಿ ಸಂಘಟನಾತ್ಮಕವಾಗಿ ಆಗಿರುವ ನಷ್ಟವನ್ನು ಸರಕಾರವೇ ತುಂಬಿಕೊಡಬೇಕು.
3) ಅಮಾನವೀಯ ದೌರ್ಜನ್ಯ ಎಸಗಿದ ಪೋಲಿಸರ ಮೇಲೆ ಕ್ರಮಕೈಂಡು, ತನಿಖೆ ನಡೆಸಬೇಕು. ಇನ್ನೆಂದೂ ಹೋರಾಟವನ್ನು ಮುರಿಯುವ ಅಸಾಂವಿಧಾನಿಕ ಕೆಲಸ ಮಾಡಬಾರದು.





